Wednesday, 15 October 2014

ಆಹಾರ ಸಂರಕ್ಷಣೆ, ಬರವಣಿಗೆಯ ಸುಲಭ ಸೂತ್ರ

ಬರವಣಿಗೆಯ ಸುಲಭ ಸೂತ್ರ

ಉತ್ತಮ ಬರವಣಿಗೆಯ ಜೀವಾಳವೆಂದರೆ ಅದರ ಸಂಕ್ಷಿಪ್ತತೆ (brevity). ಈ ನಿಟ್ಟಿನಲ್ಲಿ, ಅನಾವಶ್ಯಕವಾದ repetitionಗಳಿಂದ ದೂರವಿರಬೇಕು.
ಉದಾ: The smoke-filled attic was charged with smoke. (ತಪ್ಪು).
The attic was charged with smoke. (ಸರಿ)
ನಾವು ಸಾಮಾನ್ಯವಾಗಿ ಮಾಡುವ ತಪ್ಪಿನ ಇತರ ನಮೂನೆಗಳನ್ನು ಗಮನಿಸಿ:Red in colour, circular in shape, dangerous in nature, hot water heater, visible to the eye, postpones to later date.... ಇದಕ್ಕೆ ಬದಲಾಗಿ red, circular, dangerous, water heater, visible, postpone ಎಂದಷ್ಟೇ ಉಪಯೋಗಿಸಿದಾಗ, ನಮ್ಮ ಭಾಷೆಗೆ ಮೊನಚು ಮತ್ತು ಹುರುಪು ದೊರಕುತ್ತದೆ.
ಸಂಕ್ಷಿಪ್ತವಾಗಿರುವಂತೆ ಸ್ಪಷ್ಟವಾಗಿರುವುದೂ ಬರವಣಿಗೆಯ ಇನ್ನೊಂದು ಗುಣ. ನಮ್ಮ ವಾಕ್ಯಗಳಲ್ಲಿ modifiers ಸ್ಥಾನಪಲ್ಲಟವಾದಾಗ, ಆ ವಾಕ್ಯಗಳ ಅರ್ಥದಲ್ಲಿ ಗೊಂದಲ ಉಂಟಾಗುತ್ತದೆ. ಹಾಗಾಗಿ, modifiersನ ಸ್ಥಾನಪಲ್ಲಟವಾಗದಂತೆ ಎಚ್ಚರವಹಿಸಬೇಕು.
ಉದಾ: ‘ಕುಡಿದು ವಾಹನ ಚಾಲನೆ ಮಾಡುವವರೇ ಅಪಘಾತಗಳಿಗೆ ಹೆಚ್ಚಾಗಿ ಕಾರಣರಾಗುತ್ತಾರೆ’ ಎಂಬ ವಾಕ್ಯವನ್ನು ಹೇಳುವ ರೀತಿಯೆಂದರೆ Frequently, people who drink and drive cause accidents.
ಅಕಸ್ಮಾತಾಗಿ, ಈ ವಾಕ್ಯದಲ್ಲಿ,Frequently ಎಂಬ modifierನ ಸ್ಥಾನ ಪಲ್ಲಟವಾದರೆ, ವಾಕ್ಯವು ಈ ರೀತಿ ಇರುತ್ತದೆ - people who drink and drive frequently cause accidents, ಇದರ ಅರ್ಥ, ಕುಡಿದು ಹೆಚ್ಚಾಗಿ ವಾಹನ ಚಾಲನೆ ಮಾಡುವವರೇ ಅಪಘಾತಗಳಿಗೆ ಕಾರಣರಾಗುತ್ತಾರೆ. ಈ ಎರಡೂ ವಾಕ್ಯಗಳಲ್ಲಿನ ಅರ್ಥದಲ್ಲಿ ಮೂಲ ವ್ಯತ್ಯಾಸವಿದೆ. ಆದ್ದರಿಂದ, ನಾವು ಈ ಅರ್ಥಸೂಕ್ಷ್ಮವನ್ನು ಗಮನದಲ್ಲಿರಿಸಿಕೊಂಡು ಸಂವೇದನಾಶೀಲರಾಗಿ ಬರೆಯಬೇಕು.
modifiers ನ ವಿಷಯದಲ್ಲಿ, ನಾವು ಎಚ್ಚರವಹಿಸಬೇಕಾದ ಇನ್ನೊಂದು ಸಂಗತಿಯೆಂದರೆ, ವಾಕ್ಯಗಳಲ್ಲಿ ಸಾಮಾನ್ಯವಾಗಿ modifiersನ ಸಂಖ್ಯೆ ಕಡಿಮೆಯಿದ್ದಷ್ಟೂ ವಾಕ್ಯಗಳ ಸ್ಪಷ್ಟತೆ ಮತ್ತು ಪಾರದರ್ಶಕತೆ ಹೆಚ್ಚಿ, ನಮ್ಮ ಸಂವಹನ ಸೂಕ್ಷ್ಮವಾಗಿಯೂ ಮತ್ತು ಪರಿಣಾಮಕಾರಿಯಾಗಿಯೂ ಇರುತ್ತದೆ.
ಉದಾ: Water that has become contaminated needs to be changed. ಈ ವಾಕ್ಯದಲ್ಲಿನ modifier (that has become contaminated) ಅನ್ನು contaminated ಎಂದು ಪರಿವರ್ತಿಸಿದಾಗ, ವಾಕ್ಯವು contaminated water needs to be changed  ಎಂದಾಗುತ್ತದೆ. ಆಗ ಇದು ಇನ್ನಷ್ಟು ಸ್ಪಷ್ಟವಾಗಿ, ನಿರ್ದಿಷ್ಟವಾಗಿ ವಿಷಯವನ್ನು ವ್ಯಕ್ತಪಡಿಸುತ್ತದೆ.
ವಾಕ್ಯಗಳಲ್ಲಿ, ನಾಮಪದಗಳಿಗೆ ಬದಲಾಗಿ ಕ್ರಿಯಾಪದಗಳನ್ನು ಉಪಯೋಗಿಸಿದಾಗ, ನಮ್ಮ ಬರವಣಿಗೆಯಲ್ಲಿ ಅಸಾಮಾನ್ಯ ಮಟ್ಟದ ತೀಕ್ಷ್ಣತೆಯನ್ನು ಸಾಧಿಸಬಹುದು.
ಉದಾ: We made a search of all the facility all afternoon with a hope that we might find some clue as to who sabotaged the tank. ಈ ವಾಕ್ಯದಲ್ಲಿ underline ಮಾಡಿರುವ noun formಗಳಿಗೆ ಬದಲಾಗಿ verb formಗಳನ್ನು ಬಳಸಿದರೆ, ವಾಕ್ಯವು ಏನಾಗುತ್ತದೆ ಎಂಬುದನ್ನು ಗಮನಿಸಿ:
We searched all the facility all afternoon hoping to find some clue as to who sabotaged the tank.
ಮತ್ತೊಂದು ಸೂತ್ರ Active ಮತ್ತು Passive voice ಕುರಿತದ್ದು.
ಇಂಗ್ಲಿಷ್ ಭಾಷೆಯಲ್ಲಿ Activee voice ಮತ್ತು Passive voice ಎಂಬ ಎರಡು ವ್ಯಾಕರಣ ವಿಧಗಳಿವೆ. Activee voice ಕರ್ತೃವಿಗೆ ಒತ್ತು ಕೊಟ್ಟರೆ, Passive voice ಕ್ರಿಯೆಗೆ ಒತ್ತು ಕೊಡುತ್ತದೆ. Active voice ನಲ್ಲಿರುವ ವಾಕ್ಯಗಳು ಸಾಮಾನ್ಯವಾಗಿ ಸಂಕ್ಷಿಪ್ತವಾಗಿಯೂ, ಸತ್ವಯುತವಾಗಿಯೂ ಇರುತ್ತವೆ, ಹಾಗಾಗಿ, ವಿಶಿಷ್ಟ ಸಂದರ್ಭಗಳನ್ನು ಹೊರತುಪಡಿಸಿ, ಸಾಮಾನ್ಯ ಸಂವಹನದಲ್ಲಿ Active voice ಬಳಸಿದರೆ ಉತ್ತಮ. ನಮ್ಮ ಮಿದುಳು Active voiceನ ವಾಕ್ಯಗಳನ್ನು Passive voiceನ ವಾಕ್ಯಗಳಿಗಿಂತ ಬೇಗ ಗ್ರಹಿಸುತ್ತದೆ ಎಂಬುದು ಭಾಷಾ ವಿಜ್ಞಾನಿಗಳ ಅಭಿಪ್ರಾಯ.
ಉದಾ: ಸಾಮಾನ್ಯವಾದ ಸಂದರ್ಭದಲ್ಲಿ, A good score was achieved by the teamಗಿಂತಲೂ The team achieved good score ಎಂಬುದು ಗ್ರಹಿಕೆಗೆ ತಕ್ಷಣ ದಕ್ಕುತ್ತದೆ. ಈ ಸಂದರ್ಭದಲ್ಲಿ, ಅನಾವಶ್ಯಕ voice shift ಬಗ್ಗೆಯೂ ನಾವು ಎಚ್ಚರ ವಹಿಸಬೇಕು.
ಉದಾ: As we pulled up to the burning structure, the children inside could be heard screaming desperately for help. ಈ ವಾಕ್ಯದಲ್ಲಿ, ಮೊದಲನೆಯ ಅರ್ಧ ಭಾಗ Acitve Voice, ಕೊನೆಯ ಅರ್ಧ ಭಾಗ Passive Voiceನಲ್ಲಿದೆ.
As we pulled up to the burning structure, we could hear the children inside screaming desperately for help. ಈ ವಾಕ್ಯವು ಸಂಪೂರ್ಣವಾಗಿ Acitve Voiceನಲ್ಲಿದ್ದು, ಪರಿಣಾಮಕಾರಿಯಾಗಿದೆ.
Run-on sentenceಗಳನ್ನು ಬಳಸಬಾರದು. ಇದರ ಅರ್ಥ ಎರಡು ಸ್ವಯಂ ಪೂರ್ಣ ವಾಕ್ಯಗಳನ್ನು (independent clauses) ಯಾವುದೇ punctuation ಅಥವಾ Conjuctionಇಲ್ಲದೆ ಬರೆಯಬಾರದು.
ಉದಾ:The smoke was thick they had trouble advancing. (ತಪ್ಪು) / The smoke was thick, so they had trouble advancing. (ಸರಿ)
ಉತ್ತಮ ಬರವಣಿಗೆಯ ಮೂಲಮಂತ್ರ Accuracy (ನಿರ್ದಿಷ್ಟ), Brevity (ಸಂಕ್ಷಿಪ್ತ), ಮತ್ತು Clarity (ಸ್ಪಷ್ಟ) ಎಂಬುದನ್ನು ಸದಾ ನೆನಪಿನಲ್ಲಿಡಬೇಕು.

ಆಹಾರ ಸಂರಕ್ಷಣೆ

ಬೇಕಾಗುವ ವಸ್ತುಗಳು: ಒಂದು ತುಂಡು ಹಸಿ ಕೊಬ್ಬರಿ. ಒಂದು ತುಂಡು ಪೂರ್ಣ ಒಣಗಿದ ಕೊಬ್ಬರಿ.
ವಿಧಾನ: ಒಂದು ತುಂಡು ಹಸಿ ಕೊಬ್ಬರಿಯನ್ನು ಆರ್ದ್ರ ಪ್ರದೇಶ (ಬಚ್ಚಲು ಮನೆ) ಹಾಗೂ ಒಂದು ತುಂಡು ಒಣ ಕೊಬ್ಬರಿಯನ್ನು 3-4 ದಿವಸಗಳವರೆಗೆ ಒಣ ಪ್ರದೇಶದಲ್ಲಿಡಿರಿ.
ಪ್ರಶ್ನೆ:  3-4 ದಿವಸಗಳಾದನಂತರ ಎರಡೂ ಕೊಬ್ಬರಿ ತುಂಡುಗಳನ್ನು ಪರೀಕ್ಷಿಸಿರಿ. ಯಾವ ಕೊಬ್ಬರಿ ತುಂಡಿಗೆ ಏನಾಗಿದೆ? ಯಾಕೆ?
ಉತ್ತರ: ಹಸಿ ಕೊಬ್ಬರಿ ತುಂಡಿನ ಮೇಲೆ ಕಪ್ಪು ಕಲೆಗಳು ಗೋಚರಿಸುತ್ತವೆ. ಒಣ ಕೊಬ್ಬರಿ ತುಂಡಿನ ಮೇಲೆ ಕಪ್ಪು ಕಲೆಗಳು ಗೋಚರಿಸುವುದಿಲ್ಲ. ಈ ಕಪ್ಪು ಕಲೆಗಳು ಕೊಬ್ಬರಿ ತುಂಡಿನ ಮೇಲೆ ಬೆಳೆದ ಶಿಲೀಂಧ್ರ. ಗಾಳಿಯಲ್ಲಿ ಅನೇಕ ಬಗೆಯ ಬೀಜಕಗಳು ತೇಲಾಡುತ್ತಿರುತ್ತವೆ. ಬೀಜಕಗಳು ಮೊಳಕೆಯೊಡೆದು ಬೆಳೆಯಲು ನೀರು, ಆಹಾರ, ಆರ್ದ್ರತೆ, ತಾಪಮಾನ ಬಹಳ ಮುಖ್ಯ. ಕೆಲವು ಬೀಜಕಗಳಿಗೆ ಸೂಕ್ತವಾದ ಪರಿಸರ ಸಿಕ್ಕರೆ ಅವು ಬೆಳೆಯಲು ಪ್ರಾರಂಭಿಸುತ್ತವೆ. ಒಣಗಿದ ಪದಾರ್ಥಗಳಲ್ಲಿ ನೀರಿನಂಶ ಇರುವುದಿಲ್ಲ ಹಾಗಾಗಿ ಬೀಜಕಗಳು ಬೆಳೆಯುವುದಿಲ್ಲ. ಆದ್ದರಿಂದ ಒಣಗಿದ ಕೊಬ್ಬರಿಯನ್ನು ಬಹಳ ದಿನಗಳವರೆಗೆ ಸಂರಕ್ಷಿಸಿಡಬಹುದು. ಈ ಶಿಲೀಂಧ್ರವು ವಿಷಕಾರಿಯಾಗಿರುವುದರಿಂದ ಇಂಥ ಕೊಬ್ಬರಿಯನ್ನು ಸೇವಿಸಲೇಬಾರದು.

ಮಿಂಚಂಚೆಯ ಮಾತು

ಈಗಿನ ಜಾಗತೀಕರಣದ ಯುಗದಲ್ಲಿ, e–mail (electronic mail) ಎಂಬುದು written communicationನ ಒಂದು ರೂಪ. ಪ್ರತಿದಿನ, ಜಗತ್ತಿನಾದ್ಯಂತ ಸರಿ ಸುಮಾರು ನಾಲ್ಕು ಬಿಲಿಯನ್ e–mailಗಳು ಪ್ರತಿದಿನವೂ ಸಂವಹನ ರೂಪದಲ್ಲಿ ಬಳಸಲಾಗುತ್ತದೆ.
e–mail ಬರೆಯುವುದು ಕೂಡ ಒಂದು ಕಲೆ. ಸಾಮಾನ್ಯವಾಗಿ, e–mail ಒಂದು ಪುಟ ಅಥವಾ ಒಂದು ಸ್ಕ್ರೀನಿನ ಮಿತಿಯಲ್ಲಿರಬೇಕು ಹಾಗೂ ಅದಕ್ಕೆ ತಕ್ಷಣ ಪ್ರತಿಕ್ರಿಯೆಯನ್ನು ಪಡೆಯುವಂತಹಾ ಗುಣವಿರಬೇಕು. ಪ್ರಭಾವೀ e–mailಗಳ ಕೆಲವು ಲಕ್ಷಣಗಳನ್ನು ಗಮನಿಸಿ.
Subject line:
ಪತ್ರಿಕೆಯ ತಲೆಬರಹ, ಓದುಗರ ಗಮನ ಸೆಳೆಯುವಂತೆ, ಒಳ್ಳೆಯ e–mail ನ subject line ವಿಷಯದ ಬಗ್ಗೆ ಸ್ಪಷ್ಟ ಅರಿವು ನೀಡಬೇಕು. Subject line ಇಲ್ಲದ e–mail ಗಳು ಓದುಗರ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ ಹಾಗೂ ಜಾಹೀರಾತುದಾರರು ಕಳುಹಿಸುವ, ಸೂಕ್ಷ್ಮ ಓದುಗರಿಗೆ ಕಿರಿಕಿರಿ ಉಂಟುಮಾಡುವ spam mails ಎಂದು ಪರಿಗಣಿಸಲ್ಪಟ್ಟು ಡಿಲಿಟ್ ಆಗಿಬಿಡುತ್ತವೆ. ಈ ಕಾರಣಕ್ಕಾಗಿ subject line ಬಗ್ಗೆ ವಿಶೇಷ ಎಚ್ಚರವಹಿಸಬೇಕು. ಕೆಳಗಿನ e–mailಅನ್ನು ಗಮನಿಸಿ:
Subject: Meeting
Dear Alok,
I just wanted to remind you about the meeting we have scheduled next week. Do let me know if you have any questions.
Best wishes,
Akash
ಇದು ಹಲವು ಕಾರಣಗಳಿಂದ ಅಸಮರ್ಪಕ ಸಂವಹನದ (poor communication) ಒಂದು ಉದಾಹರಣೆ. ಇದರಲ್ಲಿನ subject-line ಅನ್ನು ಗಮನಿಸಿದರೆ, Meeting ಎಂದಷ್ಟೆ ಇದೆಯೇ ಹೊರತು, ಅದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಕಂಡುಬರುವುದಿಲ್ಲ. ಅಷ್ಟೇ ಅಲ್ಲದೆ, messageನಲ್ಲಿಯೂ ಸಹ ಯಾವುದೇ ನಿಖರವಾದ ಮಾಹಿತಿ ಇಲ್ಲದಿರುವುದರಿಂದ, ಓದುಗನು ಮತ್ತೆ ಒಂದು e-mail ಅನ್ನು ಬರೆದು meeting ಬಗ್ಗೆಯ ಮುಂದಿನ ವಿವರಗಳನ್ನು ತಿಳಿದುಕೊಳ್ಳಬೇಕು.
ಈಗ ಈ e-mail ಅನ್ನು ನೋಡಿ:
Subject: Reminder of meeting at 10.00 am on policy matters
Dear Alok,
I just wanted to remind you about the meeting we have scheduled for Monday, October 10 at 10.00 am. The venue is the conference hall and we’ll be discussing the new policies regarding the budget allocation for the current financial year.
For further clarification, do get back to me.
Best regards,
Akash.
ಇದನ್ನು ಗಮನಿಸಿದಾಗ, ಇದು ಮೊದಲನೆಯ e-mail ಗಿಂತ ಸುಧಾರಿತ ಮಾದರಿ. ಇಲ್ಲಿ ಓದುಗನಿಗೆ ಯಾವುದೇ ರೀತಿಯ ದ್ವಂದ್ವವಿರುವುದಿಲ್ಲ. ಇದರಲ್ಲಿ ಗಮನಿಸಬೇಕಾದ ಇನ್ನೂ ಒಂದು ವಿಷಯವೆಂದರೆ abbreviation (short form) ಬಳಸಿರುವುದು. Formal message ಆದರೂ ಸಹಾ, we willಗೆ ಬದಲಾಗಿ, short formಗಳನ್ನು e-mail ಬರೆಯುವಾಗ ಉಪಯೋಗಿಸಬಹುದು. ಆದರೆ ಈ ರೀತಿಯ ಸ್ವಾತಂತ್ರ್ಯ ನಮಗೆ formal letter ಬರೆಯುವಾಗ ಇರುವುದಿಲ್ಲ.
ನಾವು ಪತ್ರ ಬರೆಯುವುದಕ್ಕೂ e–mail   ಕಳುಹಿಸುವುದಕ್ಕೂ ಇರುವ ವ್ಯತ್ಯಾಸಗಳಲ್ಲಿ ಒಂದೆಂದರೆ, ಎಷ್ಟೇ e–mail ಗಳನ್ನು ಕಳುಹಿಸಿದರೂ ಅದಕ್ಕಾಗುವ ಖರ್ಚು, ಒಂದು e–mail ಕಳುಹಿಸಿದಷ್ಟೇ. ಹಾಗಾಗಿ, ನಾವು ಯಾರಿಗೇ ಆಗಲಿ e–mail ಕಳುಹಿಸಬೇಕಾದರೆ ಒಂದು ವಿಷಯವನ್ನು ಒಂದೇ e–mail ನಲ್ಲಿ ಕಳುಹಿಸಬಹುದು.
ಇಲ್ಲಿರುವ e–mail  ಅನ್ನು ಗಮನಿಸಿ:
Subject : Revisions for sales report
Hi Ashok,
Thanks for your prompt response. As I read through the report that you have sent, I felt that there should be more specific data regarding our sales figures. I also would suggest that the tone of the report could be a bit more formal and that would make it more professional, as it is meant for our executive team.
I have scheduled a meeting with the PR department this Friday at 10am in the conference room.
Please let me know if that suits you.
Best regards,
Alok
ಈ e–mail  ನಲ್ಲಿರುವ subject line ಸರಿಯಾಗಿದ್ದು, ಮೊದಲನೇ paragraph ನಲ್ಲಿರುವ ವಿಷಯವೂ ಸ್ಪಷ್ಟವಾಗಿದೆ. ಆದರೆ, ಇಲ್ಲಿರುವ ಆಭಾಸವೆಂದರೆ, ಎರಡನೇ paragraphನಲ್ಲಿ ಹೇಳಿರುವ meeting ಬಗ್ಗೆಯ ವಿಷಯ ತುಂಬಾ ಮುಖ್ಯ ವಾದಂತಹುದು ಹಾಗೂ ಅದನ್ನು ಇದೇ mail ನಲ್ಲಿ ಹೇಳಿರುವಂತಹುದು. ಇಂತಹ ಸಂದರ್ಭದಲ್ಲಿ ಆಗಬಹುದಾದ ಗೊಂದಲವೆಂದರೆ, ಇದನ್ನು ಓದಿದವರು, ಈ ಎರಡು ವಿಷಯಗಳಲ್ಲಿ ಒಂದನ್ನು ಮರೆಯುವ ಸಾಧ್ಯತೆಯಿದೆ. ಆದ್ದರಿಂದ, ಎರಡನೆಯ ವಿಷಯವನ್ನು ಇನ್ನೊಂದು mailನಲ್ಲಿ ಕಳುಹಿಸಿದರೆ ಉಚಿತ.
ನಾವು e–mail ಬರೆಯಬೇಕಾದರೆ, ಅದಕ್ಕೆ ಯಾವ ರೀತಿಯ ಪ್ರತ್ಯುತ್ತರವನ್ನು ಓದುಗರಿಂದ ನಿರೀಕ್ಷಿಸುತ್ತೇವೆ ಎಂಬುದನ್ನು ಕೊನೆಯಲ್ಲಿ ಹೇಳಿ ಅದಕ್ಕೆ ಸರಿಹೊಂದುವಂತೆ contact details ಅನ್ನು ಕೊಡಬೇಕು.
ಉದಾ: Please call me on this number (555 435 2989). ಅಥವಾ Mail me at the earliest.
E–mailನಲ್ಲಿ ಕೊಡುವ ಸಂದೇಶ ತುಂಬಾ ಚಿಕ್ಕದಾಗಿದ್ದರೆ, subject lineನಲ್ಲಿಯೇ ನಾವು ಕೊಡಬೇಕಾದ ಸಂದೇಶವನ್ನು ಕೊಟ್ಟು, ಕೊನೆಯಲ್ಲಿ EOM ಎಂಬ ಅಕ್ಷರಗಳನ್ನು type ಮಾಡಿದರೆ ಸಾಕು. EOM ಎಂದರೆ End of Message ಎಂದರ್ಥ. ಇದನ್ನು ನೋಡಿದ ಓದುಗರಿಗೆ, Mail ಅನ್ನು ತೆರೆದು ನೋಡುವ ಅವಶ್ಯಕತೆಯಿಲ್ಲ ಎಂಬುದನ್ನು EOM ಮುಖಾಂತರ ತಿಳಿಯಪಡಿಸಬಹುದು.
ಉದಾ:  Subject: 24–10–2014 meeting, 10am conference room on Annual Reoprt EOM,
E–mailನಲ್ಲಿ ಉಪಯೋಗಿಸಬಹುದಾದ ಇನ್ನೂ ಕೆಲವು ಉಪಯುಕ್ತ abbreviations ನೋಡಿ:
1. FYI-For your information
2. ASAP- As soon as possible
3. WRT- with respect to
4. AFAIK -As far as I know
5. IMHO- In my honest opinion
ಕೊನೆಯದಾಗಿ, ನಾವು ಬರೆಯುವ e–mail ಅನ್ನು, grammar and spelling check ಮಾಡಿಯೇ ಕಳುಹಿಸಬೇಕು. ಏಕೆಂದರೆ, ನಾವು e–mail ಅನ್ನು ಕಳುಹಿಸುವ ರೀತಿ, ನಮ್ಮ ವಿಶ್ವಾಸಾರ್ಹತೆಯನ್ನು ಬಿಂಬಿಸುತ್ತದೆ.

ಕುದಿಸಿದರೂ ಕರಗದ ಮಂಜುಗಡ್ಡೆ

ಬೇಕಾಗುವ ಸಲಕರಣೆಗಳು:  ದೊಡ್ಡ ಕಾರ್ನಿಂಗ್/ ಬೋರೋಸಿಲ್ ಗಾಜಿನ ಪ್ರನಾಳ, ಮಂಜುಗಡ್ಡೆ, ಸ್ವಲ್ಪ ಚಿಕ್ಕದಾದ ಕಲ್ಲಿನ ಹರಳು, ನೀರು, ಸ್ಪಿರಿಟ್ ಲ್ಯಾಂಪ್, ಪ್ರನಾಳ ಹಿಡಿಕೆ.
ವಿಧಾನ: 1) ಒಂದು ದೊಡ್ಡ ಕಾರ್ನಿಂಗ್/ಬೋರೋಸಿಲ್ ಗಾಜಿನ ಪ್ರನಾಳವನ್ನು ತೆಗೆದುಕೊಳ್ಳಿ. 2) ಅದರಲ್ಲಿ ಅರ್ಧಭಾಗ ಮಂಜುಗಡ್ಡೆಯನ್ನು ಪುಡಿಮಾಡಿ ಹಾಕಿರಿ. 3) ಪ್ರಾನಾಳ ಬಾಯಿಯ ಅಳತೆಗಿಂತಲೂ ಸ್ವಲ್ಪ ಚಿಕ್ಕದಾದ ಕಲ್ಲಿನ ಹರಳನ್ನು ಪ್ರನಾಳದಲ್ಲಿ ಇಳಿಬಿಡಿರಿ. 4) ಪ್ರನಾಳದಲ್ಲಿ ಸ್ವಲ್ಪ ನೀರನ್ನು ಹಾಕಿ ಅದನ್ನು ಚಿತ್ರದಲ್ಲಿ ತೋರಿಸಿದಂತೆ ಮೇಲಿನ ಭಾಗವನ್ನು ಜ್ವಾಲೆಯ ಮೇಲೆ ಹಿಡಿಯಿರಿ.
ಪ್ರಶ್ನೆ: ಪ್ರನಾಳದಲ್ಲಿ ನೀವು ಕಂಡ ಬದಲಾವಣೆಗಳೇನು? ವಿವರಿಸಿರಿ.
ಉತ್ತರ: ಪ್ರನಾಳದಲ್ಲಿ ಕಲ್ಲಿನ ಹರಳನ್ನು ಹಾಕುವುದರಿಂದ ಮಂಜುಗಡ್ಡೆಯ ಪುಡಿ ಪ್ರನಾಳದ ತಳದಲ್ಲಿಯೇ ಉಳಿಯುತ್ತದೆ. ಮಂಜುಗಡ್ಡೆಯ ಮೇಲಿನ ಭಾಗದಲ್ಲಿ ಪ್ರನಾಳವನ್ನು ಕಾಯಿಸುವುದರಿಂದ ಅದು ಕುದಿಯಲು ಪ್ರಾರಂಭಿಸುತ್ತದೆ. ಕಾಯ್ದ ನೀರು ಆವಿಯಾಗಿ ಮೇಲೆ ಹೋಗುತ್ತದೆ. ಮಂಜುಗಡ್ಡೆ ಮೇಲೆ ಹರಳು ಇರದಿದ್ದರೆ ಮಂಜುಗಡ್ಡೆಯೂ ಮೇಲೆ ಬಂದು ಅದೂ ಕಾಯ್ದು ಕರಗುತ್ತಿತ್ತು. ನೀರು ಉಷ್ಣದ ಮಂದ ವಾಹಕ ಎಂದು ತಿಳಿಯುತ್ತದೆ.

Tuesday, 7 October 2014

ಕೆಮ್ಮಿಗಿದೆ ಮನೆ ಔಷಧಿ

ಕೆಮ್ಮಿಗಿದೆ ಮನೆ ಔಷಧಿ

*ಉಗುರು ಬಿಸಿ ಹಾಲಿಗೆ ಚಿಟಿಕೆ ಅರಿಶಿನ ಬೆರೆಸಿ ಕುಡಿಯಿರಿ
*ಹಸಿಶುಂಠಿಯನ್ನು ತುರಿದು, ಕಾಟನ್‌ ಬಟ್ಟೆಯಲ್ಲಿ ರಸ ಹಿಂಡಿಕೊಳ್ಳಿರಿ. ಅದನ್ನು ಜೇನಿನೊಂದಿಗೆ ಬೆರೆಸಿ, ಸೇವಿಸಿದರೆ ಗಂಟಲು ನೋವು, ಕೆಮ್ಮು  ಎರಡೂ ನಿವಾರಣೆಯಾಗುತ್ತದೆ.
*ಒಣ ಶುಂಠಿಪುಡಿಯನ್ನು ಮನೆಯಲ್ಲಿ ಮಾಡಿಟ್ಟುಕೊಂಡಿರಬೇಕು. ಪ್ರತಿಸಲವೂ ಚಹ ಅಥವಾ ಹಾಲಿನಲ್ಲಿ ಹಾಕಿ ಕುದಿಸಿ ಕುಡಿದರೆ ಚಳಿಗಾಲದ ಕೆಮ್ಮನ್ನು ನಿಯಂತ್ರಿಸಬಹುದು.
*ಹುರಿಗಡಲೆ ಹುರಿದು ತಿಂದರೆ ಕಫ ಕರಗುವುದು. ಮೂರು ದಿನಗಳಿಗಿಂತಲೂ ಹೆಚ್ಚು ಅವಧಿಗೆ ಕೆಮ್ಮು ಕಾಡಿದರೆ ವೈದ್ಯರನ್ನು ಭೇಟಿ ಮಾಡಿ.
ಬಲು ಉಪಯುಕ್ತ ಬೆಳ್ಳುಳ್ಳಿ
*ಬೆಳ್ಳುಳ್ಳಿಯನ್ನು ಒಲೆಯ ಮೇಲಿಟ್ಟು ಸಿಪ್ಪೆಯೊಂದಿಗೆ ಸುಡಬೇಕು. ನಂತರ ಬೆಳ್ಳುಳ್ಳಿಯನ್ನು ಬೆಲ್ಲದೊಂದಿಗೆ ತಿನ್ನಬೇಕು.
ಬಾಣಂತಿಯರಿಗೆ ನೀಡುವ ಊಟದಲ್ಲಿ ಹೇರಳವಾಗಿ ಬೆಳ್ಳುಳ್ಳಿಯನ್ನು ಬಳಸಬೇಕು, ಎದೆಹಾಲು ಹೆಚ್ಚುತ್ತದೆ. ಮಗುವಿಗೆ ಶೀತವೂ ಆಗದು. ಗರ್ಭಾವಸ್ಥೆಯ ಕೊಬ್ಬು ಸಹ ಕರಗುತ್ತದೆ.
ರಕ್ತದ ಏರೊತ್ತಡ ಇದ್ದವರು, ಹೃದ್ರೋಗಿಗಳು, ರಕ್ತದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿದ್ದಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆಸಳು ಬೆಳ್ಳುಳ್ಳಿ ಸೇವಿಸಬೇಕು
  
ಬೆಲ್ಟ್‌ ವರಸೆ
ನಮ್ಮ ದೈನಂದಿನ ವೇಷಭೂಷಣದ ಭಾಗವಾಗಿರುವ ಬೆಲ್ಟ್‌ ಅಥವಾ ಸೊಂಟಪಟ್ಟಿ (ಸುತ್ತು ಪಟ್ಟಿ, ನಡುಪಟ್ಟಿ ಎಂದೂ ಕರೆಯಲಾಗುತ್ತದೆ) ಕುರಿತಾಗಿ ಈ ಬಾರಿ ಮಾತಾಡೋಣ. (ಯಾಂತ್ರಿಕ ಕ್ಷೇತ್ರದಲ್ಲಿ ಕೂಡ ಬೆಲ್ಟ್‌ನ ಬಳಕೆ ಇದೆ. ಆದರೆ ಇಲ್ಲಿ ಅದನ್ನು ಪ್ರಸ್ತಾಪಿಸುತ್ತಿಲ್ಲ). ಮಾನವ ಜಗತ್ತಿಗೆ ಬೆಲ್ಟ್‌ನ ಪರಿಚಯ ಆಗಿದ್ದು ಇತ್ತೀಚೆಗೇನಲ್ಲ. ಕಂಚಿನ ಯುಗದಲ್ಲೇ (ಕ್ರಿ.ಪೂ 3000- ಕ್ರಿ.ಪೂ 1000) ಬೆಲ್ಟ್‌ನ ಮೂಲ ರೂಪ ಬಳಕೆಯಲ್ಲಿತ್ತು. ಗಮನಿಸಬೇಕಾದ ಸಂಗತಿ ಎಂದರೆ, ಅಂದಿನ ಜನರು ಫ್ಯಾಷನ್‌ ಉದ್ದೇಶಕ್ಕೆ ಇದನ್ನು ಬಳಸುತ್ತಿರಲಿಲ್ಲ. ತಮ್ಮ ಅಗತ್ಯ ಸಲಕರಣೆಗಳನ್ನು ಹಿಡಿದುಕೊಳ್ಳುವುದಕ್ಕಾಗಿ ಸೊಂಟಕ್ಕೆ ಪಟ್ಟಿ ಕಟ್ಟಿಕೊಳ್ಳುತ್ತಿದ್ದರು. ಇವುಗಳ ಬಳಕೆ ಪುರುಷರಲ್ಲೇ ಹೆಚ್ಚಾಗಿತ್ತು ಎಂದು ಹೇಳುತ್ತದೆ ಚರಿತ್ರೆ. ಪ್ರಾಣಿಗಳ ಚರ್ಮವನ್ನು ರಾಸಾಯನಿಕ ವಸ್ತುಗಳಿಂದ ಸಂಸ್ಕರಿಸಿ ಬೆಲ್ಟ್‌ ತಯಾರಿಸುವ ವಿಧಾನ ಅಭಿವೃದ್ಧಿಯಾಗುವವರೆಗೂ ಮರದ ತೊಗಟೆಯೇ ಬೆಲ್ಟ್‌ ಆಗಿತ್ತು! ಉಡುಪಿನ ಭಾಗವಾಗಿ ನೇಯ್ದ ಬಟ್ಟೆಯನ್ನೂ ಸೊಂಟದ ಪಟ್ಟಿಯನ್ನಾಗಿ ಕಟ್ಟಿಕೊಳ್ಳುತ್ತಿದ್ದ ಕ್ರಮವೂ ಇತ್ತು.
ಬೆಲ್ಟ್‌, ಅಂದಿನ ಕಾಲದ ಯುದ್ಧ ಸಂಸ್ಕೃತಿಯ ಭಾಗವಾಗಿತ್ತು. ಪ್ರಾಚೀನ ರೋಮ್‌ನಲ್ಲಿ ಕತ್ತಿಮಲ್ಲರು ತಮ್ಮ ಆಯುಧಗಳನ್ನು ಇಟ್ಟುಕೊಳ್ಳಲು ಚರ್ಮದಿಂದ ಮಾಡಿದ ವಿಶೇಷ ಬೆಲ್ಟ್‌ ಉಪಯೋಗಿಸುತ್ತಿದ್ದರು. ಈ ಬೆಲ್ಟ್‌ಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಇವುಗಳಲ್ಲಿ ಐದಾರು ಆಯುಧಗಳನ್ನು ಇಡಲಾಗುತ್ತಿತ್ತು. ಅಲಂಕಾರಕ್ಕಾಗಿ ಚರ್ಮವನ್ನು ನಿರ್ದಿಷ್ಟ ಅಳತೆಗೆ ಕತ್ತರಿಸಿ ಬೆಲ್ಟ್‌ನ ಕೆಳಗೆ ಇಳಿಬಿಡಲಾಗುತ್ತಿತ್ತು. ಈ ಕತ್ತಿಮಲ್ಲರು ತಮ್ಮ ಭುಜಕ್ಕೂ ಬೆಲ್ಟ್‌ ಕಟ್ಟಿಕೊಳ್ಳುತ್ತಿದ್ದರು. ಸೈನಿಕರು ಕಡ್ಡಾಯವಾಗಿ ಧರಿಸಬೇಕಾಗಿದ್ದ ವಸ್ತುಗಳಲ್ಲಿ ಬೆಲ್ಟ್‌ ಕೂಡ ಒಂದಾಗಿತ್ತು. ಆ ಕಾಲದಲ್ಲಿ ಸೊಂಟದ ಪಟ್ಟಿಯು ಶಕ್ತಿ, ಪಾರುಪತ್ಯದ ಸಂಕೇತವಾಗಿತ್ತು.
ಸೈನಿಕರು ಮಾತ್ರವಲ್ಲ, ಅಂದಿನ ಚಕ್ರವರ್ತಿಗಳು ತಮ್ಮ ಆಯುಧವನ್ನು ಇಟ್ಟುಕೊಳ್ಳಲು ಮೊರೆ ಹೋಗುತ್ತಿದ್ದುದು ಸೊಂಟದ ಪಟ್ಟಿಗೇ. ಆದರೆ ಅವರ ಈ ಸೊಂಟದ ಪಟ್ಟಿಯನ್ನು ಚಿನ್ನದಿಂದ ಮಾಡಲಾಗುತ್ತಿತ್ತು, (ಭಾರತವನ್ನು ಆಳಿದ ರಾಜರ ಪೋಷಾಕುಗಳನ್ನು ಊಹಿಸಿ. ಪಟ್ಟದ ಕತ್ತಿಯನ್ನು ಅವರು ಸೊಂಟದ ಪಟ್ಟಿಯಲ್ಲಿ ಇಟ್ಟುಕೊಳ್ಳುತ್ತಿದ್ದುದನ್ನು ಚಲನಚಿತ್ರ ಅಥವಾ ಛಾಯಾಚಿತ್ರಗಳಲ್ಲಿ ಕಾಣಬಹುದು).
ಪುರುಷರಿಗಷ್ಟೇ ಮೀಸಲಾಗಿದ್ದ ಬೆಲ್ಟ್‌ ಮಹಿಳೆಯರಿಗೆ ದೊರಕಿದ್ದು ಮಧ್ಯಕಾಲೀನ ಯುಗದಲ್ಲಿ. ಇದು ಫ್ಯಾಷನ್‌ ಜಗತ್ತಿಗೆ ಕಾಲಿರಿಸಿದ್ದು ಕೂಡ ಆಗಲೇ. ಇದರ ಶ್ರೇಯ ಸಲ್ಲಬೇಕಾಗಿರುವುದು ಆ ಕಾಲದ ಶ್ರೀಮಂತ ಮಹಿಳೆಯರಿಗೆ. ದಿರಿಸಿನೊಂದಿಗೆ ಸೊಂಟದ ಪಟ್ಟಿಯನ್ನು ಹಾಕಿಕೊಂಡರೆ ವೇಷಭೂಷಣ ಇನ್ನಷ್ಟು ಕಳೆಗಟ್ಟುತ್ತದೆ ಎಂಬ ಕಾರಣಕ್ಕೆ ವಿವಿಧ ವಿನ್ಯಾಸದ ಬೆಲ್ಟ್‌ಗಳನ್ನು ಧರಿಸಲು ಅವರು ಆರಂಭಿಸಿದರು. ಈ ಸೊಂಟದ ಪಟ್ಟಿಗಳಿಗೆ ಬಾಲದಂತಹ ರಚನೆ ಇರುತ್ತಿತ್ತು. ಇವುಗಳು ಮುಂಭಾಗದಲ್ಲಿ ನೇತಾಡುತ್ತಿದ್ದರಿಂದ ಮಹಿಳೆಯರು ತೊಟ್ಟ ಉಡುಗೆಯ ಸೌಂದರ್ಯ ಹೆಚ್ಚಾಗುತ್ತಿತ್ತು.
ಆಧುನಿಕ ಬೆಲ್ಟ್‌ ಬಳಕೆಯಾಗಿದ್ದು ಮೊದಲ ವಿಶ್ವ ಮಹಾ ಸಮರದಲ್ಲಿ. ಈ ಸಂದರ್ಭದಲ್ಲಿ ಸೈನಿಕರು ತಮ್ಮ ಸೇನಾ ಕವಚವನ್ನು ರಕ್ಷಿಸುವುದಕ್ಕಾಗಿ ಸೊಂಟದ ಪಟ್ಟಿ ಧರಿಸುತ್ತಿದ್ದರು. ಎದೆ ಮತ್ತು ಭುಜ ಎದ್ದು ಕಾಣಬೇಕು ಎಂಬ ಉದ್ದೇಶದಿಂದ ಸೇನಾಧಿಕಾರಿಗಳು ಹೆಚ್ಚು ಬಿಗಿಯಾದ ಬೆಲ್ಟ್‌ಗಳನ್ನೂ ಧರಿಸುತ್ತಿದ್ದರಂತೆ. ತಾವು ಸಮರ್ಥರು ಎಂಬುದನ್ನು ಮತ್ತೊಬ್ಬರಿಗೆ ತೋರಿಸಿಕೊಳ್ಳುವುದು
ಇದರ ಹಿಂದಿನ ಉದ್ದೇಶ.
1920ರವರೆಗೆ ಬೆಲ್ಟ್‌ ಸೇನೆಯ ಮತ್ತು ಅಲಂಕಾರಿಕಾ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತಿತ್ತು. ನಂತರ ಅದು ಪುರುಷರ ದಿನನಿತ್ಯದ ಉಡುಪಿನ ಭಾಗವಾಗಲು ಆರಂಭವಾಯಿತು. ಪ್ಯಾಂಟ್‌ಗಳಲ್ಲಿ ಲೂಪ್‌ಗಳನ್ನು (ಬೆಲ್ಟ್‌ ಸಿಕ್ಕಿಸುವ ಕುಣಿಕೆ) ಅಳವಡಿಸಲು ಜವಳಿ ಉದ್ಯಮಿಗಳು ಆರಂಭಿಸಿದರು. (ಇದಕ್ಕೂ ಮೊದಲು ಜನರು ಬೆಲ್ಟ್‌ ಬದಲಾಗಿ ತೂಗುಲಾಡಿ (ಸಸ್ಪೆಂಡರ್‌) ಧರಿಸುತ್ತಿದ್ದರು). ಆಧುನಿಕ ಕಾಲದಲ್ಲಿ ಬೆಲ್ಟ್‌ ಜನಪ್ರಿಯತೆ ಗಳಿಸಿದ್ದರ ಹಿಂದೆ ಹಾಲಿವುಡ್‌ ಚಿತ್ರಗಳ ಪಾಲೂ ಇದೆ. 20ನೇ ಶತಮಾನದಲ್ಲಿ ಅಮೆರಿಕ ಸಿನಿಮಾಗಳಲ್ಲಿ ಬಳಸಿದ ಬೆಲ್ಟ್‌ ಬಕಲ್‌ಗಳು ಪ್ರಸಿದ್ಧಿಯಾದವು. ಇದರ ಆಧಾರದಲ್ಲಿ ಥರಾವರಿ ಬಕಲ್‌ಗಳನ್ನು ಹೊಂದಿದ ಬೆಲ್ಟ್‌ಗಳು ಮಾರುಕಟ್ಟೆಗೆ ಬಂದವು.
ಈಗ ಬೆಲ್ಟ್‌ ಆಧುನಿಕ ಫಾರ್ಮಲ್‌ ಡ್ರೆಸ್‌ ಕೋಡ್‌ನ ಅವಿಭಾಜ್ಯ ಅಂಗ. ಬೆಲ್ಟ್‌ ರಹಿತ ಫ್ಯಾಷನ್‌ ಜಗತ್ತನ್ನು ಇಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅದು ನಮ್ಮ ದೈನಂದಿನ ಬದುಕಿನ ಭಾಗವಾಗಿ ಮಾರ್ಪಟ್ಟಿದೆ

 

Wednesday, 1 October 2014

ಅರಿಶಿಣದೆಲೆ ಎಣ್ಣೆಯಿಂದ ಬೈಕ್‌ ಓಡಿಸಿ

ಅರಿಶಿಣದೆಲೆ ಎಣ್ಣೆಯಿಂದ ಬೈಕ್‌ ಓಡಿಸಿ

ಪೆಟ್ರೋಲ್‌ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿ ಏರುತ್ತಲೇ ಇದೆ. ಮತ್ತೊಂದೆಡೆ ಪರ್ಯಾಯ ಇಂಧನಕ್ಕಾಗಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಇಂಥ ಹೊತ್ತಿನಲ್ಲಿ ಅರಿಶಿಣದೆಲೆಯ ಎಣ್ಣೆ ಬಳಸಿ ಬೈಕ್ ಓಡಿಸುವ ಮೂಲಕ ಪೆಟ್ರೋಲ್‌ಗೆ ಪರ್ಯಾಯ ತೈಲವನ್ನು ಕಂಡುಕೊಂಡಿದ್ದಾರೆ ಬಳ್ಳಾರಿಯ ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು.
ಮೇವಿಗೂ ಬಳಕೆಯಾಗದ ಅರಿಶಿಣದ ಎಲೆಯಿಂದ ತೆಗೆದ ಎಣ್ಣೆಯಲ್ಲಿ ದ್ವಿಚಕ್ರ ವಾಹನ ಓಡಿಸುವ ಮೂಲಕ ಈ ವಿದ್ಯಾರ್ಥಿಗಳು ಹೊಸ ಪ್ರಯೋಗ ಮಾಡಿದ್ದಾರೆ. ಒಂದು ಲೀಟರ್‌ ಅರಿಶಿಣದೆಲೆಯ ಎಣ್ಣೆಗೆ 40ರಿಂದ 50 ರೂಪಾಯಿ ವೆಚ್ಚವಾಗುತ್ತದೆ. ಒಂದು ಲೀಟರ್‌ಗೆ 65ರಿಂದ 70 ಕಿ.ಮೀ ಇಂಧನ ಕ್ಷಮತೆ (ಮೈಲೇಜ್‌) ದೊರೆಯುತ್ತದೆ.
‘ಕೇರಳದಲ್ಲಿ ಅರಿಶಿಣದ ಎಲೆಯನ್ನು ಆಯುರ್ವೇದ ಸೇರಿದಂತೆ ಅನೇಕ ಉಪಯೋಗಗಳಿಗೆ ಬಳಸುತ್ತಾರೆ ಎಂಬುದು ತಿಳಿದಿತ್ತು. ನಾವು ಮೊದಲು ಹೊಂಗೆ ಎಣ್ಣೆ, ಟಯರ್‌ ಕರಗಿಸಿ ತೆಗೆದ ತೈಲದಿಂದ ಬೈಕ್‌ ಓಡಿಸಲು ಪ್ರಯತ್ನಿಸಿದೆವು. ಆದರೆ ಅದು ಫಲ ಕೊಡಲಿಲ್ಲ. ನಂತರ ನಮಗೆ ಕಂಡದ್ದು ಅರಿಶಿಣದ ಎಲೆ.  ಒಮ್ಮೆ ಅರಿಶಿಣದ ಎಣ್ಣೆಯನ್ನು ನಮ್ಮ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದೆವು. ಪೆಟ್ರೋಲ್ ಹಾಗೂ ಈ ಎಣ್ಣೆಯ ಥರ್ಮಲ್‌ ಪ್ರಾಪರ್ಟೀಸ್‌ ಒಂದೇ ಆಗಿತ್ತು. ಅರಿಶಿಣದೆಲೆಯ ಎಣ್ಣೆಗೆ ಬೆಂಕಿ ತಾಗಿಸಿದ ಕೂಡಲೇ ಪೆಟ್ರೋಲ್‌ನಂತೆ ಉರಿಯಲಾರಂಭಿಸಿತು. ಆಗ ನಾವು ಬೈಕ್‌ಗೆ ಬಳಸಲು ಮುಂದಾದೆವು.
ಪ್ರಯೋಗಕ್ಕಾಗಿ ಮೊದಲಿಗೆ 100 ಎಂ.ಎಲ್‌ ಅರಿಶಿಣದೆಲೆಯ ಎಣ್ಣೆಯನ್ನು ತೆಗೆದುಕೊಂಡು ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಪಕ್ಕದಲ್ಲಿ ಸಣ್ಣ ಬಾಟಲಿ ಅಳವಡಿಸಿದೆವು. ಬಾಟಲಿಯಿಂದ ಎಂಜಿನ್‌ಗೆ ಸಂಪರ್ಕ ಕಲ್ಪಿಸುವ ಮಧ್ಯಭಾಗದ ಕೊಳವೆಗೆ ಎರಡು ಮ್ಯಾಗ್ನಟೈಜರ್‌ (ಕಾಂತೀಕಾರಕ) ಕ್ಲಿಪ್‌ಗಳನ್ನು ಅಳವಡಿಸಿದೆವು. ಈ ಮ್ಯಾಗ್ನಟೈಜರ್‌ಗಳು ಇಂಧನ ಕ್ಷಮತೆ ಹೆಚ್ಚಾಗಲು ಸಹಕರಿಸುತ್ತವೆ ಮತ್ತು ಎಂಜಿನ್‌ನಲ್ಲಿ ಕಾರ್ಬನ್‌ ಉಳಿಯದಂತೆ ತಡೆಯುತ್ತವೆ. 100 ಎಂ.ಎಲ್‌ ತೈಲದಿಂದ ಏಳು ಕಿ.ಲೋ ಮೀಟರ್‌ ಬೈಕ್‌ ಓಡಿಸಿದೆವು’ ಎನ್ನುತ್ತಾರೆ ಅರುಣ್‌ ಕುಮಾರ್ ಜಿ.
ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ 8ನೇ ಸೆಮಿಸ್ಟರ್‌ ಅಭ್ಯಾಸ ಮಾಡುತ್ತಿರುವ ಅರುಣ್‌ ಕುಮಾರ್‌, ಪ್ರಶಾಂತ್‌, ರವಿ, ಚನ್ನವೀರಯ್ಯ ಅವರು ಆರು ತಿಂಗಳ ಶ್ರಮದಿಂದ ಈ ಪ್ರಯೋಗವನ್ನು ಯಶಸ್ವಿಗೊಳಿಸಿದ್ದಾರೆ. ಇವರಿಗೆ ಮಾರ್ಗದರ್ಶನ ನೀಡಿದವರು ಡಾ. ಹೀರೇಗೌಡರ್‌ ಯರ್ರನಗೌಡ ಹಾಗೂ ವಿಭಾಗದ ಮುಖ್ಯಸ್ಥ ಕೋರಿ ನಾಗರಾಜ್‌.
‘ಅರಿಶಿಣದ ಎಲೆಯ ತೈಲದಿಂದ ಓಡಿಸುವ ಬೈಕ್‌ ಪರಿಸರ ಸ್ನೇಹಿಯಾಗಿದೆ, ಹೆಚ್ಚು ಹೊಗೆ ಉಗುಳುವುದಿಲ್ಲ. ಇದಕ್ಕೆ ಸಾಕ್ಷಿ ಸಾರಿಗೆ ಇಲಾಖೆಯಿಂದ ಸಿಕ್ಕಿರುವ ಎಮಿಷನ್‌ ಪರೀಕ್ಷೆಯ ಪ್ರಮಾಣ ಪತ್ರ. ಈ ಎಣ್ಣೆಯಿಂದ ಎಂಜಿನ್‌ಗೂ ಹಾನಿಯಾಗುವುದಿಲ್ಲ ಎಂಬುದನ್ನು ಮೆಕ್ಯಾನಿಕ್‌ಗಳು ಪರೀಕ್ಷಿಸಿ, ದೃಢೀಕರಿಸಿದ್ದಾರೆ. ಆದ್ದರಿಂದ ನಮ್ಮ ಈ ಪ್ರಯತ್ನವನ್ನು ಎಲ್ಲೆಡೆ ಕಾರ್ಯರೂಪಕ್ಕೆ ತರಲು ಏನೂ ತೊಂದರೆ ಇಲ್ಲ. ಅಲ್ಲದೇ ಪ್ರಪಂಚದ ಉತ್ಪಾದನೆಯಲ್ಲಿ ಶೇ.75ರಷ್ಟು ಅರಿಶಿಣವನ್ನು ಭಾರತದಲ್ಲೇ ಬೆಳೆಯಲಾಗುತ್ತಿದೆ. ಹಾಗಾಗಿ ಪೆಟ್ರೋಲ್‌ಗೆ ಪರ್ಯಾಯವಾಗಿ ಅರಿಶಿಣದೆಲೆಯ ಎಣ್ಣೆಯನ್ನು ಮುಂದಿನ ದಿನಗಳಲ್ಲಿ ಬಳಸಿಕೊಂಡರೆ ಸಾರ್ವಜನಿಕರು ಹಾಗೂ ಸರ್ಕಾರಕ್ಕೂ ಬಹುದೊಡ್ಡ ಅನುಕೂಲವಾಗಲಿದೆ ಎಂಬುದು ಈ ವಿದ್ಯಾರ್ಥಿಗಳ ಅಭಿಪ್ರಾಯ.
ಮಾಹಿತಿಗೆ: 91644 26568.

ಗರ್ಭಧಾರಣೆ ಆಗಿಲ್ಲವೇ?

ಮಾಹಿತಿಗೆ: vasan@manipalankur.com

ಬರುತ್ತಿದೆ ‘ಪ್ರಾಸ್ಟೇಟ್‌ ಕ್ಯಾನ್ಸರ್‌’

ಪುರುಷರಿಗೆ ವಯಸ್ಸಾಗುತ್ತಿದ್ದಂತೆ ಆರೋಗ್ಯ ಸಂಬಂಧಿ ಅನೇಕ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ಆದರೆ ಬದಲಾದ ಜೀವನ ಶೈಲಿ, ಆನುವಂಶಿಕ ಕಾರಣದಿಂದ ಬರುವ ಪ್ರಾಸ್ಟೇಟ್‌ (ಮೂತ್ರಕೋಶದ ಕಂಠ) ಕ್ಯಾನ್ಸರ್‌ ಇಂದು ಭಾರತದಲ್ಲಿ 15 ಮಂದಿಗೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಅಮೆರಿಕದಲ್ಲಿ ಚರ್ಮ ಕ್ಯಾನ್ಸರ್‌ ನಂತರ ಹೆಚ್ಚು ಬಲಿಯಾಗುತ್ತಿರುವುದು ಈ ಪ್ರಾಸ್ಟೇಟ್‌ ಕ್ಯಾನ್ಸರ್‌ಗೆ. ಅಲ್ಲಿ ಆರು ಮಂದಿಗೆ ಒಬ್ಬರಲ್ಲಿ ಈ ರೋಗ ಕಂಡುಬರುತ್ತಿದೆ. ಭಾರತದಲ್ಲೂ ಕಳೆದ ಹದಿನೈದು ವರ್ಷಗಳಿಂದ ಈ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರು ಕಂಡು ಬರುತ್ತಿರುವುದು ವೃದ್ಧರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಭಾರತೀಯರಲ್ಲಿ ವಯಸ್ಸಾಗುತ್ತಿದ್ದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಇವುಗಳ ಜೊತೆಗೆ ಇಂಥ ಕಾಯಿಲೆಗಳು ಪ್ರವೇಶ ಮಾಡುತ್ತಿರುವುದು ಭಯ ಹುಟ್ಟಿಸುವಂತ ಸಂಗತಿಯಾಗಿದೆ. ವ್ಯಾಯಾಮವಿಲ್ಲದ ಜೀವನ, ಆನುವಂಶಿಕವಾಗಿ, ಅತೀಯಾದ ಮಾಂಸಾಹಾರ ಸೇವನೆಯಿಂದ ಪ್ರಾಸ್ಟೇಟ್‌ ಕ್ಯಾನ್ಸರ್‌ ಬರುವ ಸಾಧ್ಯತೆಗಳಿವೆ.
ಪ್ರಾಸ್ಟೇಟ್‌ ಕ್ಯಾನ್ಸರ್‌ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಎರಡು ಹಂತಗಳಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ಮೂರನೇ ಹಂತ ತಲುಪಿದಾಗ ಕಂಡು ಬರುತ್ತದೆ. ಪದೇಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಕಾಲು ನೋವು ಬರುವುದು ಈ ರೋಗದ ಲಕ್ಷಣಗಳಾಗಿವೆ. ಅಮೆರಿಕದಲ್ಲಿ 1ಮತ್ತು 2ನೇ ಹಂತ ತಲುಪಿದರೆ ಸಾಕು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯ.
ಈ ಕಾಯಿಲೆ 60 ವರ್ಷ ಮೇಲ್ಪಟ್ಟ ಶೇ. 40ರಿಂದ 45 ರಷ್ಟು ಮಂದಿಯಲ್ಲಿ ಕಂಡು ಬರುವ ಸಾಧ್ಯತೆ ಇದೆಯಂತೆ. ಭಾರತದಲ್ಲಿ 1ಮತ್ತು 2ನೇ ಹಂತ ತಲುಪಿದಾಗ ವೈದ್ಯರ ಬಳಿ ಬರುವವರ ಪ್ರಮಾಣ ಶೇ. 20ರಷ್ಟಿದ್ದರೆ, 3 ಮತ್ತು 4ನೇ ಹಂತ ತಲುಪಿದಾಗ ಬರುವವರ ಸಂಖ್ಯೆ ಶೇ. 80ರಷ್ಟಿದೆ. ಇಂಥ ಸಂದರ್ಭಗಳಲ್ಲಿ ರೋಗ ಗುಣಮುಖವಾಗುವ ಸಾಧ್ಯತೆ ಕಡಿಮೆ ಇರುತ್ತದೆ. 3ನೇ ಹಂತ ತಲುಪಿದಾಗ ಶಸ್ತ್ರಚಿಕಿತ್ಸೆ ಅಥವಾ ರೇಡಿಯೇಷನ್‌ ಮೂಲಕ ಕಾಯಿಲೆ ಗುಣಪಡಿಸಬಹುದು. ಐವತ್ತು ವರ್ಷ ದಾಟಿದ ಪ್ರತಿಯೊಬ್ಬ ಪುರುಷ ತಜ್ಞ ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡಬೇಕು. ಪಿ.ಎಸ್‌.ಎ. (Prostate Specific Antigen) ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ರೋಗ ಪತ್ತೆ ಹಚ್ಚಬಹುದು ಎನ್ನುತ್ತಾರೆ ವೈದ್ಯರು.
‘ಈ ಪ್ರಾಸ್ಟೇಟ್‌ ಪುರಷರಿಗೆ ಮುಖ್ಯವಾದ ಗ್ರಂಥಿಯಾಗಿದೆ. ಇದರಿಂದ ಉತ್ಪತಿಯಾಗುವ ದ್ರವಕ್ಕೆ ವೀರ್ಯಾಣುಗಳನ್ನು ಸಂರಕ್ಷಿಸುವ ಗುಣವಿದೆ. ಪ್ರಾಸ್ಟೇಟ್‌ ಕ್ಯಾನ್ಸರ್‌ 1 ಮತ್ತು 2ನೇ ಹಂತದಲ್ಲಿರುವ ರೋಗಿಗಳಿಗೆ ರ್‌್ಯಾಡಿಕಲ್‌ ಪ್ರೊಸ್ಟಾಟೆಕ್ಟಮಿ ಚಿಕಿತ್ಸೆ, ಅಥವಾ ರೇಡಿಯೇಷನ್‌ ಮೂಲಕ ಗುಣಪಡಿಸಬಹುದು. 3 ನೇ ಹಂತ ತಲುಪಿದ್ದರೆ ಸರ್ಜರಿ ಹಾಗೂ ರೇಡಿಯೇಷನ್‌ ಎರಡೂ ಮಾಡಿಸಬೇಕಾಗುತ್ತದೆ. 4ನೇ ಹಂತದಲ್ಲಿದ್ದರೆ ಹಾರ್ಮೋನ್ ಥೆರಪಿ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದು. ಜೊತೆಗೆ ಕಿಮೋಥೆರಪಿಯನ್ನೂ ಮಾಡಬೇಕುತ್ತದೆ. ನಾಲ್ಕು ಹಂತ ದಾಟಿದವರು ನಾಲ್ಕರಿಂದ ಐದು ವರ್ಷ ಬದುಕಬಹುದು’ ಎನ್ನುತ್ತಾರೆ ಗ್ಲೋಬಲ್‌ ಪ್ರಾಸ್ಟೇಟ್‌ ಡಿಸೀಸ್‌ ಫೌಂಡೇಷನ್ನಿನ ಅಧ್ಯಕ್ಷ ಎಸ್‌.ಕೆ. ರಘುನಾಥ್‌.
ಬೆಂಗಳೂರಿನಲ್ಲಿ ಒಂದು ಲಕ್ಷ ಜನರಲ್ಲಿ ಎಂಟು ಮಂದಿಗೆ ಪ್ರಾಸ್ಟೇಟ್‌ ಕ್ಯಾನ್ಸರ್‌ ಲಕ್ಷಣ ಕಂಡು ಬರುತ್ತಿದೆಯಂತೆ. ಇತ್ತೀಚೆಗೆ ಬೆಂಗಳೂರಿನ
ಲೀ ಮೆರಿಡಿಯನ್‌ ಹೋಟೆಲ್‌ನಲ್ಲಿ ಬೆಂಗಳೂರು ಯೂರಾಲಜಿಕಲ್‌ ಸೊಸೈಟಿ ಸಹಯೋಗದೊಂದಿಗೆ ಗ್ಲೋಬಲ್‌ ಪ್ರಾಸ್ಟೇಟ್‌ ಡಿಸೀಸ್‌ ಫೌಂಡೇಷನ್‌ ‘ಪ್ರಾಸ್ಟೇಟ್‌ ಕ್ಯಾನ್ಸರ್‌’ ಕುರಿತು ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ‘ಪ್ರಾಸ್ಟೇಟ್‌ ಕ್ಯಾನ್ಸರ್‌’ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ರೋಗ ತಡೆಗಟ್ಟುಲು ಕೈಗೊಳ್ಳಬೇಕಾದ ಕ್ರಮಗಳು ಮಾಂಸಾಹಾರ ಕಡಿಮೆ ಮಾಡುವುದು, ಅರಿಶಿಣ ಬಳಸಿದ ಆಹಾರ ಸೇವನೆ, ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ವ್ಯಾಯಾಮ, ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು ಹಾಗೂ ಧೂಮಪಾನ ಮಾಡಬಾರದು.

ಬಾಲ್ಯದಲ್ಲೇ ಬೆಳ್ಳಿಗೆರೆ

ನೀವೆಷ್ಟು ಗಂಟೆ ನಿದ್ದೆ ಮಾಡುತ್ತೀರಿ? ಏನುಣ್ಣುತ್ತೀರಿ? ಎಷ್ಟು ಗಂಟೆಗೆ ಎದ್ದೇಳುತ್ತೀರಿ? ಇವೆಲ್ಲಕ್ಕೂ ಉತ್ತರ ಕೊಡುತ್ತಲೇ ಒಮ್ಮೆ ತಲೆಯನ್ನು ಗಮನಿಸಿ, ಅಲ್ಲಲ್ಲಿ ಬೆಳ್ಳಿಗೆರೆ ಇಣುಕಿದೆಯೇ?
ಸಾಮಾನ್ಯವಾಗಿ ಮುಂದಲೆಯಲ್ಲಿಯೇ ಮೊದಲು ಇಣುಕುವ ಈ ಬಿಳಿ ಕೂದಲಿಗೂ ನಮ್ಮ ಜೀವನಶೈಲಿಗೂ ನೇರ ನಂಟಿದೆ. ಇದನ್ನು ಬೆಂಗಳೂರಿನ ಹೇರ್‌ಲೈನ್‌ ಸ್ಟುಡಿಯೊದ ಅಧ್ಯಯನ ಸಾಬೀತು ಪಡಿಸಿದೆ. ಕಳೆದ ವರ್ಷ ಅವರ ಬಳಿ ಬಾಲನೆರೆ ಮತ್ತು ಅಕಾಲ ನೆರೆಯ ಸಮಸ್ಯೆಯ ಚಿಕಿತ್ಸೆಗೆ ಬಂದವರನ್ನು ಅಧ್ಯಯನಕ್ಕೆ ಒಳಪಡಿಸಿದರು. ದಟ್ಟವಾದ, ಕಪ್ಪು ಕಾಂತಿಯುತ ಕೂದಲು ಎಲ್ಲರ ಕನಸಾಗಿತ್ತು.
ಆನುವಂಶೀಯ ಕಾರಣವಿಲ್ಲದಿದ್ದಲ್ಲಿ ಕೂದಲು ಬೆಳ್ಳಗಾಗಲು ಜೀವನಶೈಲಿಯೇ ನೇರ ಕಾರಣ ಎನ್ನುವುದು ಡಾ.ಸ್ವಾಗತಾ ಚಕ್ರವರ್ತಿ ಅವರ ಅಧ್ಯಯನದ ಫಲಿತಾಂಶ ಹೇಳುತ್ತದೆ.
ಇವರ ಅಧ್ಯಯನದ ಫಲಿತಾಂಶಗಳ ಪ್ರಕಾರ ಶೇ. 98ರಷ್ಟು ಜನರಲ್ಲಿ ವಿಟಮಿನ್‌ ಡಿ ಕೊರತೆ ಕಂಡು ಬಂದಿತ್ತು. ಶೇ 85ರಷ್ಟು ಜನರಲ್ಲಿ ಕಬ್ಬಿಣದ ಅಂಶದ ಕೊರತೆ ಕಂಡು ಬಂದಿತು. ಅರ್ಧಕ್ಕಿಂತ ಹೆಚ್ಚು ಜನರಲ್ಲಿ ಕ್ಯಾಲ್ಶಿಯಂ ಕೊರತೆ ಇದ್ದರೆ ಶೇ. 13ರಷ್ಟು ಜನರು ಸ್ಥೂಲಕಾಯದವರಾಗಿದ್ದರು. ಸಮಸ್ಯೆಗೆ ಕಾರಣ ತಿಳಿದ ಮೇಲೆ, ಪರಿಹಾರ ಹುಡುಕುವುದೂ ಕಷ್ಟವಾಗಿರಲಿಲ್ಲ. ಅವರ ಜೀವನಶೈಲಿಯನ್ನು ಸುಧಾರಿಸುವುದು ಮೊದಲ ಸವಾಲಾಗಿತ್ತು. ಸಮತೋಲನ ಆಹಾರ ಸೇವನೆಯ ಬಗ್ಗೆ ಹೆಚ್ಚು ಮಾಹಿತಿ ನೀಡಲಾಯಿತು. ಸ್ವಾಸ್ಥ್ಯಮಯ ಕೂದಲು ಮಾತ್ರ ಸುಂದರ ಕಾಣಬಹುದು.
ಕೂದಲಿನ ಆರೋಗ್ಯಕ್ಕೆ ಅವರ ಒತ್ತಡದ ಜೀವನವನ್ನು ಸರಿಪಡಿಸಲು ಸೂಕ್ತ ಸಲಹೆಗಳನ್ನು ನೀಡಲಾಯಿತು. ನಿಗದಿತ ಸಮಯದಲ್ಲಿ ನಿಯಮಿತವಾಗಿ ನಿದ್ದೆ ಮಾಡುವುದು. ಸಮತೋಲಿತ ಆಹಾರ ಸ್ವೀಕರಿಸುವುದು ತಲೆ, ಬುರುಡೆ ಹಾಗೂ ಕೂದಲನ್ನು ಸ್ವಚ್ಛವಾಗಿರಿಸುವುದು.
ಕೂದಲಿಗಾಗಿ ವಿಶೇಷ ತೈಲ ನೀಡಲಾಯಿತು. ಪೌಷ್ಟಿಕಾಂಶದ ಕೊರತೆ ನೀಗಿಸಲು ಪೂರಕ ಮಾತ್ರೆಗಳನ್ನು ನೀಡಲಾಯಿತು.
ಪೂರಕ ಮಾತ್ರೆಯಲ್ಲಿ ಬೇವು, ನೆಲ್ಲಿಕಾಯಿ, ಎಕ್ಲಿಪ್ತಾ ಆಲ್ಬಾದಂಥ ಗಿಡಮೂಲಿಕೆಗಳ ಮೂಲಕ ಕೂದಲ ಬುಡವನ್ನು ಭದ್ರಗೊಳಿಸಲು ಕ್ರಮಕೈಗೊಳ್ಳಲಾಯಿತು.
ಸೆಲೆನಿಯಂ, ಜಿಂಕ್‌, ಬಯೋಟಿನ್‌, ವಿಟಮಿನ್‌ ಬಿ ಕಾಂಪ್ಲೆಕ್ಸ್‌, ಫಾಲಿಕ್ ಆಸಿಡ್‌ ಮುಂತಾದ ಅಂಶಗಳನ್ನೂ ಈ ಮಾತ್ರೆ ಒಳಗೊಂಡಿದ್ದು, ಮಾತ್ರೆಗಳ ಸೇವನೆಯಿಂದ ಪೌಷ್ಟಿಕಾಂಶ ಕೊರತೆಯನ್ನು ನೀಗಿಸಲಾಯಿತು.
ಕಳೆದ ಎಂಟು ತಿಂಗಳಿಂದ ಈ ಮಾತ್ರೆಗಳ ಸೇವನೆ ಹಾಗೂ ಜೀವನಶೈಲಿಯಲ್ಲಿಯ ಬದಲಾವಣೆಯಿಂದಾಗಿ ರೋಗಿಗಳಲ್ಲಿ ಶೇ 40ರಷ್ಟು ಜನರಲ್ಲಿ ಅಕಾಲಿಕ ನೆರೆ ನಿಗ್ರಹಕ್ಕೆ ಬಂದಿದೆ ಎನ್ನುವುದನ್ನು ಅವರು ಅಂಕಿ ಅಂಶಗಳ ಮೂಲಕ ತೋರಿಸುತ್ತಾರೆ. ವಿರಳಾತೀವಿರಳ ಎಂಬಂತೆ, ಕೆಲವರಲ್ಲಿ ಬಿಳಿಯಾಗಿದ್ದ ಕೂದಲು ಕಪ್ಪು ಬಣ್ಣಕ್ಕೆ ಬದಲಾಗುತ್ತಿರುವುದೂ ಕಂಡು ಬಂದಿದೆ.
ಅಕಾಲ ನೆರೆಗೆ ಚಿಕಿತ್ಸೆ ಇದೆ. ಪೂರಕ ಮಾತ್ರೆ ಸೇವನೆ, ತೈಲ ಲೇಪನ ಹಾಗೂ ಜೀವನಶೈಲಿಯ ಬದಲಾವಣೆಯಿಂದಾಗಿ ಆರೋಗ್ಯವಂತ ಕೂದಲನ್ನು ಪಡೆಯಬಹುದಾಗಿದೆ. ಈ ಪೂರಕ ಮಾತ್ರೆ ಸೇವನೆ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ: 080 23551177​, 235511​88​
ಬಾಲನೆರೆ ತಡೆಯಬೇಕೆಂದರೆ...
*ಊಟದಲ್ಲಿ ನಾರಿನಂಶ ಇರಲಿ, ವಿಟಮಿನ್‌ ಡಿ ಕೊರತೆಯಾಗದಿರಲಿ, ಎಳೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಹಿತ, ತಲೆ ಸ್ವಚ್ಛ ಮತ್ತು ಶುಭ್ರವಾಗಿರಿಸಿಕೊಳ್ಳಬೇಕು, ಸಾಧ್ಯವಿದ್ದಷ್ಟು ಮೈಲ್ಡ್‌ ಶಾಂಪೂ ಬಳಸಿ, ಒತ್ತಡ ಮುಕ್ತ ಜೀವನವನ್ನು ಕಳೆಯಬೇಕು. ಕೂದಲಿಗೆ ಪೋಷಕಾಂಶಗಳು    ದೊರೆಯುವಂತೆ ಸೊಪ್ಪು, ತರಕಾರಿ ಹಣ್ಣುಗಳನ್ನು ಹೇರಳವಾಗಿ ಸೇವಿಸಬೇಕು.
*ಕೇಶ ವಿನ್ಯಾಸಕ್ಕಾಗಿ ಕೂದಲನ್ನು ಆಗಾಗ ಗುಂಗುರುಗೊಳಿಸುವುದು, ನೇರ ಗೊಳಿಸುವುದು ಮುಂತಾದವುಗಳನ್ನು ಮಾಡುವುದು ಸಲ್ಲ. ಕೂದಲು ನೈಸರ್ಗಿಕವಾಗಿದ್ದಷ್ಟೂ ಆರೋಗ್ಯದಿಂದಿರುತ್ತವೆ. ಆರೋಗ್ಯ ಪೂರ್ಣವಾಗಿದ್ದಷ್ಟೂ ಚಂದ ಕಾಣಿಸುತ್ತವೆ, ಕೃತಕ ಬಣ್ಣಗಳ ಬದಲು ಮೆಹೆಂದಿ ಬಳಕೆ ಒಳಿತು

ಮಳೆಗಾಲದಲ್ಲಿ ಕೂದಲಿನ ಆರೈಕೆ

ಉಫ್‌... ಮಳೆಗಾಲ ಬಂತು ಎಂದು ನಿಟ್ಟುಸಿರು ಬಿಡುವುದು ಸಾಮಾನ್ಯ. ಆದರೆ ಮಳೆಗಾಲ ಬಂದೊಡನೆ ಕಾಳಜಿ ಮಾಡಬೇಕಾಗಿರುವ ಅಗತ್ಯದ ಕೆಲಸಗಳ ಸಾಲು ಹೆಚ್ಚುತ್ತದೆ. ಮನೆ ರಿಪೇರಿ, ಗಾಡಿ ಸರ್ವಿಸಿಂಗ್‌ ಇವಕ್ಕೆಲ್ಲ ಗಮನ ನೀಡುತ್ತೇವೆ. ಆದರೆ ನಮ್ಮ ದೇಹ? ಕೂದಲು, ಚರ್ಮ? ಈ ಬಗ್ಗೆ ಒಂದು ಸಣ್ಣ ನಿರ್ಲಕ್ಷ್ಯವೇ ಇರುತ್ತದೆ.
ಬೇಸಿಗೆಯಲ್ಲಿ ಕೇವಲ ಬೆವರಿನ ಸಮಸ್ಯೆ ಇರುತ್ತದೆ. ಮಳೆಗಾಲದಲ್ಲಿ ತಾಪಮಾನ ಮತ್ತು ವಾತಾವರಣದಲ್ಲಿಯ ಅತಿಯಾದ ಮಾಯಿಶ್ಚರೈಸರ್‌ನಿಂದಾಗಿ ಹಲವಾರು ಸಮಸ್ಯೆಗಳು ತಲೆದೋರುತ್ತವೆ.
ತಲೆಯದ್ದೇ ಒಂದು ಸಮಸ್ಯೆ. ಮಳೆಯಲ್ಲಿ ನೆನೆದರಂತೂ ಕೂದಲು ಜಿಗುಟಾಗಿ, ಕೆರೆತ, ಹೊಟ್ಟು ಎಲ್ಲವೂ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಸಹಜವಾಗಿ ಕೂದಲು ಒಣಗಿಸಲಾಗದು. ಗಾಳಿಯಲ್ಲಿಯೂ ತೇವಾಂಶ ಇರುವುದರಿಂದ ಸಹಜವಾಗಿಯೇ ಕೂದಲಿನಲ್ಲಿ ನೀರು ಇಳಿಯುತ್ತದೆ. ಇದರ ಪರಿಣಾಮ ಕೂದಲು ಜಿಡ್ಡಾಗುತ್ತವೆ.
ಇದಲ್ಲದೆ, ಮಳೆಗಾಲವೆಂದು ನೀರು ಶುದ್ಧೀಕರಿಸಲು ಕ್ಲೋರಿನ್‌ ಮುಂತಾದ ರಾಸಾಯನಿಕಗಳನ್ನು ಸುರಿಯಲಾಗಿರುತ್ತದೆ. ಅವು ಬ್ಯಾಕ್ಟೇರಿಯಾಗಳನ್ನು ಕೊಲ್ಲುವುದೇನೋ ನಿಜ. ಆದರೆ ನಮ್ಮ ಕೂದಲಿನ ಬುಡವನ್ನು ನಿಶ್ಯಕ್ತಗೊಳಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಕ್ಲೋರಿನ್‌ನಿಂದಾಗಿ ಚರ್ಮ ಒಣಗುತ್ತದೆ. ಕೆರೆತ ಉಂಟಾಗುತ್ತದೆ.  ಕೆಲವೊಮ್ಮೆ ಕೂದಲು ತುಂಡರಿಸಬಹುದು.
ಮಳೆಯಲ್ಲಿ ಸಿಲುಕಿಕೊಂಡು ತಲೆ ತೊಯ್ದು ಹೋದರೆ, ಮನೆಗೆ ಹೋದೊಡನೆ ತಲೆಸ್ನಾನ ಮಾಡುವುದು ಒಳಿತು. ಮಳೆನೀರಿನೊಂದಿಗೆ ವಾತಾವರಣದಲ್ಲಿರುವ ಮಾಲಿನ್ಯವೂ ಸೇರಿ, ಕೂದಲಿಗೆ ಹಾನಿಯಾಗುತ್ತವೆ. ಕೂದಲುದುರುವುದು, ತುಂಡರಿಸುವುದು, ಗಂಟುಗಂಟಾಗುವುದು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. 
ಮಳೆಗಾಲ ಕಳೆಯುವವರೆಗೂ ಹೊಟ್ಟು ನಿವಾರಣೆಯ ಅಂಶವುಳ್ಳು ಶಾಂಪೂವನ್ನು ನಿಗದಿತವಾಗಿ ಬಳಸುವುದು ಒಳಿತು.
ಮಳೆಗಾಲದಲ್ಲಿ ಕೂದಲನ್ನು ನೇರಗೊಳಿಸುವುದು, ಇಲ್ಲವೇ ಗುಂಗುರುಗೊಳಿಸುವುದು ಹಾಗೂ ಬಣ್ಣ ಹಾಕುವುದು ಮುಂತಾದ ಚಿಕಿತ್ಸೆಗಳನ್ನು ಮುಂದೂಡಿದರೆ ಒಳಿತು.
ಈ ಚಿಕಿತ್ಸೆಗಳನ್ನು ಮಳೆಗಾಲದಲ್ಲಿ ಮಾಡಿಸುವುದರಿಂದ ಕೂದಲು ಒಣಗಿಸುವ ಸಮಸ್ಯೆಯೂ ಇರುತ್ತದೆ. ಜೊತೆಗೆ ಉಷ್ಣ ಕಾರಕಗಳನ್ನು ಬಳಸಿ ಚಿಕಿತ್ಸೆ ನೀಡುವುದರಿಂದ ಕೂದಲು ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಚಿಕಿತ್ಸೆಯಿಂದಾಗಿ ಕೂದಲು ಸೀಳುವುದು, ತುಂಡರಿಸುವುದು, ಬಲಹೀನವಾಗುವುದು. ದಟ್ಟ ಕೂದಲಿನ ಸಾಂದ್ರತೆ ಕಡಿಮೆಯಾಗಬಹುದು.
ಇದೇ ಕಾರಣದಿಂದಾಗಿ ಮಳೆಗಾಲದಲ್ಲಿ ಕೂದಲು ಕಾಂತಿಹೀನವಾಗಿ, ಬಲಹೀನವಾಗಿ, ಸೀಳುಗಳಿಂದ ಕೂಡಿದಂತೆ ಕಾಣುತ್ತವೆ. ಸಾಲದ್ದಕ್ಕೆ ತಲೆ ಹೊಟ್ಟಿನ ಸಮಸ್ಯೆ, ಕೆರೆತದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳ ಬಗ್ಗೆ ಮುಂದಿನ ವಾರ ಚರ್ಚಿಸಲಾಗುವುದು.
(ಮಾಹಿತಿಗೆ: 7676757575)

ಮಧುಮೇಹ ಮಾನಸಿಕ ತುಮುಲ

ಮೂರು ದಿನಗಳ ಹಿಂದಷ್ಟೇ ಆ ಮಹಿಳೆಗೆ ಮಧುಮೇಹ ಇರುವುದು ದೃಢಪಟ್ಟಿತ್ತು. ತನಗೆ ಮಧುಮೇಹ ಇದೆ ಎಂಬುದನ್ನು ಅವರಿಗೆ ಒಪ್ಪಿಕೊಳ್ಳಲಾಗುತ್ತಿರಲಿಲ್ಲ. ಇನ್ನು ತಮ್ಮ  ದಿನಚರಿ ರೂಢಿಸಿಕೊಳ್ಳುವುದು, ಆಹಾರ ಪದ್ಧತಿ ಬದಲಿಸಿಕೊಳ್ಳುವುದು, ನಿಯಮಿತ ವಾಕಿಂಗ್- ವ್ಯಾಯಾಮ ಮಾಡುವುದು ಹೇಗೆ ಎಂದು ಅವರು ಗಾಬರಿಯಾಗಿದ್ದರು.
ಇದನ್ನೆಲ್ಲಾ ಮೊದಲೇ ಮಾಡಿದ್ದರೆ ಮಧುಮೇಹ ಬರುತ್ತಿರಲಿಲ್ಲವೇನೋ, ತಾನೇ ತರಿಸಿಕೊಂಡೆನೇನೂ ಎಂಬ ತಪ್ಪಿತಸ್ಥ ಭಾವನೆ. ಪದೇ ಪದೇ ತಾನು ಡುಮ್ಮಿ, ಕುರೂಪಿ, ಜತೆಗೆ ರೋಗಿಷ್ಟೆಯಾದೆ ಎಂಬ ಬೇಸರ. ಈ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೇ ಮತ್ತೆ ವೈದ್ಯರ ಬಳಿ ಓಡಿ ಬಂದಿದ್ದಳು.
ಇನ್ನೊಬ್ಬರಿಗೆ ಮಧುಮೇಹ ಇರುವ ಪತಿಯ ಸಿಟ್ಟು- ಸೆಡವು ಸಹಿಸಲಾಗುತ್ತಿಲ್ಲ ಎಂಬ ಅಸಹಾಯಕತನ. 20 ವರ್ಷದಿಂದ ಟೈಪ್–2 ಡಯಾಬಿಟಿಸ್ ಇರುವ ಪತಿ  ಕಳೆದ ನಾಲ್ಕು ತಿಂಗಳಿಂದ ವಿಪರೀತವಾಗಿ ಆಡುತ್ತಿದ್ದ. ಅತಿರೇಕದ ವರ್ತನೆಯಿಂದ ನಿಮಿಷ ನಿಮಿಷವೂ ಆತಂಕದಿಂದ ಕಳೆಯುವ ಸ್ಥಿತಿ ಅವರದ್ದಾಗಿತ್ತು.
ಮಧುಮೇಹದಂತಹ ಸ್ಥಿತಿ ಎದುರಾದಾಗ ರೋಗಿಯ ಮೇಲೆ ಉಂಟಾಗುವ ಮಾನಸಿಕ ಆಘಾತಕ್ಕೆ ಇವು ಉದಾಹರಣೆಗಳಷ್ಟೆ. ಎಲ್ಲ ದೀರ್ಘಕಾಲೀನ ರೋಗಗಳು ರೋಗಿಯ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತವೆ. ಆಧುನಿಕ ಔಷಧಗಳು ಕಾಯಿಲೆಗಳನ್ನು ವಾಸಿ ಮಾಡಬಹುದು ಅಥವಾ ನಿಯಂತ್ರಿಸಬಹುದು ಆದರೆ ಆತನನ್ನು ಭಾವನಾತ್ಮಕವಾಗಿ ಸದೃಢಗೊಳಿಸಲಾರವು. ಈ ರೋಗಗಳಿಂದ ಮನುಷ್ಯ ಸಾವನ್ನು ತಪ್ಪಿಸಿಕೊಂಡರೂ ಗುಣಮಟ್ಟದ ಜೀವನ ಸಾಗಿಸುವುದು ಕಷ್ಟ. ಇದೇ ಆತನನ್ನು ಭಾವನಾತ್ಮಕವಾಗಿ ಹೈರಾಣ ಮಾಡುವುದು. ಬೇಕಿದ್ದು ತಿನ್ನುವಂತಿಲ್ಲ, ಕೆಲವು ಪ್ರಕರಣಗಳಲ್ಲಿ ಕುಟುಂಬದ ಮೇಲೆ ಮಿತಿಮೀರಿದ ಅವಲಂಬಿತರಾಗಬೇಕಾಗುವುದು, ಜತೆಗೆ ಚಿಕ್ಕ ವಯಸ್ಸಿನಲ್ಲೇ ಬಂದರೆ ಉದ್ಯೋಗ- ಸಂಬಂಧಗಳ ಮೇಲೂ ಪರಿಣಾಮ ಬೀರುವುದರಿಂದ ರೋಗಿಯ ಮಾನಸಿಕ ತುಮುಲ ಕೆಲ ಬಾರಿ ಹತೋಟಿ ಮೀರಿ ಬಿಡುತ್ತದೆ.  ಇಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಅಂಶದ ಏರಿಳಿತ ರೋಗಿಯ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ.  ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.
ಡಯಾಬಿಟಿಸ್ ಬಂತು ಎಂದೊಡನೆಯೇ ತೂಕ ಇಳಿಸಿಕೊಳ್ಳಿ, ಸಕ್ಕರೆ ಇಲ್ಲದ ಪದಾರ್ಥ ತಿನ್ನಿ, ವ್ಯಾಯಾಮ ಮಾಡಿ, ಆಗಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡಿಕೊಳ್ಳಿ, ಜತೆಗೆ ಮಾತ್ರೆಯನ್ನೋ ಅಥವಾ ಇನ್ಸುಲಿನ್ ಇಂಜೆಕ್ಷನ್ ಅನ್ನೋ ತೆಗೆದುಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಇದೆಲ್ಲ ಒಂದು ರೀತಿಯಲ್ಲಿ ರೋಗಿಯನ್ನು ಗೊಂದಲಕ್ಕೀಡು ಮಾಡುವುದು ಸತ್ಯ. ಮಧುಮೇಹ ಪತ್ತೆಯಾದ ಕೂಡಲೇ ಉಂಟಾಗಬಹುದಾದ ಆಘಾತಗಳು ಹಾಗೂ ವಹಿಸಬೇಕಿರುವ ಎಚ್ಚರಿಕೆ, ಅನುಸರಿಸಬೇಕಿರುವ ಮಾರ್ಗಗಳು ಇಲ್ಲಿವೆ:
*ಒಪ್ಪಿಕೊಳ್ಳದೇ ಇರುವುದು
ಮೊದಲಿಗೆ ತಮಗೆ ಮಧುಮೇಹವಿದೆ ಎಂಬುದನ್ನು ರೋಗಿ ಒಪ್ಪುವುದಿಲ್ಲ. 2-3 ಸಲ ದೃಢಪಟ್ಟ ಮೇಲೂ ತಾನು ಈಚೆಗೆ ತಿಂದಿದ್ದ ಸಿಹಿತಿನಿಸುಗಳಿಂದ ಸಕ್ಕರೆ ಅಂಶ ಏರಿಕೆಯಾಗಿದೆಯೇನೋ ಎಂದು ಸಂಶಯ ಪಡುತ್ತಾನೆ. ಇದು  ಮೊದಲ ಪ್ರತಿಕ್ರಿಯೆ. ಒಂದು ರೀತಿಯಲ್ಲಿ ಇದು ಒಳ್ಳೆಯದು. ನಿಧಾನವಾಗಿ ರೋಗಿ ಮಧುಮೇಹ ಇದೆ ಎಂಬುದನ್ನು ನಂಬುವುದರಿಂದ ಆಘಾತ ಆಗದು.  ಆದರೆ ಆದಷ್ಟು ಬೇಗ ರೋಗವಿದೆ ಎಂಬುದನ್ನು ಒಪ್ಪಿಕೊಂಡು ನಿಗದಿತ ಪಥ್ಯಾಹಾರ, ವ್ಯಾಯಾಮ ಜತೆಗೆ ಔಷಧ ಸೇವನೆಗೆ ಒಗ್ಗಿಕೊಳ್ಳುವುದು ಅತ್ಯಗತ್ಯ.
**ಗೊಂದಲ
ಬಹಳಷ್ಟು ಮಂದಿ ತಮ್ಮ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟ ಹಾಗೂ ಔಷಧಗಳ ಕುರಿತು ಗೊಂದಲಕ್ಕೊಳಗಾಗುತ್ತಾರೆ.  ಯಾವ ಚಿಕಿತ್ಸೆಗೆ ಒಗ್ಗಿಕೊಳ್ಳಬೇಕು? ಯಾವ ಪದ್ಧತಿಯಲ್ಲಿ ರೋಗ ವಾಸಿಯಾಗಬಹುದು ಇಂಥವೇ ಅನುಮಾನಗಳ ನಡುವೆ ಹಲವು ವೈದ್ಯರನ್ನು ಎಡತಾಕುತ್ತಾರೆ. ಇದು ಗೊಂದಲವನ್ನು ಸೃಷ್ಟಿಸುತ್ತದೆ. ಕುಟುಂಬದ ವೈದ್ಯರ ಸಲಹೆಯಂತೆ ಮುಂದುವರಿಯುವುದು ಒಳಿತು.  ತಮ್ಮ ಸಕ್ಕರೆ ಮಟ್ಟ, ವ್ಯಾಯಾಮ, ಪಥ್ಯದ ಕುರಿತು ಡೈರಿ ಮಾಡಿಟ್ಟುಕೊಳ್ಳುವುದು ಉತ್ತಮ. ವೈದ್ಯರ ಬಳಿ ಏನೇನು ಕೇಳಿಕೊಳ್ಳಬೇಕು ಎಂಬ ತಿಳಿವಳಿಕೆಯೂ ಬರುತ್ತದೆ.
**ಸಿಟ್ಟು
ನನಗೇಕೆ ಈ ರೋಗ ಬಂತು?  ಹತೋಟಿಗೆ ಯಾಕೆ ಬರುತ್ತಿಲ್ಲ ಎಂಬ ಸಿಟ್ಟೂ ಕಾಡಬಹುದು. ಆದರೆ ಇದೇ ಸಿಟ್ಟಿನಿಂದ ಕಟ್ಟುನಿಟ್ಟಿನ ಪಥ್ಯ ಮಾಡಿ, ದೇಹದಂಡನೆ ಮಾಡಿದರೆ ಉತ್ತಮ ಆರೋಗ್ಯ ಹೊಂದಬಹುದು. 
**ಒತ್ತಡ
ಮಾನಸಿಕ ಒತ್ತಡ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಿಸುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿವೆ. ಜತೆಗೆ ಒತ್ತಡದಲ್ಲಿ ಹೊತ್ತೊತ್ತಿಗೆ ಊಟ ಮಾಡುವುದು, ಮಾತ್ರೆ ತೆಗೆದುಕೊಳ್ಳುವುದು, ವ್ಯಾಯಾಮ ಎಲ್ಲ ಏರುಪೇರಾಗಿ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಸಕಾರಾತ್ಮಕ ಯೋಚನೆಯಿಂದ, ಶಿಸ್ತುಬದ್ಧವಾಗಿ ಬದುಕುವ ನಿರ್ಣಯದಿಂದ ಒತ್ತಡವನ್ನು ನಿಭಾಯಿಸಬಹುದಾಗಿದೆ. 
**ದುಃಖ
ಬಹಳ ಸಲ ಯಾರಿಗೂ ಬರದ ರೋಗವೊಂದು ತಮ್ಮ ಬದುಕನ್ನೇ ನುಂಗಿದೆ. ಸಾಯುವವರೆಗೂ ಮಾತ್ರೆಗಳೊಂದಿಗೆ ಬದುಕಬೇಕು ಎನ್ನುವ ದುಃಖ ಬಹುತೇಕ ಜನರಿಗೆ ಕಾಡುತ್ತದೆ. ಆದರೆ ಬದುಕಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬ ಪರಮ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾಗುತ್ತದೆ.
**ಲೈಂಗಿಕ ದೌರ್ಬಲ್ಯ
ಇನ್ಸುಲಿನ್ ಡೋಸ್ ಆರಂಭಿಸುವಾಗ ಮಾನಸಿಕ ಏರು ಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಲೈಂಗಿಕ ದೌರ್ಬಲ್ಯವೂ ಕಾಣಿಸಿಕೊಳ್ಳುತ್ತದೆ.
ಹಲವು ವರ್ಷಗಳಿಂದ ಡಯಾಬಿಟಿಸ್ ಇದ್ದವರಿಗೂ ಕೀಳರಿಮೆ, ತಾನು ಸಂಪೂರ್ಣನಲ್ಲ ಎಂಬ ಭಾವ, ಆತಂಕ, ಒತ್ತಡಗಳು ಆರಂಭವಾಗಿ ಖಿನ್ನತೆ, ಲೈಂಗಿಕ ನಿರಾಸಕ್ತಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇವು ಸಂಬಂಧಗಳನ್ನೇ ನಾಶ ಮಾಡಬಹುದು.
ಅಧ್ಯಯನವೊಂದರ ಪ್ರಕಾರ ಡಯಾಬಿಟಿಸ್ ಇರುವ ನಾಲ್ವರು ಪುರುಷರಲ್ಲಿ ಒಬ್ಬರಿಗೆ ಲೈಂಗಿಕ ದೌರ್ಬಲ್ಯ ಉಂಟಾಗುವುದು ಕಂಡುಬಂದಿದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ನಿಮಗೆ ಡಯಾಬಿಟಿಸ್ ಬಂತು ಎಂದೊಡನೆ ಬೇರೆ ರೀತಿ ವರ್ತಿಸುವಂತೆ ಭಾಸವಾಗುತ್ತದೆ. ಇದರಿಂದಾಗಿ ಏಕಾಂಗಿಯಾದ ಭಾವನೆಯೂ ಬರಬಹುದು.
**ನರಗಳ ನೋವು
ಮಧುಮೇಹ ಜೀವನಪೂರ್ತಿ ಜತೆಗಿರುವ ಸಂಗಾತಿ. ಇದರಿಂದಾಗಿ ನರಗಳ ನೋವು ಕಾಣಿಸಿಕೊಳ್ಳಬಹುದು. ಇದು ಗುಣವಾಗಲು ಹೆಚ್ಚು ಸಮಯ ಬೇಕಾಗಬಹುದು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿಯಮಿತ ವ್ಯಾಯಾಮ ಮಾಡಿದರೆ ಸಾಮಾನ್ಯವಾಗಿ ಯಾವುದೇ ಸಮಸ್ಯೆ ಉಂಟಾಗದು. ಅಷ್ಟಾದರೂ ಅಂಗೈ, ಅಂಗಾಲು ನೋವಿಗೆ ಔಷಧ ತೆಗೆದುಕೊಳ್ಳಬಹುದು.
**ಡಯಾಬಿಟಿಸ್ ಮತ್ತು ಖಿನ್ನತೆ
ಶೇ. 15ರಷ್ಟು ಡಯಾಬಿಟಿಸ್ ರೋಗಿಗಳನ್ನು ಖಿನ್ನತೆ ಕಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಪಥ್ಯ- ವ್ಯಾಯಾಮ- ಔಷಧಗಳತ್ತ ಗಮನ ವಹಿಸದ ರೋಗಿಗೆ ಮಧುಮೇಹ ಉಲ್ಬಣಗೊಳ್ಳುತ್ತದೆ.
ಸಕ್ಕರೆ ಅಂಶದ ಏರಿಳಿತ ರೋಗಿಗೆ ಸುಸ್ತು ಮಾಡುತ್ತದೆ, ಆತಂಕ ಉಂಟು ಮಾಡುತ್ತದೆ ಜತೆಗೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ಈ ಲಕ್ಷಣಗಳು ಖಿನ್ನತೆಯಂತೆ ಕಂಡು ಬಂದರೂ ಇದು ಖಿನ್ನತೆ ರೋಗವಲ್ಲ. ಇದಕ್ಕೆ ಹಾರ್ಮೋನ್ ವೈಪರೀತ್ಯವೂ ಕಾರಣ. ವೈದ್ಯರು ಇದನ್ನು ನಿರ್ಧರಿಸಿ ಔಷಧ ನೀಡುತ್ತಾರೆ.
**ಸಕರಾತ್ಮಕ ಧೋರಣೆ: ಜೀವನದಲ್ಲಿಯ ಉತ್ತಮ, ಸಂತೋಷದ ಸಂಗತಿಗಳನ್ನು ನೆನೆಸಿಕೊಳ್ಳುವುದು, ಆಶಾವಾದವಿದ್ದರೆ ಯಾವುದೇ ರೋಗವೂ ಸಹ್ಯವಾಗುತ್ತದೆ.
**ನಿಮ್ಮ ಮೇಲೆ ನಿಮಗೆ ಕರುಣೆ ಇರಲಿ: ಮಾಡಲಾಗದ್ದನ್ನೆಲ್ಲ ಮಾಡಬೇಕೆಂಬ ಒತ್ತಡವನ್ನು ನಿಮ್ಮ ಮೇಲೆ ನೀವು ಹೇರಿಕೊಳ್ಳಬೇಡಿ. ನಿಮ್ಮಿಂದ ಎಷ್ಟು ಸಾಧ್ಯ ಎಂಬುದನ್ನು ನಿರ್ಧರಿಸಿ, ಅಷ್ಟೇ ಗುರಿ ಇಟ್ಟುಕೊಳ್ಳಿ.
**ಬದಲಾಯಿಸಲು ಸಾಧ್ಯವಿಲ್ಲದ್ದನ್ನು ಒಪ್ಪಿಕೊಳ್ಳಿ: ತೀರಾ ಒತ್ತಡ ಉಂಟು ಮಾಡುವಂತಹ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಿ. ನಿಮ್ಮನ್ನು ನೀವು ಈ ಮೂರು ಪ್ರಶ್ನೆ ಕೇಳಿಕೊಳ್ಳಿ; 1) ಇನ್ನೆರಡು ವರ್ಷದ ನಂತರ ನನಗೆ ಈ ವಿಷಯ ಮುಖ್ಯವಾಗಿಯೇ ಇರುತ್ತದೆಯೆ? 2) ಪರಿಸ್ಥಿತಿ ಮೇಲೆ ನನಗೆ ನಿಯಂತ್ರಣವಿದೆಯೇ? 3) ನನ್ನ ಪರಿಸ್ಥಿತಿ ಬದಲಿಸಿಕೊಳ್ಳಲು ನನಗೆ ಸಾಧ್ಯವಿದೆಯೇ? ಇವುಗಳಿಗೆ ನಿಮ್ಮ ಮನಸ್ಸು ನೀಡುವ ಉತ್ತರದ ಆಧಾರದ ಮೇಲೆ ಮನಸ್ಸು ಗಟ್ಟಿಮಾಡಿಕೊಳ್ಳಿ.
**ಭಾವನೆ ಹಂಚಿಕೊಳ್ಳಿ: ನಿಮಗೆ ಏನೆನಿಸುತ್ತಿದೆ ಎಂಬುದನ್ನು ನಿಮ್ಮೊಳಗೆ ಇಟ್ಟುಕೊಂಡು ಕೊರಗಬೇಡಿ. ಕುಟುಂಬ ಸದಸ್ಯರ ಜತೆ ಅಥವಾ ಸ್ನೇಹಿತರ ಜತೆ ಹೇಳಿಕೊಳ್ಳಲು ಮುಜುಗರ ಎನಿಸಿದರೆ ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ. 
**ವ್ಯಾಯಾಮ ಮಾಡಿ: ವ್ಯಾಯಾಮದಿಂದ ಒತ್ತಡ ಬಹಳಷ್ಟು ಕಡಿಮೆಯಾಗುತ್ತದೆ.
**ರಿಲ್ಯಾಕ್ಸ್ ಆಗಿ: ಒತ್ತಡದಿಂದ ಹಗುರಾಗಲು ಹಲವು ರೀತಿಯ ರಿಲ್ಯಾಕ್ಸ್ ಪದ್ಧತಿಗಳಿವೆ. ಸ್ನಾಯುಗಳ ವಿಶ್ರಮಿಸುವಿಕೆ, ದೀರ್ಘ ಶ್ವಾಸೋಚ್ಛಾಸ, ಧ್ಯಾನ ಮತ್ತಿತರ ಪದ್ಧತಿಗಳಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ವೈದ್ಯರ ಬಳಿ ಸಲಹೆ ಪಡೆದು ನಿಮಗೆ ಸರಿ ಅನಿಸಿದ ರಿಲ್ಯಾಕ್ಸ್ ಪದ್ಧತಿ ಅನುಸರಿಸಿ. ಒಟ್ಟಾರೆ ರೋಗ ಬಂತೆಂದು ಅಂಜದೆ  ಮಾನಸಿಕವಾಗಿ ಸಿದ್ಧಗೊಂಡರೆ ಅರ್ಧ ರೋಗವನ್ನು ಗೆದ್ದಂತೆ.
ಮಿಲನಕ್ಕೆ ಅಡ್ಡಿಯೇ?
ಮಧುಮೇಹ ಉಳ್ಳವರು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿ­ಸಿಕೊಳ್ಳದಿದ್ದರೆ ಅವರ ಶೃಂಗಾರಮಯ ಬದುಕುಮಾಸಲಾಗುವುದು ಎನ್ನುತ್ತದೆ ವೈದ್ಯಲೋಕ.
ನಲ್ವತ್ತರ ನಂತರ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಒಬ್ಬರನ್ನೊಬ್ಬರು ಪ್ರೀತಿಸುವ, ಪಡೆಯುವ ಹಂಬಲ ಹೆಚ್ಚಿರುತ್ತದೆ. ಜೀವನ ಬಹುತೇಕ ಒಂದು ಹಂತ ತಲುಪಿರುತ್ತದೆ. ಬದುಕಿನ ಕೆನೆ ಸವಿಯುವ ಹಂತ ಇದು. ಆದರೆ ಇದಕ್ಕೆ ಅಡ್ಡಗಾಲು ಹಾಕುವುದೇ ಮಧುಮೇಹ ಮತ್ತು ರಕ್ತದ ಏರೊತ್ತಡದಂಥ ರೋಗಗಳು.
ಪುರುಷರಲ್ಲಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸದಿದ್ದಲ್ಲಿ ಉದ್ರೇಕದ ಸಮಸ್ಯೆ ಎದುರಾಗಬಹುದು. ಭಾವೋದ್ವೇಗದೊಂದಿಗೆ ದೇಹ ಸ್ಪಂದಿಸದೆ ಇರುವ ಸನ್ನಿವೇಶ ಉಂಟಾಗಬಹುದು. ಹೀಗಾದಾಗ ಪುರುಷರು ತಮ್ಮಲ್ಲಿಯೇ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾರೆ. ಮತ್ತೆ ಹೀಗಾಗಬಹುದು ಎನ್ನುವ ಆತಂಕ ಬೆಳೆಸಿಕೊಳ್ಳುತ್ತಾರೆ. ಈ ಆತಂಕ ಅವರ ರಸಗಳಿಗೆಗಳನ್ನೇ ನುಂಗಿಹಾಕುತ್ತದೆ.
ಮಹಿಳೆಯರಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸದಿದ್ದಲ್ಲಿ ಯೋನಿ ದ್ರವ ಸ್ರವಿಸದೇ ಶುಷ್ಕ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದಾಗಿ ಮಿಲನದ ಸಂದರ್ಭದಲ್ಲಿ ನೋವುಂಟಾಗಬಹುದು. ಅಥವಾ ಮಹಿಳೆಯರು ಸರಸಕೆ ಬಾರದೇ ಸಿಡಿಮಿಡಿ ಮಾಡಿಕೊಳ್ಳಬಹುದು. ಈ ಸಂದರ್ಭವೂ ಮಹಿಳೆಯರಲ್ಲಿ ಆತಂಕ ಮತ್ತು ನೋವಿನ ಭೀತಿಯನ್ನುಂಟು ಮಾಡುತ್ತದೆ. ಖಿನ್ನತೆಗೆ ದೂಡುತ್ತದೆ.
ಉರಿಮೂತ್ರದ ಲಕ್ಷಣವಿದ್ದರೂ ಈ ನೋವು, ಸಿಡಿಮಿಡಿಗೊಳ್ಳುವುದು ಮುಂತಾದವನ್ನು ಮಹಿಳೆಯರು ಅನುಭವಿಸುತ್ತಾರೆ. ಪುರುಷನ ಬಯಕೆಗೆ ಸ್ಪಂದಿಸದೇ ಇರುವ ಸಾಧ್ಯತೆಗಳೇ ಹೆಚ್ಚು. ಇದು ಕೆಲವೊಮ್ಮೆ ಇಬ್ಬರಲ್ಲಿಯೂ ಅಸಮಾಧಾನವನ್ನು ಹುಟ್ಟುಹಾಕಬಹುದು. ನಿರಾಸಕ್ತಿ ಹುಟ್ಟಲು ಕಾರಣವಾಗಬಹುದು. ಒಂದೆರಡು ಕ್ಷಣಗಳ ವೈಫಲ್ಯಕ್ಕೆ ಹುಟ್ಟುವ ನಿರಾಸಕ್ತಿಯು ಸಮಸ್ಯೆಯಾಗಿ ಬೆಳೆಯುತ್ತದೆ. ನಂತರ ಸುಮಧುರ ಕ್ಷಣಗಳು ಕೇವಲ ನೆನಪಾಗಿ ಮಾತ್ರ ಕಾಡಬಲ್ಲವು.
ಹಾಗಿದ್ದಲ್ಲಿ ಸುಖದೊಳು ಒಂದಾಗುವುದೇ ಕನಸಿನ ಮಾತೇ?
ಸಂಗಾತಿಯೊಂದಿಗೆ ಪರಸ್ಪರ ಈ ಬಗ್ಗೆ ಚರ್ಚಿಸಿದ್ದಲ್ಲಿ ಸಹಾನುಭೂತಿಯೊಂದಿಗೆ ಸಂಗಾತಿಯು ನಿಮ್ಮೊಂದಿಗೆ ಪಾಲ್ಗೊಳ್ಳುತ್ತಾರೆ.
ಇಲ್ಲ. ಇಂಥ ಸಂದರ್ಭಗಳು ಉಂಟಾದಾಗಲೆಲ್ಲ, ಆ ಸನ್ನಿವೇಶ ಅಂದಿಗೆ ಮಾತ್ರ ಸೀಮಿತ ಎಂದುಕೊಳ್ಳಬೇಕು.  ಇಷ್ಟಕ್ಕೂ ನಿಮ್ಮ ಪ್ರಣಯದ ಅಂತ್ಯ ಸಂಭೋಗದಲ್ಲಿಯೇ ಕೊನೆಗಾಣಬೇಕೆಂದೂ ಇಲ್ಲ. ಪರಸ್ಪರ ಮೆಚ್ಚುಗೆ ಮತ್ತು ಮುತ್ತಿನ ಮತ್ತು ಇಬ್ಬರನ್ನೂ ಹತ್ತಿರಕ್ಕೆ ತರುತ್ತದೆ. ಮುನ್ನಲಿವಿನಲ್ಲಿ ತೊಡಗಿಸಿಕೊಳ್ಳಬೇಕು. ಪ್ರೀತಿ ಜಾಗೃತವಾಗಿದ್ದಲ್ಲಿ ಯಾವುದೇ ಅಡೆತಡೆಯಾಗದು. ನೋವು ತಾರದು. ಮಾನಸಿಕವಾಗಿ ಪ್ರಫುಲ್ಲರಾಗಿರಬೇಕು.
ಯಾವುದೇ ಕಾರಣಕ್ಕೂ ಜಾಹೀರಾತುಗಳಿಗೆ ಮಾರುಹೋಗಿ ಪ್ರಯೋಗಗಳಿಗೆ ಮುಂದಾಗಬಾರದು. ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಇತರ ಪರಿಹಾರಗಳನ್ನೂ ಪಡೆಯಬಹುದು.

ಬರೀ ಒಗ್ಗರಣೆಗಲ್ಲ ಜೀರಿಗೆ

ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಜೀರಿಗೆ ಆ್ಯಸಿಡಿಟಿಯನ್ನೂ ದೂರ ಓಡಿಸುತ್ತದೆ. ಬಾಣಂತಿಯರು ಸೇವಿಸಿದರೆ ಎದೆಹಾಲು ಹೆಚ್ಚಿಸುತ್ತದೆ. ಮಗುವಿಗೆ ಹೊಟ್ಟೆನೋವು ಸಹ ಆಗುವುದಿಲ್ಲ. ಉದರ ಸಂಬಂಧೀ ಸಮಸ್ಯೆಗಳಿಗೆ ಜೀರಿಗೆ ರಾಮಬಾಣವೆಂದೇ ಹೇಳಬಹುದು.  
*ಜೀರಿಗೆಯನ್ನು ನುಣ್ಣಗೆ ಪುಡಿ ಮಾಡಿ ತೆಂಗಿನ ಕಾಯಿ ಹಾಲಿನಲ್ಲಿ ಬೆರೆಸಿ ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಉಗುರು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆ ಬರುವುದರಿಲ್ಲ
*ಅಜೀರ್ಣದಿಂದ ಭೇದಿಯಾಗುತ್ತಿದ್ದರೆ ಹುರಿದ ಅಕ್ಕಿ-ತರಿಗೆ ಜೀರಿಗೆ ಪುಡಿ ಹಾಗೂ ಸಕ್ಕರೆ ಅಥವಾ ಉಪ್ಪು ಹಾಕಿ ಗಂಜಿ ತಯಾರಿಸಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
*ಜೀರಿಗೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
*ಜೀರಿಗೆ ಕಷಾಯಕ್ಕೆ ಹಾಲು, ಜೇನುತುಪ್ಪು ಸೇರಿಸಿ ಪ್ರತಿದಿನ ಸೇವಿಸಿದರೆ ಎದೆಹಾಲು ಅಧಿಕವಾಗುವುದು.
*ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಕಲಸಿ ಕುಡಿದರೆ ಪಿತ್ತ ಶಮನವಾಗುತ್ತದೆ.
*ಎರಡು ಚಮಚ ಹುರಿದ ಜೀರಿಗೆಯನ್ನು ಒಂದು ದೊಡ್ಡ ಲೋಟ ನೀರು ಹಾಕಿ ಕುದಿಸಿ, ಅರ್ಧ ಲೋಟಕ್ಕೆ ಇಳಿಸಿ ಅದಕ್ಕೆ ಉಪ್ಪು - ತುಪ್ಪ ಬೆರೆಸಿ ಸೇವಿಸಿದರೆ, ಹೊಟ್ಟೆ ಉಬ್ಬರ, ನೋವು ಗುಣವಾಗುತ್ತದೆ.
*ಹೊಟ್ಟೆ ನೋವು, ವಾಂತಿ ಇದ್ದಾಗ  ಒಂದು ಚಮಚ ಜೀರಿಗೆ , ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಬೇಕು. ತಣ್ಣಗಾದ ನಂತರ ಅದಕ್ಕೆ ಸಕ್ಕರೆ , ನಿಂಬೆ ಪಾನಕ ಬೆರೆಸಿ ದಿನಕ್ಕೆ ಮೂರು ಸಲ ಸೇವಿಸಿದರೆ ಹೊಟ್ಟೆ ತೊಳೆಸುವುದು ಮತ್ತು ವಾಂತಿ ನಿಲ್ಲುತ್ತದೆ.
*ನೆನೆಸಿದ ಮೆಂತ್ಯದ ಬೀಜ, ಜೀರಿಗೆ , ಉಪ್ಪು ಹಾಗೂ ಖಾರ ಹಾಕಿ ಚಟ್ನಿ ತಯಾರಿಸಿ ಚಪಾತಿ ಜೊತೆ ಸೇವಿಸಿ. ನಂತರ ಹಾಲನ್ನು ಕುಡಿದರೆ ಒಂದು ವಾರದಲ್ಲಿ ಎದೆ ಹಾಲು ಹೆಚ್ಚಾಗುತ್ತದೆ .* ಜೀರಿಗೆ, ಸಕ್ಕರೆ, ಒಣಶುಂಠಿ ಮತ್ತು ಅಡಿಗೆ ಉಪ್ಪು ಇವುಗಳನ್ನು ಒಂದೊಂದು ಟೀ ಚಮಚದಷ್ಟು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಒಂದು ಲೋಟ ಬಿಸಿ ನೀರಿಗೆ ಹಾಕಿ ಒಂದು ಹೋಳು ನಿಂಬೆಹಣ್ಣಿನ ರಸವನ್ನು ಅದಕ್ಕೆ ಹಿಂಡಿ ಕುಡಿಯುವುದರಿಂದ ಉದರ ಸಂಬಂಧ ರೋಗಗಳು ಗುಣವಾಗವುದು
*ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಸಕ್ಕರೆ ಮತ್ತು ನೀರು ಸೇರಿಸಿ ಕುಡಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ .
*ಒಂದು ಲೋಟ ನೀರಿಗೆ ಜಜ್ಜಿದ ಶುಂಠಿ ಮತ್ತು ಕುಟ್ಟಿದ ಜೀರಿಗೆ ಹಾಕಿ ಕುದಿಸಿ, ಸೋಸಿ, ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ. ಬೇಕಿದ್ದರೆ ಕಾಳು ಮೆಣಸಿನ ಪುಡಿ ಸೇರಿಸಿ. ಸೇವಿಸಿ. ಇದರಿಂದ ಬೇಸಿಗೆಯ ಸಮಸ್ಯೆಗಳನ್ನು ನಿವಾರಿಸಬಹುದು.
ಜೀರಿಗೆಯ  ಔಷಧ
ಜೀರಿಗೆಯ ಜೊತೆ ಇನ್ನಷ್ಟು ಪದಾರ್ಥಗಳನ್ನು ಸೇರಿಸಿ ಔಷಧ ತಯಾರಿಸಿಕೊಳ್ಳುವ ಬಗ್ಗೆ ಇಲ್ಲಿದೆ ಮಾಹಿತಿ:
* ಅರ್ಧ ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ. ಪ್ರತಿನಿತ್ಯ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. 15 ರಿಂದ 20 ದಿನದವರೆಗೆ ಸೇವಿಸುವುದರಿಂದ ಚರ್ಮರೋಗ ಕಡಿಮೆಯಾಗುತ್ತದೆ. ಅರ್ಧ  ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ, ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯ ತಯಾರಿಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ. ಜೀರಿಗೆ ನೀರು ಮತ್ತು ಜೀರಿಗೆ ಕಷಾಯ ರಕ್ತದ ಒತ್ತಡವನ್ನು ಸರಿ ಪಡಿಸುತ್ತದೆ. ಪಿತ್ತ ಮತ್ತು ಅಜೀರ್ಣದಿಂದ ಆಗುವ ತೊಂದರೆಗಳನ್ನು ಸರಿ ಪಡಿಸುತ್ತದೆ.
* ಒಂದು ಬೊಗಸೆ ಹುರಿದ ಮೆಂತ್ಯ, ಹುರಿದ ಜೀರಿಗೆಗೆ ಒಂದು ಚಮಚ ಹುರಿದ ಕಾಳು ಮೆಣಸು ಸೇರಿಸಿ ಪುಡಿಮಾಡಿ. ಇದನ್ನು ನೀರಿನೊಂದಿಗೆ ನಿತ್ಯ ಸೇವಿಸಿದರೆ ಸಂಧಿವಾತ ಕಡಿಮೆಯಾಗುತ್ತದೆ.
* ಒಂದು ಚಮಚ ಜೀರಿಗೆ ಮತ್ತು ಮೆಂತ್ಯ ರಾತ್ರಿ ನೆನೆಸಿಡಿ. ಬೆಳಗ್ಗೆ ಒಂದು ಹಿಡಿ ಮೆಂತ್ಯದ ಸೊಪ್ಪು ಮತ್ತು ತೆಂಗಿನ ಕಾಯಿ ಹಾಲಿನ ಜೊತೆಗೆ ಇದನ್ನೂ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಪೇಸ್್ಟ ತಯಾರಿಸಿ. ಈ ಪೇಸ್ಟನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲಿಗೆ ಹೊಳಪು ಬರುತ್ತದೆ. ತಲೆಹೊಟ್ಟು ಮಾಯವಾಗುತ್ತದೆ.

Tuesday, 30 September 2014

TET study and Pencil story

ಪೆನ್ಸಿಲ್‌ ಕತೆ

ಪೆನ್ಸಿಲ್‌ ಆವಿಷ್ಕಾರ ಆಗಿದ್ದು ತೀರಾ ಇತ್ತೀಚೆಗೆ. ಅಂದರೆ 16ನೇ ಶತಮಾನದಲ್ಲಿ. ಅದಕ್ಕಿಂತಲೂ ಮೊದಲು ನಮ್ಮ ಜಗತ್ತಿನಲ್ಲಿ ‘ಬರವಣಿಗೆ’ ಇತ್ತು. ‘ಬರವಣಿಗೆ’ಗೆ ಹಲವು ಸಹಸ್ರಮಾನಗಳಷ್ಟು ಐತಿಹ್ಯ ಇದೆ. 25–30 ಸಾವಿರ ವರ್ಷಗಳ ಹಿಂದೆಯೇ ಮಾನವ ತಾನು ವಾಸಿಸುತ್ತಿದ್ದ ಗುಹೆಗಳ ಗೋಡೆಗಳಲ್ಲಿ ತನ್ನ ಕಲ್ಪನೆಗಳನ್ನು ಚಿತ್ರ ಬಿಡಿಸುವುದರ ಮೂಲಕ ಜಗತ್ತಿಗೆ ತಿಳಿ ಹೇಳಲು ಆರಂಭಿಸಿದ್ದ. ಆದರೆ, ‘ಬರವಣಿಗೆ’ಯ ಸುಧಾರಿತ ರೂಪ ಅಭಿವೃದ್ಧಿಯಾಗಲು ಸಾವಿರಾರು ವರ್ಷಗಳು ಹಿಡಿದವು.
ದಾಖಲಾತಿಯ (ಪ್ರಾಣಿಗಳ ಸಂಖ್ಯೆ, ಆಹಾರ ಧಾನ್ಯಗಳ ಅಳತೆ, ಭೂಮಿಯ ಮಾಲೀಕತ್ವ) ಉದ್ದೇಶಕ್ಕಾಗಿ ಕ್ರಿ.ಪೂ 4 ಸಾವಿರ ವರ್ಷಗಳ ಹಿಂದೆ ಸುಧಾರಿತ ಬರವಣಿಗೆಯ ವಿಧಾನ ಚಾಲ್ತಿಗೆ ಬಂತು ಎಂದು ಹೇಳುತ್ತದೆ ಇತಿಹಾಸ. ಆವೆ ಮಣ್ಣಿನಲ್ಲಿ ಚಿಹ್ನೆಗಳನ್ನು ಅಚ್ಚೊತ್ತುವುದರ ಮೂಲಕ ಪುರಾತನ ನಾಗರಿಕತೆಗಳ ಜನರು ಮಾಹಿತಿಗಳನ್ನು ದಾಖಲು ಮಾಡುತ್ತಿದ್ದರು. ಇದಕ್ಕೆ ಪೂರಕವಾದ ಪುರಾವೆಗಳು ಮೆಸಪೊಟೋಮಿ­ಯಾದ ಉರುಕ್‌ನಲ್ಲಿ ನಡೆದ ಉತ್ಖನನ ಸಂದರ್ಭದಲ್ಲಿ ದೊರೆತಿವೆ.
ಇದೇ ಅವಧಿಯಲ್ಲಿ ಈಜಿಪ್ಟ್‌ ಮತ್ತು ದಕ್ಷಿಣ ಸುಡಾನಿನಲ್ಲಿ ಪ್ಯಾಪಿರಸ್‌ ಕಾಗದ (ಪ್ಯಾಪಿರಸ್ ಗಿಡದ ತಿರುಳಿನಿಂದ ಮಾಡಿದ ಕಾಗದ) ತಯಾರಾಯಿತು. ಆಧುನಿಕ ‘ಬರವಣಿಗೆ’ ವಿಧಾನಕ್ಕೆ ಸ್ಪಷ್ಟ ರೂಪ ಸಿಕ್ಕಿದ್ದು ಪ್ಯಾಪಿರಸ್‌ನ ಆವಿಷ್ಕಾರ ದಿಂದ. ಈ ಕಾಗದದಲ್ಲಿ ಬರೆಯಲು ತುದಿ ಚೂಪಾಗಿದ್ದ ಸಾಧನಗಳನ್ನು (ಲೋಹ­ದಿಂದ ಮಾಡಿದ ಸ್ಟೈಲಸ್‌ ಎಂಬ ಸಾಧನ ಅವುಗಳಲ್ಲಿ ಒಂದು) ಅಂದಿನ ಜನ ಬಳಸುತ್ತಿದ್ದರು. ಪಕ್ಷಿಗಳ ಗರಿಗಳನ್ನೂ ಬರ­ವಣಿಗೆಗೆ ಬಳಸಿಕೊಂಡಿದ್ದರು.
ಇರಲಿ. ಪೆನ್ಸಿಲ್‌ ವಿಷಯಕ್ಕೆ ಬರೋಣ. ‘ಪೆನ್ಸಿಲ್‌’ ಎಂಬ ಹೆಸರು ಬಂದಿದ್ದು ಫ್ರೆಂಚ್‌ ಭಾಷೆಯ ‘ಪೆನ್ಸೆಲ್‌’ ಹಾಗೂ ಲ್ಯಾಟಿನ್‌ನ ‘ಪೆನಿಸಲಸ್‌’ ಎಂಬ ಪದಗಳಿಂದ ಎಂದು ಹೇಳುತ್ತಾರೆ ತಜ್ಞರು. ಈ ಎರಡೂ ಪದಗಳ ಅರ್ಥ ಒಂದೇ. ‘ಚಿಕ್ಕ ಬಾಲ’. ಫ್ರಾನ್ಸ್‌ನಲ್ಲಿ ಕಲಾವಿದರು ಚಿತ್ರ ಬಿಡಿಸುವ ಬ್ರಷ್‌ ಅನ್ನು ‘ಪೆನ್ಸೆಲ್‌’ ಎಂದು ಕರೆಯುತ್ತಿದ್ದರು. ಒಂಟೆಯ ಬಾಲದ ರೋಮದಿಂದ ಮಾಡಿದ ಬ್ರಷ್‌ಗೆ ‘ಪೆನಿಸಲಸ್‌’ ಎಂದು ಲ್ಯಾಟಿನ್‌ನಲ್ಲಿ ಹೇಳುತ್ತಿದ್ದರು. ‘ಗ್ರಾಫೈಟ್‌’ ಎಂಬ ಇಂಗಾಲದ ಭಿನ್ನರೂಪವು ಭೂಮಿಯಲ್ಲಿ ಕಂಡು ಬರುವವರೆಗೆ ಪೆನ್ಸಿಲ್‌ನ ಪರಿಚಯ ಜಗತ್ತಿಗೆ ಆಗಿರಲಿಲ್ಲ.
ರಸಾಯನ ವಿಜ್ಞಾನ ಕ್ಷೇತ್ರ ಆಗಷ್ಟೇ ಕಣ್ಣು ಬಿಡುತ್ತಿದ್ದ ಸಮಯ ಅದು. ಕ್ರಿ.ಶ 1565ರಲ್ಲಿ ಇಂಗ್ಲೆಂಡ್‌ನ ಕಂಬ್ರಿಯಾ ಕೌಂಟಿಯ ಸದ್‌ವೈಟ್‌ ಎಂಬ ಹಳ್ಳಿಯಲ್ಲಿ ಗ್ರಾಫೈಟ್‌ನ ಭಾರಿ ನಿಕ್ಷೇಪ ಪತ್ತೆಯಾಗಿತ್ತು. ಈ ಗ್ರಾಫೈಟ್‌ ಪರಿಶುದ್ಧವಾಗಿದ್ದುದು ಮಾತ್ರವಲ್ಲದೆ ಘನ ಸ್ಥಿತಿಯಲ್ಲಿತ್ತು. ಸುಲಭವಾಗಿ ಅದನ್ನು ಕಡ್ಡಿಗಳ ರೂಪದಲ್ಲಿ ಕತ್ತರಿಸಬಹುದಿತ್ತು. ಆದರೆ, ಅಂದಿನ ಜನರು ಇದನ್ನು ಸೀಸದ ಅದಿರು ಎಂದು ತಪ್ಪಾಗಿ ಭಾವಿಸಿದ್ದರು. (ಈಗಲೂ ಪೆನ್ಸಿಲ್‌ ಅನ್ನು ಸೀಸದಿಂದ ಗುರುತಿಸಲಾಗುತ್ತದೆ. ಉದಾಹರಣೆಗೆ ಲೆಡ್‌ ಪೆನ್ಸಿಲ್‌).
ಕ್ರಮೇಣ ಗ್ರಾಫೈಟ್‌ನ ಪ್ರಾಮುಖ್ಯ ಜನರಿಗೆ ಅರಿವಾಗತೊಡಗಿತ್ತು. ಅದರಿಂದ ಏನೇನು ಉಪಯೋಗವಿದೆ ಎಂಬುದು ತಿಳಿದ ತಕ್ಷಣ ಇಂಗ್ಲೆಂಡ್‌ನ ರಾಜಾಡಳಿತ ಗ್ರಾಫೈಟ್‌ನ ಅದಿರನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಕಳ್ಳತನ ತಡೆಯುವುದಕ್ಕಾಗಿ ಆಡಳಿತವು ನಿಕ್ಷೇಪದ ಸುತ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತಂತೆ!
ಮೊದಲ ಬಾರಿಗೆ ಜಗತ್ತಿನಲ್ಲಿ ಪೆನ್ಸಿಲ್‌­ಗಳು ಕಾಣಿಸಿಕೊಂಡಿದ್ದು ಇಲ್ಲಿಯೇ. ಮೂಲತಃ ಮೃದುತ್ವ ಗುಣ ಹೊಂದಿರುವ ಗ್ರಾಫೈಟ್‌, ಸುಲಭವಾಗಿ ತುಂಡಾಗುತ್ತಿದ್ದು­ದರಿಂದ ಅದನ್ನು ಸ್ಥಿರವಾಗಿ ನಿಲ್ಲಿಸುವು­ದಕ್ಕಾಗಿ ಅದರ  ಸುತ್ತ ದಾರವನ್ನು ಇಲ್ಲವೇ ಕುರಿಯ ಚರ್ಮವನ್ನು ಅಲ್ಲಿನ ಜನರು ಸುತ್ತುತ್ತಿ­ದ್ದರು. ಗ್ರಾಫೈಟ್‌ನ ಪ್ರಯೋಜನದ ಬಗ್ಗೆ ತಿಳಿವಳಿಕೆ ಬರುತ್ತಿದ್ದಂತೆ ಜಗತ್ತಿನ ಚಿತ್ರ ಕಲಾವಿದರೆಲ್ಲರೂ ಇದರತ್ತ ಆಕರ್ಷಿತ­ರಾದರು. ನೈಸರ್ಗಿಕವಾಗಿ ಸಿಗುತ್ತಿದ್ದ ಗ್ರಾಫೈಟ್‌ನಿಂದ ಮಾಡಿದ ಚೌಕಾಕಾರದ ಪೆನ್ಸಿಲ್‌ಗಳು ಜನಪ್ರಿಯಗೊಂಡವು.
ಇಟಲಿಯ ದಂಪತಿ ಸಿಮೊನಿವೊ ಮತ್ತು ಲಿಂಡಿಯಾನಾ ಬೆರ್ನಾಕೊಟ್ಟಿ ಅವರು 1560ರಲ್ಲಿ ಮರದ ಪೆನ್ಸಿಲ್‌ ರೂಪಿಸುವ ಪ್ರಯತ್ನವನ್ನು ಮಾಡಿದರು. ಚಪ್ಪಟೆಯಾಗಿದ್ದ, ಅಂಡಾಕಾರದ ಈ ಪೆನ್ಸಿಲ್‌ ಹೆಚ್ಚು ದೃಢವಾಗಿತ್ತು. ಜುನಿಪರ್‌ ಮರದ ಕಡ್ಡಿಗೆ ತೂತು ಕೊರೆದು ನಂತರ ಗ್ರಾಫೈಟ್‌ ಕಡ್ಡಿಯನ್ನು ಅದರಲ್ಲಿ ಅಳವಡಿಸಲಾಗಿತ್ತು.
ನಂತರ, ಮತ್ತೊಂದು ಸುಧಾರಿತ ವಿಧಾನವನ್ನು ಆವಿಷ್ಕರಿಸಲಾಯಿತು. ಎರಡು ಕಡ್ಡಿಯನ್ನು ಅಡ್ಡವಾಗಿ ತುಂಡ ರಿಸಿ, ಅದನ್ನು ಅಳತೆಗೆ ತಕ್ಕಂತೆ ಕೊರೆದು ಅದರಲ್ಲಿ ಗ್ರಾಫೈಟ್‌ ಕಡ್ಡಿ ಅಳವಡಿಸಿದ ಬಳಿಕ ಸೀಳಿದ್ದ ಎರಡು ತುಂಡುಗಳನ್ನು ಗೋಂದಿನ ಮೂಲಕ ಅಂಟಿಸಲಾಗಿತ್ತು. ಈ ವಿಧಾನ ಈಗಲೂ ಬಳಕೆಯಲ್ಲಿದೆ. ಗ್ರಾಫೈಟ್‌ನ ಪುಡಿಯಿಂದಲೂ ಕಡ್ಡಿ ತಯಾರಿಸುವ ವಿಧಾನ ಬೆಳಕಿಗೆ ಬರುವವರೆಗೆ ಪೆನ್ಸಿಲ್‌ ತಯಾರಿಕೆಯಲ್ಲಿ ಇಂಗ್ಲೆಂಡ್‌ ಪಾರಮ್ಯ ಸಾಧಿಸಿತ್ತು. ಗ್ರಾಫೈಟ್‌ ಪುಡಿಯಿಂದ ಪೆನ್ಸಿಲ್‌ ತಯಾರಿಸುವ ಪ್ರಥಮ ಪ್ರಯತ್ನ 1662ರಲ್ಲಿ ಜರ್ಮನಿಯ ನುರೆಂಬರ್ಗ್‌­ನಲ್ಲಿ ನಡೆಯಿತು. ಗ್ರಾಫೈಟ್‌ ಪುಡಿ­ಯೊಂದಿಗೆ ಗಂಧಕ ಮತ್ತು ಆಂಟಿಮೊನಿ ಎಂಬ ಧಾತುವನ್ನು ಬೆರೆಸಿ ಪೆನ್ಸಿಲ್‌ ತಯಾರಿಸಲಾಗಿತ್ತು.
1795ರಲ್ಲಿ ನಿಕೊಲಸ್‌ ಜಾಕಸ್‌ ಕೊಂಟೆ ಎಂಬುವವರು ಗ್ರಾಫೈಟ್‌ ಪುಡಿಗೆ ಮಣ್ಣನ್ನು ಬೆರೆಸಿ, ಅದರಿಂದ ಕಡ್ಡಿ ತಯಾರಿಸಿ, ಬೆಂಕಿಗೆ ಹಿಡಿದು ಒಣಗಿಸುವ ಕಲೆಯನ್ನು ಕರಗತ ಮಾಡಿಕೊಂಡರು. ಗ್ರಾಫೈಟ್‌ ಪುಡಿ ಮತ್ತು ಮಣ್ಣಿನ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುವುದರಿಂದ ಗ್ರಾಫೈಟ್‌ ಕಡ್ಡಿಯ ಗಡಸುತನದಲ್ಲಿ ಏರಿಳಿತ ತರಬಹುದು ಎಂಬುದನ್ನು ಅವರು ಪರಿಚಯಿಸಿದರು.
ಅಮೆರಿಕದ ಹೇಮನ್‌ ಲಿಪ್‌ಮನ್‌ ಎಂಬುವವರು 1858ರಲ್ಲಿ ಪೆನ್ಸಿಲ್‌ನ ತುದಿಗೆ ರಬ್ಬರ್‌ (ಇರೇಸರ್‌) ಅಳವಡಿಸಿ, ಪೇಟೆಂಟ್‌ ಪಡೆದರು. ಪೆನ್ಸಿಲ್‌ಗಳ ಮೊನೆಯನ್ನು ಚಾಕು, ಬ್ಲೇಡ್‌ ಸೇರಿದಂತೆ ಇತರ ಹರಿತ ಸಾಧನಗಳಿಂದಲೇ ಚೂಪು ಮಾಡಬೇಕಾಗಿ­ದ್ದುದರಿಂದ ಸಾಕಷ್ಟು ಪೆನ್ಸಿಲ್‌ಗಳು ಬೇಗ ಮುಗಿಯುತ್ತಿತ್ತು. ಇದನ್ನು ತಪ್ಪಿಸಲು ಎರಡನೇ ವಿಶ್ವ ಮಹಾ ಸಮರದ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ ಶಾರ್ಪ­ನರ್‌­­ಗಳನ್ನು (ಮೊನೆ ಚೂಪು ಮಾಡುವ ಸಾಧನ) ಆವಿಷ್ಕರಿಸ­ಲಾಯಿತು. ಕಾಲಕ್ರಮೇಣ ಪೆನ್ಸಿಲ್‌ಗಳ ತಯಾರಿಕೆ­­­­ಯಲ್ಲಿ ಸಾಕಷ್ಟು ಬದಲಾವಣೆ­ಗಳಾದವು. ವಿವಿಧ ಉದ್ದೇಶಗಳಿಗಾಗಿ ಬಳಸುವ ಥರಾವರಿ ಪೆನ್ಸಿಲ್‌ಗಳು ಮಾರುಕಟ್ಟೆಗೆ ಬಂದವು.
1977ರಲ್ಲಿ ಬಣ್ಣದ ಪೆನ್ಸಿಲ್‌­­ಗಳು ರೂಪುಗೊಂಡವು. 36 ಬಣ್ಣಗಳಲ್ಲಿ ಪೆನ್ಸಿಲ್‌ಗಳು ಗ್ರಾಹಕರ ಕೈಯನ್ನು ಅಲಂಕರಿಸಿ ದವು. 1994ರಲ್ಲಿ ಕಲ್ಲಿದ್ದಲಿನಿಂದ ಮಾಡಿದ ಪೆನ್ಸಿಲ್‌ಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟವು. 1999ರಲ್ಲಿ ಜಗತ್ತಿನ ಮೊದಲ ಲೋಹದ ಪೆನ್ಸಿಲ್‌ ತಯಾರಾಯಿತು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಡಿಜಿಟಲ್‌ ಪೆನ್ಸಿಲ್‌ಗಳೂ ನಮ್ಮ ಕಣ್ಣಮುಂದಿವೆ.

ಬೆಂಕಿ ಕಡ್ಡಿಯ ಜ್ವಾಲೆ

ಬೇಕಾಗುವ ಸಾಮಗ್ರಿಗಳು: ಮೂರು ಪ್ರನಾಳಗಳು, ಸತುವಿನ ತುಂಡು(Zn),  ಅಮೃತಶಿಲೆಯ  ಚೂರುಗಳು(CaCO3), ಹೈಡ್ರೊ ಕ್ಲೊರಿಕ್ ಆಮ್ಲ (HCl), ಪೊಟ್ಯಾಸಿಯಂ ಕ್ಲೊರೇಟ್(KClO3),  ಬೂದಿ, ಬೆಂಕಿ ಪೆಟ್ಟಿಗೆ,
ವಿಧಾನ: ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ. ಮೊದಲ  ಪ್ರನಾಳದಲ್ಲಿ ಸತುವಿನ ತುಂಡುಗಳನ್ನು ಹಾಗೂ ಎರಡನೆಯದರಲ್ಲಿ  ಅಮೃತಶಿಲೆಯ ಚೂರುಗಳನ್ನು ಹಾಕಿ ಅವಕ್ಕೆ ೫ ಸಿಸಿ ದುರ್ಬಲ ಹೈಡ್ರೊಕ್ಲೊರಿಕ್ ಆಮ್ಲವನ್ನು ಹಾಕಿ. 3ನೇ ಪ್ರನಾಳದಲ್ಲಿ ಸ್ವಲ್ಪ ಪೊಟ್ಯಾಸಿಯಂ ಕ್ಲೊರೇಟನ್ನು ಬೂದಿಯೊಂದಿಗೆ ಬೆರಸಿ ಹಾಕಿ.
ಪ್ರಶ್ನೆ:
1. ಮೊದಲ ಪ್ರನಾಳದ ಬಾಯಿಯನ್ನು ಹೆಬ್ಬೆರಳಿನಿಂದ ಮುಚ್ಚಿ ಜೋರಾಗಿ ಅಲುಗಾಡಿಸಿ. ತಕ್ಷಣ ಅದರ ಬಾಯಿ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿಬಿಟ್ಟು ನೋಡಿ. ಏನಾಯಿತು?
2. ಎರಡನೆಯ ಪ್ರನಾಳದ ಬಾಯಿಯ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿ ಬಿಡಿ. ಏನಾಯಿತು?
3. ಮೂರನೆಯ ಪ್ರನಾಳವನ್ನು ಕಾಯಿಸಿ, ಅನಂತರ ಅದರಲ್ಲಿ ಜ್ವಾಲೆ ರಹಿತ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಬಿಡಿ. ಏನಾಯಿತು? ಯಾಕೆ?
ಉತ್ತರ: 1. ಮೊದಲ ಪ್ರನಾಳದಲ್ಲಿ ಹೈಡ್ರೊಜನ್ ಅನಿಲವು ಬಿಡುಗಡೆ ಯಾಗುತ್ತದೆ. Zn+2 HCl → ZnCl2 + H2 ಹೈಡ್ರೊಜನ್ ದಹನಕಾರಿ ಅನಿಲವಾದ್ದರಿಂದ ಪ್ರನಾಳದ ಬಾಯಿಯ ಹತ್ತಿರ ಉರಿಯುವ ಬೆಂಕಿ ಕಡ್ಡಿ ಹಿಡಿದಾಗ ಸ್ಫೋಟದ ಶಬ್ದ ಬರುತ್ತದೆ.
2. ಎರಡನೆಯ ಪ್ರನಾಳದಲ್ಲಿ ಕಾರ್ಬನ್‌ಡೈಆಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ. CaCO3 + 2 HCl → CaCl2+CO2+H2O.
ಇದು ಬೆಂಕಿಯನ್ನು ಆರಿಸುತ್ತದೆ.
3. ಮೂರನೆಯ ಪ್ರನಾಳದಲ್ಲಿ ಆಕ್ಸಿಜನ್ ಅನಿಲ ಬಿಡುಗಡೆಯಾಗುತ್ತದೆ. ಇದು ದಹನ ಕ್ರಿಯೆಗೆ ಸಹಕಾರಿ. ಆದ್ದರಿಂದ ಬೆಂಕಿ ಕಡ್ಡಿ ಜ್ವಾಲೆಯಾಗಿ ಉರಿಯುತ್ತದೆ.

ಟಿಇಟಿ: ಓದುವುದೇನು?

ಪ್ರಶ್ನೆ ಪತ್ರಿಕೆಯಲ್ಲಿನ ವಿಷಯ ಮತ್ತು ಅಂಕಗಳ ಬಗ್ಗೆ ಇಲ್ಲಿದೆ ವಿವರ.
ಅರ್ಹತಾ ಪರೀಕ್ಷೆಯು ಭಾಗ 1ರಲ್ಲಿ (ಪ್ರಾಥಮಿಕ ಶಾಲೆ) ಒಟ್ಟು ಐದು ವಿಷಯಗಳನ್ನೊಳಗೊಂಡ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ.
1. ಶಿಶು ಮನೋವಿಜ್ಞಾನ ಮತ್ತು ವಿಕಸನ
2. ಭಾಷೆ: ಕನ್ನಡ / ಉರ್ದು/ಮರಾಠಿ / ತಮಿಳು / ತೆಲಗು /ಮಲಯಾಳಂ
3. ಆಂಗ್ಲ ಭಾಷೆ
4. ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ)5. ಗಣಿತ ಪ್ರತಿ ವಿಷಯದಲ್ಲ್ಲೂ ಒಂದು ಅಂಕದ 30 ಪ್ರಶ್ನೆಗಳಿದ್ದು, ಐದು ವಿಷಯಗಳಿಗೆ ಒಟ್ಟು 150 ಅಂಕಗಳನ್ನು ನಿಗದಿಪಡಿಸಲಾಗಿದೆ. ಭಾಗ 2ರಲ್ಲಿ (ಉನ್ನತೀಕರಿಸಿದ ಪ್ರಾಥಮಿಕ ಶಾಲೆ) ನಾಲ್ಕು ವಿಭಾಗಗಳಿರುತ್ತವೆ.
1. ಶಿಶು ಮನೋವಿಜ್ಞಾನ ಮತ್ತು ವಿಕಸನ.
2. ಭಾಷೆ: ಕನ್ನಡ / ಉರ್ದು/ಮರಾಠಿ / ತಮಿಳು / ತೆಲಗು /ಮಲಯಾಳಂ.
3. ಆಂಗ್ಲ ಭಾಷೆ.
4. ವಿಜ್ಞಾನ ಶಿಕ್ಷಕರಿಗೆ (ಗಣಿತ ಮತ್ತು ವಿಜ್ಞಾನ), ಕಲಾ ಶಿಕ್ಷಕರಿಗೆ ಸಮಾಜ ವಿಜ್ಞಾನದ 60 ಪ್ರಶ್ನೆಗಳಿರುತ್ತವೆ. ಒಟ್ಟು 150 ಅಂಕಗಳು. ಪ್ರಸ್ತುತ ನಡೆಯುತ್ತಿರುವ ಪರೀಕ್ಷೆ ಎನ್.ಸಿ.ಟಿ.ಇ. ನಿಗದಿ ಪಡಿಸಿರುವ ಶಿಕ್ಷಕರ ಅರ್ಹತಾ ಪರೀಕ್ಷೆ ಸ್ವರೂಪವನ್ನು ಅನುಸರಿಸಿ ನಡೆಸಲಾಗುವುದು. ಪರೀಕ್ಷಾ ವಿಷಯಗಳಿಗೆ ಎನ್.ಸಿ.ಟಿ.ಇ. ಪರೀಕ್ಷಾ ಪಠ್ಯಕ್ರಮದಂತೆ ಪಠ್ಯವಸ್ತುವನ್ನು ನಿಗದಿಪಡಿಸಲಾಗಿದೆ.
ಪರೀಕ್ಷಾ ಪಠ್ಯಕ್ರಮ (ಮುಖ್ಯಾಂಶಗಳು)
ಶಿಶು ವಿಕಾಸ ಮತ್ತು ಶಿಶು ಶಿಕ್ಷಣ ಶಾಸ್ತ್ರ (30 ಅಂಕ):
1. ಮಗುವಿನ ಬೆಳವಣಿಗೆ: ವಿಕಾಸ, ಬೆಳವಣಿಗೆ ಮತ್ತು ಪಕ್ವತೆ, ವಿಕಾಸದ ಸಾರ್ವತ್ರಿಕ ತತ್ವಗಳು, ವಿಕಾಸದ ಮೇಲೆ ಪ್ರಭಾವಿಸುವ ಅಂಶಗಳು, ವಿಕಾಸದ ಆಯಾಮಗಳು, ವಿಕಾಸದ ಸಿದ್ಧಾಂತಗಳು(ಪಿಯಾಜೆ ಮತ್ತು ಬ್ರೂನರ್), ವೈಯಕ್ತಿಕ ಭಿನ್ನತೆ, ವ್ಯಕ್ತಿತ್ವದ ಬೆಳವಣಿಗೆ, ವಿಕಾಸಾತ್ಮಕ ಕಾರ್ಯಗಳು ಮತ್ತು ತೊಂದರೆಗಳು.
2. ಕಲಿಕೆ: ಕಲಿಕೆಯ ಅರ್ಥ ಮತ್ತು ಸ್ವರೂಪ, ಕಲಿಕೆಯ ಅಂಶಗಳು, ಕಲಿಕೆ ಮತ್ತು ವ್ಯಕ್ತಿತ್ವದ ಮೇಲೆ ಅನುವಂಶಿಕತೆ ಹಾಗೂ ಪರಿಸರದ ಪ್ರಭಾವ, ಕಲಿಕೆಯ ಆಯಾಮಗಳು, ಅಭಿಪ್ರೇರಣೆ ಮತ್ತು ಅವಧಾನ, ಸ್ಮೃತಿ ಮತ್ತು ವಿಸ್ಮೃತಿ
3. ಕಲಿಕೆ, ಕಲಿವವರ ಮತ್ತು ಬೋಧನೆ ನಡುವಿನ ಸಂಬಂಧ, ವೈಯಕ್ತಿಕ ಭಿನ್ನತೆಯಲ್ಲಿ ವಿವಿಧ ಕ್ಷೇತ್ರಗಳು, ವಿಶೇಷ ಅಗತ್ಯಯುಳ್ಳ ಮಕ್ಕಳ ಕಲಿಕಾ ಸನ್ನಿವೇಷ, ವೈಯಕ್ತಿಕ ಮತ್ತು ಸಾಮೂಹಿಕ ಕಲಿಕೆ, ಬೋಧನೆಯು ಒಂದು ಯೋಜಿತ ಕಾರ್ಯ, ಬೋಧನೆಯ ಹಂತಗಳು, -ಸಾಮಾನ್ಯ ಮತ್ತು ವಿಷಯಾಧಾರಿತ ಕೌಶಲಗಳು, ತರಗತಿ ನಿರ್ವಹಣೆ, -ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ಬೋಧನೆ ಮತ್ತು ಕಲಿಕೆ ಕುರಿತ ಎನ್.ಸಿ.ಎಫ್.2005 ಮತ್ತು ಆರ್.ಟಿ.ಇ.2009ರ ದೃಷ್ಟಿಕೋನಗಳು.
ಭಾಷೆ- I ಕನ್ನಡ (30 ಅಂಕ )     
1. (ಅವಗಾಹನ) ಅಪರಿಚಿತ ಗದ್ಯ, ಪರಿಚಿತ ಗದ್ಯ
2. ಕವಿಗಳು, ಕಾವ್ಯಗಳು, ಕೃತಿಗಳು.
3. ಅಕರ್ಮಕ, ಸಕರ್ಮಕ ಕ್ರಿಯಾ ಪದಗಳು, ವಾಕ್ಯಗಳು, ವಾಕ್ಯಪ್ರಕಾರಗಳು, ಕರ್ತರಿ, ಕರ್ಮಣಿ ವಾಕ್ಯಗಳು, ಪ್ರತ್ಯಕ್ಷ-ಪರೋಕ್ಷ ವಾಕ್ಯಗಳು, ವಾಕ್ಯರಚನೆ.
4. ವರ್ಣಮಾಲೆ, ಪ್ರತ್ಯೆಯಗಳು, ವಚನಗಳು, ಲಿಂಗಗಳು, ವಿಭಕ್ತಿ ಪ್ರತ್ಯೇಯಗಳು, ಕಾಲಗಳು, ವಿರಾಮ ಚಿಹ್ನೆಗಳು, ಸಂಧಿಗಳು, ಸಮಾಸಗಳು, ಅಲಂಕಾರಗಳು, ತತ್ಸಮಗಳು, ವಿರುದ್ಧ ಪದಗಳು, ಪಯಾಯ ಪದಗಳು, ನಾನಾರ್ಥಗಳು, ಗಾದೆಗಳು, ಲೋಕೋಕ್ತಿಗಳು, ನುಡಿಮುತ್ತುಗಳು, ಸ್ವಂತವಾಕ್ಯಗಳು, ಒಗಟುಗಳು.
ಶಿಶು ಶಿಕ್ಷಣ ಪದ್ಧತಿ:
1. ಭಾಷೆಯ ವ್ಯಾಖ್ಯೆ, ಹುಟ್ಟು ಮತ್ತು ಪೂರ್ವೇತಿಹಾಸ, ಸ್ವರೂಪ ಸ್ವಭಾವಗಳು, ಉದ್ದೇಶಗಳು, ಪ್ರಯೋಜನಗಳು, ಧ್ವನಿಯ ಉತ್ಪತ್ತಿ, ಧ್ವನಿ ಉಚ್ಛಾರಣ ದೋಷಗಳು-ಕಾರಣಗಳು-, ನಿವಾರಣೆ.
2. ಮಾತೃ ಭಾಷೆ, ವ್ಯಾಖ್ಯೆ ಉದ್ದೇಶಗಳು, ಮಹತ್ವಗಳು, ಉದ್ದೇಶಗಳು, ಪ್ರಯೋಜನಗಳು. ಭಾಷಾ ಸೂತ್ರ, ಬೋಧನಾ ಭಾಷೆಯಾಗಿ ಮಾತೃಭಾಷೆಯ ಅಳವಡಿಕೆ- ಸಮಸ್ಯೆಗಳ ನಿವಾರಣೆ. ಮಾತೃಭಾಷಾ ಅಧ್ಯಾಪಕನ ಲಕ್ಷಣಗಳು.
ಮಾತೃಭಾಷಾ ಬೋಧನಾ ಗುರಿಗಳು, ಜ್ಞಾನ, ಭಾವಾವೇಷ, ಮಾನಸಿಕ ರಂಗಗಳು, ಕನಿಷ್ಠ ಸಾಮರ್ಥ್ಯಗಳು- ಪ್ರಥಮ ಭಾಷೆ ಕನ್ನಡ ಬೋಧನೆಯ ಉದ್ದೇಶಗಳು-ಗುರಿಗಳು, ಸ್ಪಷ್ಟಿಕರಣ.
3. ಬೋಧನಾ ನೈಪುಣ್ಯಗಳು -ಶ್ರವಣ, ಭಾಷಣ, ಪಠನೆ, ಬರೆಯುವಿಕೆ. ೪ ಬೋಧನಾ ವಿಧಾನಗಳು: ಕ್ರೀಡೆ, ಮಾಂಟೆಸೊರಿ, ಕಿಂಡರ್ ಗಾರ್ಡನ್, ಡಾಲ್ಟನ್, ಚರ್ಚಾಪದ್ಧತಿ, ಪ್ರಯೋಗಾತ್ಮಕ ಪದ್ಧತಿ, ಪರಿವೇಕ್ಷಿತ ಅಧ್ಯಯನ, ನಾಟಕೀಕರಣ ಪದ್ದತಿಗಳು. ಭಾಷಾ ಬೋಧನಾ ಪದ್ಧತಿಗಳು: ಪದ್ಯ, ಗದ್ಯ, ಪಠ್ಯಪುಸ್ತಕ, ಉಪ ಪಠ್ಯಪುಸ್ತಕ, ಪತ್ರ ರಚನೆ, ಮೌಲ್ಯ ಶಿಕ್ಷಣ.
5. ಬೋಧನೋಪಕರಣಗಳು, ವ್ಯಾಖ್ಯೆ, ಅವಶ್ಯಕತೆ-, ಪ್ರಯೋಜನೆಗಳು, ಶ್ರವ್ಯ-ದೃಶ್ಯ ಉಪಕರಣಗಳು, ಬೋಧನೋಪಕರಣಗಳ ಉಪಯೋಗಿಸುವಿಕೆಯಲ್ಲಿ ತೆಗೆದುಕೊಳ್ಳಬೇಕಾದ ಜಾಗ್ರತೆಗಳು. ಯೋಜನೆಗಳ ರಚನೆ- ಅವಶ್ಯಕತೆ, ಪ್ರಯೋಜನಗಳು, ವಾರ್ಷಿಕ ಯೋಜನೆ, ಘಟಕ ಯೋಜನೆ, ಪಠ್ಯ ಯೋಜನೆ
6. ಲಿಪಿ ಹುಟ್ಟು ಪೂರ್ವೇತಿಹಾಸ- ಕನ್ನಡ ಸಾಹಿತ್ಯ ಚರಿತ್ರೆ-ಪ್ರಾಚೀನ ಯುಗದಿಂದ ಆಧುನಿಕ ಯುಗದವರೆಗೆ.
7. ಮೌಲ್ಯಮಾಪನ:- ಪರಿಚಯ, ನಿರಂತರ ಮೌಲ್ಯಮಾಪನ, ಸಾಮರ್ಥ್ಯಾಧಾರಿತ ಮೌಲ್ಯಮಾಪನ, ಮೌಲ್ಯಮಾಪನ ಸಾಧನಗಳು, ಮನೋವೈಜ್ಞಾನಿಕ ಪರೀಕ್ಷೆಗಳು, ಪ್ರಶ್ನೆಗಳ ಪ್ರಕಾರಗಳು, ಪ್ರಶ್ನೆಗಳ ನಿರ್ಮಾಣ, ಘಟಕ ಪರೀಕ್ಷೆಯ ತಯಾರಿ.
III. LANGUAGE – II (ENGLISH) (Marks: 30)
CONTENT (Marks: 15): Parts of Speech, Tenses, Types of Sentences, Prepositions & Articles, Degrees of Comparison, Direct and Indirect Speech, Questions and question tags, Active & Passive voice, Use of Phrases, Comprehension, Composition, Vocabulary.
PEDAGOGY (Marks: 15): Aspects of English, Objectives of teaching English, Phonetics, Development of Language skills,  Approaches, Methods, Techniques of teaching English. (a) Introduction, Definition and Types of approaches methods and techniques of teaching English (b) Remedial teaching, Teaching of structures and vocabulary items, Teaching learning materials in English, Lesson Planning, Curriculum & Textbooks, Evaluation in English language.
ಪರಿಸರ ಅಧ್ಯಯನ (30 ಅಂಕ )
ನಮ್ಮದೇಹ-ಆರೋಗ್ಯ- ಸ್ವಚ್ಛತೆ, ನನ್ನ ಕುಟುಂಬ, ಕೆಲಸ ಮತ್ತು ಕ್ರೀಡೆ, ಕೀಟಗಳು ಮತ್ತು ಪ್ರಾಣಿಗಳು, ನಮ್ಮ ಆಹಾರ, ವಾಸಸ್ಥಳಗಳು, ಗಾಳಿ, ನೀರು, ಭೂಮಿ ಮತ್ತು ಆಕಾಶ, ನಮ್ಮ ದೇಶ, ನಮ್ಮ ರಾಜ್ಯ, ಭಾರತದ ಇತಿಹಾಸ ಮತ್ತು ಸಂಸ್ಕೃತಿ, ಭಾರತದ ಸಂವಿಧಾನ, ವಿಶ್ವಸಂಸ್ಥೆ.
ಶಿಶು ಶಿಕ್ಷಣ ಪದ್ಧತಿ: ಪರಿಸರ ಅಧ್ಯಯನದ ಅರ್ಥ ಮತ್ತು ವ್ಯಾಪ್ತಿ, ಪರಿಸರ ಅಧ್ಯಯನ ಬೋಧನೆಯ ಗುರಿ–ಉದ್ದೇಶಗಳು, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಸಂಬಂಧ, ಪಠ್ಯಕ್ರಮ, ನಿರ್ವಹಣೆ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ಕಲಿಕಾ ಪರಿಸರ.
ಗಣಿತ (30 ಅಂಕ)
ಸಂಖ್ಯೆಗಳು ಮತ್ತು ಮೂಲಕ್ರಿಯೆಗಳು, ಭಿನ್ನರಾಶಿ, ವಾಣಿಜ್ಯ ಗಣಿತ, ರೇಖಾಗಣಿತ,ಅಳತೆಗಳು, ಸಂಖ್ಯಾಶಾಸ್ತ್ರ, ಅಂಕಿ ಅಂಶಗಳು.
ಶಿಶು ಶಿಕ್ಷಣ ಪದ್ಧತಿ, ಗಣಿತದ ಸ್ವರೂಪ ಮತ್ತು ವ್ಯಾಖ್ಯೆಗಳು, ಗಣಿತ ಬೋಧನೆಯ ಗುರಿ, ಉದ್ದೇಶಗಳು ಮತ್ತು ಮೌಲ್ಯಗಳು, ಗಣಿತ ಬೋಧನಾ ಪದ್ಧತಿಗಳು, ಗಣಿತ ಬೋಧನೆಯಲ್ಲಿ ಪಾಠೋಪಕರಣಗಳು, ಬೋಧನೆಯ ಯೋಜನೆಗಳು, ಗಣಿತ ಶಿಕ್ಷಕ, Sಂಖ?????ಿ, ಸಂಪನ್ಮೂಲಗಳ ಸದ್ಭಳಕೆ, ಪಠ್ಯಕ್ರಮ ಮತ್ತು ಪಠ್ಯ ಪುಸ್ತಕ, ಸಮಸ್ಯೆ ಗುರುತಿಸುವಿಕೆ ಮತ್ತು ಪರಿಹಾರ ಬೋಧನೆ.
ಈ ಪಠ್ಯಕ್ರಮವು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಈ ಸ್ಫರ್ಧಾತ್ಮಕ ಪರೀಕ್ಷೆ ಕುರಿತ ಸಿದ್ಧತಾ ತರಬೇತಿ- ವಿವರಣೆ ನೀಡಲು ಈಗಾಗಲೇ ಹಲವು ಸ್ಪರ್ಧಾತ್ಮಕ ಪರಿಕ್ಷಾ ಕೇಂದ್ರಗಳು ಸಿದ್ಧಗೊಂಡಿವೆ. ಅವುಗಳನ್ನು ಸೇರುವ ಮುಂಚೆ ಸರಿಯಾಗಿ ತಿಳಿದರೆ ಮಾತ್ರ ನಿಮ್ಮ ಭವಿಷ್ಯ ಅರಳುತ್ತದೆ.
ಈ ವಿಷಯಗಳನ್ನು ಒಳಗೊಂಡ ಹೊತ್ತಿಗೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಅಭ್ಯರ್ಥಿಗಳು ಶಿಕ್ಷಕಣರಂಗದ ಬದಲಾವಣೆಗಳನ್ಮ್ನ, ನಮ್ಮ ರಾಜ್ಯದ ಪ್ರಾಥಮಿಕ/ಪ್ರೌಢ ತರಗತಿಗಳ ಪಠ್ಯಪುಸ್ತಕಗಳನ್ನು, ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿಗಳನ್ನು  ಕುರಿತು ಹೆಚ್ಚು ಆಸಕ್ತಿ ತೋರಬೇಕು.

ಜ್ವಾಲೆ ಮೇಲ್ಮುಖವೇಕೆ?

ಬೇಕಾಗುವ ಸಲಕರಣೆಗಳು: ಮೋಂಬತ್ತಿ, ಬೆಂಕಿಪೆಟ್ಟಿಗೆ.
ವಿಧಾನ: 1) ಒಂದು ಮೋಂಬತ್ತಿಯನ್ನು ಬೆಂಕಿಕಡ್ಡಿಯಿಂದ ಉರಿಸಿ, ಕೈಯಲ್ಲಿ ಹಿಡಿದುಕೊಳ್ಳಿರಿ. 2) ಚಿತ್ರ 2 ಹಾಗೂ 3 ರಲ್ಲಿ ತೋರಿಸಿದಂತೆ ಉರಿಯುತ್ತಿರುವ ಮೋಂಬತ್ತಿಯನ್ನು ಹಿಡಿಯಿರಿ.
ಪ್ರಶ್ನೆ: ನೇರವಾಗಿ ಹಿಡಿದ ಮೋಂಬತ್ತಿಯ ಜ್ವಾಲೆ ಮೇಲ್ಗಡೆ ಉರಿಯುವುದನ್ನು ತಾವು ನೋಡಿದ್ದೀರಿ.
ಚಿತ್ರ2 ಹಾಗೂ 3 ರಲ್ಲಿ ತೋರಿಸಿದಂತೆ  ಉರಿಯುತ್ತಿರುವ ಮೋಂಬತ್ತಿಯನ್ನು ಹಿಡಿದುಕೊಂಡರೆ ಜ್ವಾಲೆ ಹೇಗೆ ಉರಿಯುತ್ತದೆ? ಯಾಕೆ?
ಉತ್ತರ: ಉರಿಯುತ್ತಿರುವ ಎಲ್ಲ ಇಂಧನಗಳಲ್ಲಿ ಕಾರ್ಬನ್ ಹಾಗೂ ಹೈಡ್ರೊಜನ್‌ಗಳಿವೆ. ಇವು ದಹಿಸುವಾಗ ಕಾರ್ಬನ್ ಆಕ್ಸಿಜನ್‌ನೊಂದಿಗೆ ದಹಿಸಿ ಕಾರ್ಬನ್‌ಡೈಆಕ್ಸೈಡ್ ಅನಿಲವು ಹಾಗೂ ಹೈಡ್ರೊಜನ್ ದಹಿಸಿ ನೀರು ಉತ್ಪತ್ತಿಯಾಗುತ್ತವೆ. ಈ ದಹನ ಕ್ರಿಯೆಯಲ್ಲಿ ಇತರ ಕೆಲವು ಅನಿಲಗಳೂ ಉತ್ಪತ್ತಿಯಾಗುತ್ತವೆ. ದಹನ ಕ್ರಿಯೆಯಲ್ಲಿ ಬೆಳಕು ಮತ್ತು ಉಷ್ಣ ಬಿಡುಗಡೆಯಾಗುತ್ತವೆ. ‘ಜ್ವಾಲೆ’ ಅಂದರೆ ಉರಿಯುತ್ತಿರುವ ಅನಿಲಗಳು. ದಹನ ಕ್ರಿಯೆಯಲ್ಲಿ ಬಿಡುಗಡೆಯಾದ ಅನಿಲಗಳು ಹವೆಗಿಂತ ಹಗುರವಾಗಿರುತ್ತವೆ. ಹೀಗಾಗಿ ಜ್ವಾಲೆ ಯಾವಾಗಲೂ ಮೇಲ್ಮುಖವಾಗಿ ಉರಿಯುತ್ತದೆ.

ಕುಣಿಯುವ ಬಲೂನು

  ಬೇಕಾಗುವ ಸಲಕರಣೆಗಳು: ಎರಡು ಬಲೂನುಗಳು, ನೀರು, 8-10 ರಬ್ಬರ್ ಬ್ಯಾಂಡುಗಳು ಮತ್ತು ದಾರ.
  ವಿಧಾನ: 1) ಚಿತ್ರ-1ರಲ್ಲಿ ತೋರಿಸಿದಂತೆ ಒಂದು ನೀರು ತುಂಬಿದ ಬಲೂನನ್ನು ಊದಿ ಒಂದು ಗಟ್ಟಿಯಾದ ದಾರಕ್ಕೆ ಕಟ್ಟಿರಿ. (ಅ).
         2) 8-10 ರಬ್ಬರ್ ಬ್ಯಾಂಡುಗಳನ್ನು ಪೋಣಿಸಿಕೊಂಡು, ರಬ್ಬರ್ ಬ್ಯಾಂಡುಗಳ ಒಂದು ತುದಿಗೆ ನೀರು ತುಂಬಿದ ಬಲೂನನ್ನು ಊದಿ, ದಾರದಿಂದ ಗಟ್ಟಿಯಾಗಿ ಕಟ್ಟಿರಿ. (ಬ).
ಪ್ರಶ್ನೆ: 1) ‘ಅ’ ಬಲೂನಿನ ವಿರುದ್ಧ ಬದಿಯ ದಾರದ ತುದಿಯನ್ನು ಬೆರಳಿಗೆ ಸಿಕ್ಕಿಸಿಕೊಂಡು, ಬಲೂನನ್ನು ಒಂದೆರಡು ಸಲ ಮೇಲೆ-ಕೆಳಗೆ ಮಾಡಿರಿ. ಬಲೂನು ಎಷ್ಟು ಸಲ ಮೇಲೆ-ಕೆಳಗೆ ಕುಣಿಯಿತು? ಯಾಕೆ?
   2) ಬಲೂನಿನ ವಿರುದ್ಧ ಬದಿಯ ಒಂದು ರಬ್ಬರ್ ಬ್ಯಾಂಡನ್ನು ಒಂದು ಬೆರಳಿಗೆ ಸಿಕ್ಕಿಸಿಕೊಂಡು, ಬಲೂನನ್ನು ಒಂದೆರಡು ಸಲ ಮೇಲೆ-ಕೆಳಗೆ ಮಾಡಿ (ಬಲೂನನ್ನು ಸ್ವಲ್ಪ ಕೆಳಗೆ ಜಗ್ಗಿ ಬಿಡಿರಿ), ಕೈಯನ್ನು ಸ್ಥಿರವಾಗಿ ಹಿಡಿದುಕೊಳ್ಳಿರಿ. ಏನಾಗುತ್ತದೆ? ಯಾಕೆ?
ಉತ್ತರ: 1) ದಾರಕ್ಕೆ ಕಟ್ಟಿದ ಬಲೂನು ಒಂದು ಸಲವೂ ಮೇಲೆ-ಕೆಳಗೆ ಕುಣಿಯಲಿಲ್ಲ. ಯಾಕೆಂದರೆ ದಾರಕ್ಕೆ ಸ್ಥಿತಿಸ್ಥಾಪಕ ಗುಣ ಇಲ್ಲ.
       2) ರಬ್ಬರಿನ ಬ್ಯಾಂಡುಗಳಿಗೆ ಕಟ್ಟಿದ ಬಲೂನು ಹಲವಾರು ಸಲ ಮೇಲೆ ಕೆಳಗೆ ಕುಣಿಯುತ್ತದೆ. ಇದಕ್ಕೆ ರಬ್ಬರಿನ ಸ್ಥಿತಿಸ್ಥಾಪಕತೆ (Elasticity) ಕಾರಣ.

ತೇಲಿ ಮುಳುಗುವ ಕಿತ್ತಳೆ

ಬೇಕಾಗುವ ಸಲಕರಣೆಗಳು: ಗ್ಲಾಸು, ನೀರು, ಕಿತ್ತಳೆ.
ವಿಧಾನ: ಒಂದು ಗ್ಲಾಸಿನ ತುಂಬ ನೀರು ತೆಗೆದುಕೊಳ್ಳಿರಿ. ಸಿಪ್ಪೆಯನ್ನು ತೆಗೆಯದ ಕಿತ್ತಳೆಯನ್ನು ನೀರಿನಲ್ಲಿ ಇಳಿಬಿಡಿರಿ
(ಚಿತ್ರ-1), ಸಿಪ್ಪೆಯನ್ನು ತೆಗೆದು ಕಿತ್ತಳೆಯನ್ನು ನೀರಿಗೆ ಇಳಿಬಿಡಿರಿ
(ಚಿತ್ರ-2).
ಪ್ರಶ್ನೆ:  1) ಸಿಪ್ಪೆಯನ್ನು ತೆಗೆಯದ ಕಿತ್ತಳೆಯನ್ನು ನೀರಿನಲ್ಲಿ ಹಾಕಿದಾಗ ಏನಾಗುತ್ತದೆ? ಯಾಕೆ?
     2) ಸಿಪ್ಪೆಯನ್ನು ತೆಗೆದ ಕಿತ್ತಳೆಯನ್ನು ನೀರಿಗೆ ಹಾಕಿದಾಗ ಏನಾಗುತ್ತದೆ? ಯಾಕೆ?
3) ಜಲಸಸ್ಯಗಳು ಯಾಕೆ ತೇಲುತ್ತವೆ?
ಉತ್ತರ
1) ಸಿಪ್ಪೆಯನ್ನು ತೆಗೆಯದ ಕಿತ್ತಳೆಯನ್ನು ನೀರಿನಲ್ಲಿ ಹಾಕಿದಾಗ ಅದು ತೇಲುತ್ತದೆ. ಯಾಕೆಂದರೆ ಸಿಪ್ಪೆಯಲ್ಲಿ ತೈಲ ಗ್ರಂಥಿಗಳ ಜೊತೆಗೆ ಕೆಲವು ಕೋಶಗಳಲ್ಲಿ ಗಾಳಿಯೂ ಶೇಖರಣೆಯಾಗಿರುತ್ತದೆ.
2) ಸಿಪ್ಪೆಯನ್ನು ತೆಗೆದಾಗ ಗಾಳಿಯು ಇಲ್ಲವಾಗಿ ಕಿತ್ತಳೆ ತೇಲುತ್ತದೆ.
3) ಎಲ್ಲ ಜಲಸಸ್ಯಗಳ ಕೋಶಗಳಲ್ಲಿ ಗಾಳಿಯು ಶೇಖರಣೆಯಾಗಿರು ವುದರಿಂದ ಅವು ತೇಲುತ್ತವೆ.
ಹೊಸದಾಗಿ ಈಜು ಕಲಿಯುವವರು, ಖಾಲಿ ಡಬ್ಬಿಯ ಬಾಯಿಯನ್ನು ಬೆಸೆದು, ತಮ್ಮ ಸೊಂಟಕ್ಕೆ ಕಟ್ಟಿಕೊಂಡು ನೀರಿಗಿಳಿಯುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮೀನು ನೀರಿನಲ್ಲಿ ಮೇಲೆ ಕೆಳಗೆ ಹೋಗುವುದು ಗಾಳಿ ಚೀಲಗಳ ಸಹಾಯದಿಂದಲೇ.

ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ಅಥವಾ ಯಾವುದೇ ಗ್ರಂಥಾಲಯದಲ್ಲಾಗಲೀ, ಪುಸ್ತಕ ನಿರ್ವಹಣೆ ದೊಡ್ಡ ಸವಾಲೇ ಸರಿ. ಲೈಬ್ರರಿಯಲ್ಲಿ ಪುಸ್ತಕಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು, ಅವುಗಳನ್ನು ಜೋಡಿಸಲು ಅಥವಾ ಅತಿ ಭಾರದ ಪುಸ್ತಕಗಳನ್ನು ಕೊಂಡೊಯ್ಯಲು ಹಲವು ಜನರು ಬೇಕಾಗುತ್ತಾರೆ. ಇದು ಮೇಲ್ನೋಟಕ್ಕೆ ಸುಲಭ ಕೆಲಸದಂತೆ ಕಂಡರೂ ಸಾಕಷ್ಟು ಶ್ರಮ ಹಾಗೂ ಸಮಯ ಬಳಸಿಕೊಳ್ಳುತ್ತದೆ. ಜೊತೆಗೆ ಇದಕ್ಕೆಂದು ಹೆಚ್ಚು ಸಿಬ್ಬಂದಿಯನ್ನೂ ನೇಮಿಸಿಕೊಳ್ಳಬೇಕಾಗುತ್ತದೆ.
ಆದ್ದರಿಂದ ಗ್ರಂಥಾಲಯದ ಈ ಅತಿ ಅವಶ್ಯಕತೆಯನ್ನು ಮನಗಂಡ ವಿದ್ಯಾರ್ಥಿಗಳು ‘ಲೈಬ್ರರಿ ರೋಬೊ’ ಎಂಬ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಪಿಇಎಸ್‌ ಇನ್‌ಸ್ಟಿಟ್ಯೂನ್‌ನ ಮೆಕಾನಿಕಲ್, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಸಂಕೇತ್, ಸ್ನೇಹಿತ್ ಕುಮಾರ್, ಮನೋಜ್, ಸುಮೇದ್, ಶ್ರೇಯಸ್, ವರುಣ್, ಸ್ವಾತಿ, ಆಶಿಶ್, ಅಭಿಷೇಕ್ ಈ ರೋಬೊ ಪ್ರಾಜೆಕ್ಟ್‌ನಲ್ಲಿ ತೊಡಗಿಕೊಂಡವರು. ಪ್ರಾಧ್ಯಾಪಕರುಗಳಾದ ಜ್ಯೂಡ್ ಪೆರಿರ, ಕರುಣಾಕರ್ ಪ್ರವೀಣ್, ನಂದಕುಮಾರ್ ಮುಂತಾದವರೂ ಈ ಪ್ರಾಜೆಕ್ಟ್‌ಗೆ ಮಾರ್ಗದರ್ಶನ ನೀಡಿದ್ದಾರೆ.
ಪುಸ್ತಕ ನಿರ್ವಹಣೆ ಕೆಲಸವನ್ನು ಸರಳಗೊಳಿಸುವ ಸಲುವಾಗಿ ಈ ತಂತ್ರಜ್ಞಾನವನ್ನು ತಯಾರಿಸಿದ್ದು, ಎರಡು ವರ್ಷಗಳಿಂದ ಈ ತಂತ್ರಜ್ಞಾನದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಸರಳವಾಗಿ ಕೆಲಸ ನಿರ್ವಹಿಸುವ ಈ ಲೈಬ್ರರಿ ರೋಬೊ ತಂತ್ರಜ್ಞಾನದಲ್ಲಿ ನೇವಿಗೇಟರ್, ಆಪ್ಟಿಕಲ್ ಡಿಟೆಕ್ಷನ್, ಅಟ್‌ಮೆಗಾ 16, ಮೋಟಾರ್ ಡ್ರೈವರ್, ಡೀಕೋಡರ್, ಎಲೆಕ್ಟ್ರಾನಿಕ್ ಬೋರ್ಡ್‌ ಉಪಕರಣಗಳನ್ನು ಬಳಸಿಕೊಳ್ಳಲಾಗಿದೆ.
ರೋಬೊವನ್ನು ಚಾರ್ಜಿಂಗ್ ಮಾಡುವ ಮೂಲಕ ಲೈಬ್ರರಿಯಲ್ಲಿ ಅವಶ್ಯಕವಿರುವ ಜಾಗದಲ್ಲಿ ರೋಬೊಗೆಂದು ಪ್ರತ್ಯೇಕ ಟ್ರ್ಯಾಕ್ ಇಟ್ಟು ನಂತರ ಸ್ವಿಚ್ ಆನ್ ಮಾಡಲಾಗುತ್ತದೆ. ಪುಸ್ತಕಗಳ ಸಂಗ್ರಹವಿರುವ ಜಾಗದಿಂದ ಅದನ್ನು ಜೋಡಿಸಬೇಕಾದ ಜಾಗದವರೆಗೂ ರೋಬೊ ಚಲಿಸುತ್ತದೆ. ಅದರಲ್ಲಿ ಪುಸ್ತಕಗಳನ್ನು ಇಡುತ್ತಿದ್ದರೆ, ಅದು ಆ ಪುಸ್ತಕಗಳನ್ನು ತೆಗೆದುಕೊಂಡು, ಟ್ರ್ಯಾಕ್‌ ಮೂಲಕ ಪುಸ್ತಕಗಳನ್ನು ನಿಗದಿಪಡಿಸಿದ ಯ್ರಾಕ್‌ಗೆ ಇಡುವ ಕೆಲಸವನ್ನು ಮಾಡುತ್ತದೆ. ಒಂದು ಬಾರಿಗೆ ಹದಿನೈದು ಕೆ.ಜಿ ತೂಕವನ್ನು ಹೊರಬಲ್ಲದು ಈ ರೋಬೊ.
ಈ ರೋಬೊದಿಂದ ಕೆಲಸಗಾರರನ್ನು ನೇಮಿಸಿಕೊಳ್ಳುವುದು ತಪ್ಪುವುದಲ್ಲದೆ, ಹಣವನ್ನೂ ಉಳಿತಾಯ ಮಾಡಿದಂತಾಗುತ್ತದೆ. ರೋಬೊದಲ್ಲಿ ಹ್ಯೂಮನ್ ರೆಟೆನ್ಷನ್ ತಂತ್ರಜ್ಞಾನ, ಪ್ರಾಕ್ಸಿಮಿಟಿ ಸೆನ್ಸರ್, ಅಡೆತಡೆಗಳನ್ನು ನಿವಾರಿಸಲು ಅಲ್ಟ್ರಾ ಸೋನಿಕ್ ಸೆನ್ಸರ್, ಪಿಐಆರ್ ಸೆನ್ಸರ್, ಐಆರ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ರಿಮೋಟ್ ನಿಯಂತ್ರಣವಿದ್ದು, ಏನಾದರೂ ಅಡ್ಡ ಇದ್ದಲ್ಲಿ, ಧ್ವನಿ ಮೂಲಕ ಅದು ಎಚ್ಚರ ನೀಡುತ್ತದೆ. ಲೈಬ್ರರಿಯ ಜಾಗವನ್ನು ನಿರ್ಧರಿಸಿ ಹತ್ತು ಮೀಟರ್‌ವರೆಗೂ ಈ ರೋಬೊ ಚಲಿಸಲು ಸಾಧ್ಯವಿದೆ.
ದಿನವೊಂದಕ್ಕೆ 800 ಪುಸ್ತಕಗಳನ್ನು ಹೊರುವ ಸಾಮರ್ಥ್ಯವನ್ನು ರೋಬೊ ಹೊಂದಿದ್ದು, ಇನ್ನೂರು ಕೆ.ಜಿ ಪುಸ್ತಕಗಳನ್ನು ಹೊರಬಲ್ಲದು. ರೋಬೊ ಕೆಲಸ ಮಾಡಲು ಕನಿಷ್ಠ 0.25ಕೆಜಿ ಯಾದರೂ ಪುಸ್ತಕವಿರಬೇಕು. ನಿಗದಿಯಾದ ಐದು ಸ್ಥಳಕ್ಕೆ (ಟ್ರ್ಯಾಕ್‌)ಗೆ ಇದು ಪುಸ್ತಕಗಳನ್ನು ಕೊಂಡೊಯ್ಯಬಲ್ಲದು.ಸಂಗ್ರಹದ ಜಾಗದಿಂದ ಪುಸ್ತಕ ಇಡಬೇಕಾದ ಪ್ರತ್ಯೇಕ ಸ್ಥಳಕ್ಕೆ ರೋಬೊಗಳನ್ನು ಕಾರ್ಯ ನಿರ್ವಹಿಸಲು ಬಳಸಿಕೊಳ್ಳಬಹುದು.
ಪುಸ್ತಕ ಜೋಡಿಸುವ ಕೆಲಸ ಮುಗಿದ ನಂತರ ತನ್ನ ಸ್ಥಾನಕ್ಕೆ ಹೋಗಿ ಸ್ವಯಂ ಚಾರ್ಜರ್ ಮಾಡಿಕೊಳ್ಳುವಂತೆ ಅಳವಡಿಸಲಾಗಿದೆ. ಈ ರೋಬೊ ತಯಾರಿಕೆಗೆ ಒಟ್ಟು ಒಂದು ಲಕ್ಷದವರೆಗೂ ಖರ್ಚಾಗಿದ್ದು, ದೊಡ್ಡ ಮಟ್ಟದಲ್ಲಿ ತಯಾರಿಸಿದರೆ 50,000 ವೆಚ್ಚ ತಗುಲಬಹುದು ಎಂದು ಮಾಹಿತಿ ನೀಡುತ್ತಾರೆ ವಿದ್ಯಾರ್ಥಿಗಳು.ಈ ರೋಬೊ ನಂತರ ಫ್ಲೋರ್ ಕ್ಲೀನಿಂಗ್, ಸ್ವೀಪಿಂಗ್ ಮಾಡುವ ರೋಬೊಗಳನ್ನು ಕಂಡುಹಿಡಿಯುವ ಹಾದಿಯಲ್ಲಿದ್ದಾರೆ ವಿದ್ಯಾರ್ಥಿಗಳು.

ನ್ಯೂಟನ್ ನಿಯಮ ಕಲಿಸುವ ಕಡ್ಡಿ ಪೆಟ್ಟಿಗೆ

ಬೇಕಾಗುವ ಸಲಕರಣೆಗಳು: ಪೂರ್ಣ ತುಂಬಿದ ಬೆಂಕಿ ಪೆಟ್ಟಿಗೆ, ಟೇಬಲ್.
ವಿಧಾನ: ಚಿತ್ರ 1ರಲ್ಲಿ ತೋರಿಸಿದಂತೆ ಪೂರ್ಣ ತುಂಬಿದ ಹಾಗೂ ಪೂರ್ಣ ಮುಚ್ಚಿದ ಬೆಂಕಿ ಪೆಟ್ಟಿಗೆಯನ್ನು 2ರಿಂದ 3ಇಂಚು ಎತ್ತರದ ಮೇಲಿಂದ ನೇರವಾಗಿ ಬಿಡಿರಿ.
ಚಿತ್ರ 2ರಲ್ಲಿ ತೋರಿಸಿದಂತೆ ಪೂರ್ಣ ತಂಬಿದ ಹಾಗೂ ಅರ್ಧದಷ್ಟು ತೆರೆದ ಬೆಂಕಿ ಪೆಟ್ಟಿಗೆಯನ್ನು ನೇರವಾಗಿ ಬಿಡಿರಿ.
ಪ್ರಶ್ನೆ: ಯಾವಾಗ ಬೆಂಕಿ ಪೆಟ್ಟಿಗೆ ಉರುಳಿ ಬೀಳುತ್ತದೆ? ಹಾಗೂ ಯಾವಾಗ ನೇರವಾಗಿ ನಿಲ್ಲುತ್ತದೆ? ಯಾಕೆ?
ಉತ್ತರ: ಬೆಂಕಿ ಪೆಟ್ಟಿಗೆ ಟೇಬಲ್‌ಗೆ ಬಡಿದಾಗ, ಟೇಬಲ್ ಮೇಲ್ಮುಖ ಒತ್ತಡವನ್ನು ಒಡ್ಡುತ್ತದೆ. ಪೂರ್ಣ ಮುಚ್ಚಿದ ಬೆಂಕಿ ಪೆಟ್ಟಿಗೆಯು ಸಾಮಾನ್ಯವಾಗಿ ಉರುಳಿ ಬೀಳುತ್ತದೆ. ಹಾಗೂ ಅರ್ಧ ತೆರೆದ ಬೆಂಕಿ ಪೆಟ್ಟಿಗೆಯು ನೇರವಾಗಿ ನಿಲ್ಲುತ್ತದೆ. ಇಲ್ಲಿ ನ್ಯೂಟನ್‌ನ 3ನೇ ನಿಯಮವು ಕೆಲಸ ಮಾಡುತ್ತದೆ. ಒಂದನೆಯ ಉದಾಹರಣೆಯಲ್ಲಿ, ಮೇಲಿನಿಂದ ಬೆಂಕಿ ಪೆಟ್ಟಿಗೆಯು ಟೇಬಲ್‌ಗೆ ಬಡಿದಾಗ, ಒಮ್ಮೆಲೇ ನಿಲ್ಲುತ್ತದೆ. ಇಲ್ಲಿ ಪ್ರತಿಕ್ರಿಯೆ (Reaction) ಹೆಚ್ಚಿ ಬೆಂಕಿ ಪೆಟ್ಟಿಗೆ ಉರುಳಿ ಬೀಳುತ್ತದೆ (ಚಿತ್ರ-3).
ಎರಡನೆಯ ಉದಾಹರಣೆಯಲ್ಲಿ ಬೆಂಕಿ ಪೆಟ್ಟಿಗೆಯ ಹೊರಗಿನ ಭಾಗವು ಟೇಬಲ್‌ಗೆ ಬಡಿದು ಅದು ನಿಂತರೂ ಕೂಡ, ಕಡ್ಡಿಗಳುಳ್ಳ ಭಾಗವು ಕೆಳಕ್ಕೆ ಸರಿಯುತ್ತಿರುತ್ತದೆ. ಹೀಗಾಗಿ ಇಲ್ಲಿ ಪ್ರತಿಕ್ರಿಯೆ ಕಡಿಮೆಯಾಗಿ ಬೆಂಕಿ ಪೆಟ್ಟಿಗೆ ನೇರವಾಗಿ ನಿಲ್ಲುತ್ತದೆ (ಚಿತ್ರ-4). ಓಡುವ ಬಸ್ಸು ಒಮ್ಮೆಲೆ ನಿಂತರೆ ಅದರಲ್ಲಿ ಕುಳಿತವರು ಮುಗ್ಗರಿಸುವುದಿಲ್ಲವೇ ಹಾಗೆ.





ನಕ್ಷತ್ರವಾಗುವ ಬೆಂಕಿ ಕಡ್ಡಿಗಳು

ಬೇಕಾಗುವ ಸಲಕರಣೆಗಳು: 5 ಬೆಂಕಿ ಕಡ್ಡಿಗಳು, ನೀರು.
ವಿಧಾನ: ಐದು ಬೆಂಕಿ ಕಡ್ಡಿಗಳನ್ನು ತೆಗೆದುಕೊಂಡು, ಚಿತ್ರದಲ್ಲಿ ತೋರಿಸಿದಂತೆ ಅವುಗಳ ಮಧ್ಯದಲ್ಲಿ ಮುರಿದು, ಇಂಗ್ಲೀಷ್‌  ‘v’ ಆಕಾರ ದಂತೆ ಮಾಡಿ, ಚಿತ್ರದಲ್ಲಿ ತೋರಿಸಿದಂತೆ ಜೋಡಿಸಿರಿ. ಕಡ್ಡಿಗಳ ಮಧ್ಯ ಭಾಗದಲ್ಲಿ ಅಂದರೆ ‘o’ ಸ್ಥಳದಲ್ಲಿ ಒಂದು ಹನಿ ನೀರನ್ನು ಹಾಕಿರಿ.
ಪ್ರಶ್ನೆ: ಬೆಂಕಿ ಕಡ್ಡಿಗಳು ಯಾವ ಆಕಾರ ಪಡೆಯುತ್ತವೆ? ಯಾಕೆ?
ಉತ್ತರ: ಮುರಿದ ಬೆಂಕಿ ಕಡ್ಡಿಗಳ ಮಧ್ಯದಲ್ಲಿ ನೀರನ್ನು ಹಾಕಿದಾಗ, ಮುರಿದ ಭಾಗದಿಂದ ನೀರು ಬೆಂಕಿ ಕಡ್ಡಿಗಳಲ್ಲಿ ಸೇರುತ್ತದೆ (Imbibe). ಇದರಿಂದ ಆ ಭಾಗದಲ್ಲಿ ಹೀರುಕೊಳ್ಳುವಿಕೆಯ ಒತ್ತಡ (Imbibition Pressure) ಹೆಚ್ಚಿ ಕಡ್ಡಿಗಳು ನೆಟ್ಟಗಾಗಲು ಪ್ರಯತ್ನಿಸುತ್ತವೆ. ಆಗ ‘v’ ಆಕಾರದಲ್ಲಿರುವ ಬೆಂಕಿ ಕಡ್ಡಿಗಳು ನಕ್ಷತ್ರದಾಕಾರ ತಾಳುತ್ತವೆ. ಮಳೆಗಾಲದಲ್ಲಿ ಕಟ್ಟಿಗೆಯ ಕಿಟಕಿ-ಬಾಗಿಲುಗಳನ್ನು ಹಾಕುವುದು ಹಾಗೂ ತೆಗೆಯುವುದು ತೊಂದರೆಯಾಗುವುದು. ಒಣ ಕಾಳುಗಳನ್ನು ನೀರಿಗೆ ಹಾಕಿದಾಗ ಅವು ಉಬ್ಬುವುದು ಹೀರಿಕೆಯ ಒತ್ತಡದಿಂದಲೇ. ಹಿಂದಿನ ಕಾಲದಲ್ಲಿ ದೊಡ್ಡ-ದೊಡ್ಡ ಬಂಡೆಗಳನ್ನು ಹೀರಿಕೊಳ್ಳುವಿಕೆಯ ಒತ್ತಡದಿಂದಲೇ ಸೀಳುತ್ತಿದ್ದರು ಎಂಬುದು ಗಮನಾರ್ಹ.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಪ್ರಶ್ನೆ ಪತ್ರಿಕೆ, ದಿನಪತ್ರಿಕೆ ಓದಿರಿ

ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಗಂಟೆಗಟ್ಟಲೇ ಮೊದಲ ಪುಟದಿಂದ ಕೊನೆಯ ಪುಟದ ವರೆಗೂ ದಿನಪತ್ರಿಕೆಗಳನ್ನು ಓದುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾರ್ಗದರ್ಶನದ ಕೊರತೆ ಇದೆ. ಕೇಂದ್ರ ಲೋಕಸೇವಾ ಆಯೋಗ ಆಯೋಜಿಸುವ ಐಎಎಸ್‌ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳು ಹೇಗೆ ಅಧ್ಯಯನ ವಸ್ತುವಾಗುತ್ತವೆ ಎಂಬುದರ ಬಗ್ಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಹಿಮಾಲಯ ಐ.ಎ.ಎಸ್‌. ತರಬೇತಿ ಕೇಂದ್ರದ ಉಪನ್ಯಾಸಕ ಕೇಶವ್‌ ಎಸ್‌. ಅವರು ಕೆಲವು ಮಾರ್ಗದರ್ಶನ ನೀಡಿದ್ದಾರೆ.
‘ಕನ್ನಡ ಮತ್ತು ಇಂಗ್ಲಿಷ್‌ ಸೇರಿದಂತೆ ಎರಡು ಭಾಷೆಯ ದಿನ ಪತ್ರಿಕೆಗಳನ್ನು ದಿನಕ್ಕೆ ಎರಡರಿಂದ ಮೂರು ಗಂಟೆ ಓದಬೇಕು. ಎರಡು ತಿಂಗಳ ನಂತರ ಒಂದು ಗಂಟೆಯೊಳಗೆ ಒಂದು ಪತ್ರಿಕೆಯನ್ನು ಓದಿ ಮುಗಿಸಬಹುದು. ಎಲ್ಲಾ ವಿಷಯವನ್ನು ಓದಬೇಕಾಗಿಲ್ಲ. ಪಠ್ಯಕ್ರಮಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರೀಕರಿಸಬೇಕು. ಆದರೆ ಕಡ್ಡಾಯವಾಗಿ ಒಂದು ಕನ್ನಡ, ಒಂದು ಇಂಗ್ಲಿಷ್‌ ಪತ್ರಿಕೆ ಓದಿದರೆ ಉತ್ತಮ.
ಮುಖ್ಯ ಪರೀಕ್ಷೆಯಲ್ಲಿ ಭಾಷಾ ಪತ್ರಿಕೆ ಇರುತ್ತದೆ. 300 ಅಂಕಗಳ ಈ ಪತ್ರಿಕೆ ಎದುರಿಸಲು ದಿನಪತ್ರಿಕೆ ಓದಲೇಬೇಕು. ಪತ್ರಿಕೆಗಳ ಸಂಪಾದಕೀಯ ಬರಹಗಳನ್ನು ಕತ್ತರಿಸಿಟ್ಟುಕೊಂಡು ಓದಿದರೆ ಪ್ರಬಂಧ ಬರೆಯಲು ಸಹಾಯವಾಗುತ್ತದೆ. ಸಾಮಾನ್ಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಚಲಿತ ವಿದ್ಯಮಾನಗಳನ್ನೇ ಕೇಳುವುದರಿಂದ ಪತ್ರಿಕೆಗಳಿಲ್ಲಿ ಸಹಾಯಕವಾಗುತ್ತವೆ. ಹೆಚ್ಚಾಗಿ ವಿವಿಧ ಆಯೋಗಗಳ ಅಧ್ಯಕ್ಷರ ಹೆಸರು, ರಾಯಭಾರಿಗಳ ನೇಮಕ, ಪ್ರಮುಖ ಘಟನೆಗಳು, ಅವುಗಳಿಗೆ ಸಂಬಂಧಿಸಿದಂತೆ ಟಿಪ್ಪಣಿಗಳನ್ನು ಮಾಡಿಕೊಳ್ಳಲು ಪತ್ರಿಕೆಗಳು ಉಪಯುಕ್ತ. ಯಾವುದೇ ಆಕರ ಗ್ರಂಥಗಳಲ್ಲಿಯೂ ಪ್ರಚಲಿತ ವಿದ್ಯಮಾನಗಳನ್ನು ದಾಖಲಿಸಲಾಗದು. ಹಾಗಾಗಿ ವೃತ್ತ ಪತ್ರಿಕೆಗಳೇ ಆಕರ ಗೃಂಥಗಳಾಗಿ ನಿಲ್ಲುತ್ತವೆ. ಇನ್ನು ಸಂದರ್ಶನದಲ್ಲಿ 275 ಅಂಕಗಳಿರುತ್ತವೆ. ಸಂದರ್ಶನ ಎದುರಿಸಲು, ಭಾಷೆಯ ಮೇಲೆ ಹಿಡಿತ ಸಾಧಿಸಲು, ಸಮರ್ಪಕ ಭಾಷಾ ಬಳಕೆಗೂ ಪತ್ರಿಕೆಯ ಓದು ಸಹಾಯಕವಾಗುತ್ತದೆ ಎನ್ನುವುದು ಮರೆಯಲಾಗದು’ ಎಂದು ಮಾಹಿತಿ ನೀಡುತ್ತಾರೆ ಕೇಶವ್‌.
ಪ್ರಶ್ನೆ ಪತ್ರಿಕೆಗಳೇ ಮಾರ್ಗದರ್ಶಕ: 1979ರಿಂದ 2013ರವರೆಗಿನ ಪ್ರಶ್ನೆ ಪತ್ರಿಕೆಗಳನ್ನು ಓದಬೇಕು, ಅಲ್ಲಿ ಕೇಳಿರುವ ವಿಷಯಗಳನ್ನು ಪಟ್ಟಿ ಮಾಡಿಕೊಂಡು ಅದೇ ವಿಷಯಗಳನ್ನು ಪತ್ರಿಕೆ ಓದುವಾಗ ಕೇಂದ್ರಿಕರಿ ಸಬೇಕು. ಪ್ರಶ್ನೆ ಪತ್ರಿಕೆಗಳನ್ನು ಓದಿ ಅರ್ಥ ಮಾಡಿಕೊಳ್ಳ ಬೇಕು, ಯಾವ ಕ್ಷೇತ್ರಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ಬಗ್ಗೆ ಗಮನವಿರಬೇಕು. ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆಯ ಸಮಸ್ಯೆಯಾಗುತ್ತದೆ. ಐ.ಎ.ಎಸ್‌. ಪ್ರಶ್ನೆ ಪತ್ರಿಕೆಗಳಲ್ಲಿ ‘ಸ್ಟ್ರಾಂಡರ್ಡ್‌ ವಕ್ಯಾಬಲರಿ’ ಇರುತ್ತದೆ. ಹಾಗಾಗಿ ಹಿಂದಿನ ಪ್ರಶ್ನೆ ಪತ್ರಿಕೆ ಗಳನ್ನೇ ಎರಡು, ಮೂರು ಬಾರಿ ಓದಿ ಅಭ್ಯಾಸ ಮಾಡಬೇಕಾಗುತ್ತದೆ. ಆಗ ಮಾತ್ರ ಪ್ರಶ್ನೆ ಪತ್ರಿಕೆಗಳಲ್ಲಿ ಬಳಸುವ ಇಂಗ್ಲಿಷ್‌ ಶೈಲಿ ಗೊತ್ತಾ ಗುತ್ತದೆ. ನ್ಯಾಷನಲ್‌ ಕೌನ್ಸಿಲ್‌ ಆಫ್ ಎಜುಕೇಷನಲ್‌ ರಿಸರ್ಚ್‌ ಆ್ಯಂಡ್‌ ಟ್ರೈನಿಂಗ್‌ನ ಸಿಬಿಎಸ್‌ಸಿ ಪಠ್ಯಗಳನ್ನು ಅಭ್ಯಾಸ ಮಾಡಿದರೆ ಒಳ್ಳೆಯದು, ವಿಕಿಪೀಡಿಯಾದಲ್ಲೂ ಕೆಲವು ಮಾಹಿತಿಗಳನ್ನು ಓದಿ ತಿಳಿದುಕೊಳ್ಳಬಹುದು.
ಪ್ರಶ್ನೆ ಪತ್ರಿಕೆಗಳಲ್ಲಿ ಕೊಟ್ಟಿರುವ ಪ್ರಶ್ನೆಗಳು ಯಾವ ವಿಷಯಕ್ಕೆ ಸಂಬಂಧಿಸಿವೆ ಎಂಬುದನ್ನು ಅರಿತು ಪತ್ರಿಕೆಗಳಲ್ಲೂ ಅದೇ ಸುದ್ದಿ, ಲೇಖನ ಗಳನ್ನು ವಿವರವಾಗಿ ಓದಬೇಕು. ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಪ್ರಶ್ನೆಗಳನ್ನು ಗಮನಿಸಿ, ಕನ್ನಡದಲ್ಲೂ ಅಭ್ಯಾಸ ಮಾಡಬಹುದು. ಮುಂದಿನ ತಿಂಗಳು ನಡೆಯುವ ಐ.ಎ.ಎಸ್. ಪೂರ್ವಭಾವಿ ಪರೀಕ್ಷೆಗೆ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಣಿಯಾಗುತ್ತಿ ದ್ದಾರೆ. ಮೊದಲ ಪ್ರಯತ್ನದಲ್ಲಿರುವವರು, ಈಗಾಗಲೇ ಎರಡು, ಮೂರು ಬಾರಿ ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳು ಐ.ಎ.ಎಸ್‌. ಕೈಗೆಟುಕದ ದ್ರಾಕ್ಷಿ ಎಂದು ಸುಮ್ಮನೇ ಕೂರದೇ ಸತತ ಪ್ರಯತ್ನ, ಪರಿಶ್ರಮವಹಿಸಿದರೆ ಯಶಸ್ಸು ಗಳಿಸಬಹುದು. ಇದುವರೆಗೂ ನಡೆದಿರುವ ಐ.ಎ.ಎಸ್‌., ಕೆ.ಎ.ಎಸ್‌., ಪ್ರಶ್ನೆ ಪತ್ರಿಕೆಗಳನ್ನು, ಆಯಾ ವಿಷಯವಾರು ನೋಡಬಯಸುವವರುteachflat.blogspot.in ಸಂಪರ್ಕಿಸಬಹುದು.

ಕೆ–ಸೆಟ್‌ ಎದುರಿಸಲು ಸಿದ್ಧರಾಗಿ...

ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರು/ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಬಯಸುವ ಸ್ನಾತಕೋತ್ತರ ಪದವೀಧರರು/ ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿ. ಮೈಸೂರು ವಿಶ್ವವಿದ್ಯಾಲಯವು ಬರುವ ನವೆಂಬರ್ 30ರಂದು ರಾಜ್ಯಮಟ್ಟದ ಅರ್ಹತಾ ಪರೀಕ್ಷೆ (ಕೆ–ಸೆಟ್) ನಡೆಸಲಿದ್ದು, ಇದರಲ್ಲಿ ಉತ್ತೀರ್ಣರಾದವರು ಉಪನ್ಯಾಸಕ/ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಲು ಅರ್ಹತೆ ಪಡೆಯಲಿದ್ದಾರೆ.
ವಿಶ್ವವಿದ್ಯಾಲಯ ಅನುದಾನ ಆಯೋಗ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಮಾದರಿಯಲ್ಲೇ ಕೆ–ಸೆಟ್ ಪರೀಕ್ಷೆ ನಡೆಯಲಿದೆ. ಎನ್ಇಟಿ ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಬರೆಯಲು ಅವಕಾಶ ಇದೆ. ಆದರೆ, ಕೆ–ಸೆಟ್ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಕೆಲ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳನ್ನು ಕನ್ನಡ, ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ಇದೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಕೆ–ಸೆಟ್ ಪರೀಕ್ಷೆ ಎದುರಿಸುವುದು ಕಷ್ಟವಾಗಲಾಗದು.
ಹಿಂದೆಲ್ಲ 3–4 ವರ್ಷಗಳಿಗೊಮ್ಮೆ ಕೆ–ಸೆಟ್ ಪರೀಕ್ಷೆ ನಡೆಯುತ್ತಿತ್ತು. ಆದರೆ, ಕಳೆದ ವರ್ಷದಿಂದ ಈಚೆಗೆ ಪ್ರತಿ ವರ್ಷ ಕೆ–ಸೆಟ್ ಪರೀಕ್ಷೆ ಆಯೋಜಿಸಲು ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿದೆ. ಯುಜಿಸಿ ಇದಕ್ಕೆ ಅನುಮೋದನೆ ನೀಡಿದೆ. ಉಪನ್ಯಾಸಕರಾಗಲು ಬಯಸುವ ಆಕಾಂಕ್ಷಿಗಳು ಯಾವಾಗ ಕೆ–ಸೆಟ್ ನಡೆಯುತ್ತದೊ ಎಂದು ಚಾತಕ ಪಕ್ಷಿಗಳ ಹಾಗೆ ಕಾಯುವುದು ತಪ್ಪಿದೆ. ಅಂತಿಮ ವರ್ಷದ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಕೆ–ಸೆಟ್ ಪರೀಕ್ಷೆ ಬರೆಯಬಹುದು.
ಒಟ್ಟು 32 ವಿಷಯಗಳಲ್ಲಿ, ರಾಜ್ಯದ 11 ನೋಡಲ್ ಕೇಂದ್ರಗಳಲ್ಲಿ ನವೆಂಬರ್ 30ರಂದು ಪರೀಕ್ಷೆ ನಡೆಯಲಿದ್ದು, ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸ್ನಾತಕೋತ್ತರ ಪದವಿಯಲ್ಲಿ ಶೇ 55ರಷ್ಟು ಅಂಕಗಳನ್ನು ಪಡೆದಿರುವವರು (ಸಾಮಾನ್ಯ ವರ್ಗ) ಕೆ–ಸೆಟ್ ಪರೀಕ್ಷೆ ತೆಗೆದುಕೊಳ್ಳಬಹುದು. ಪರಿಶಿಷ್ಟ ಜಾತಿ/ಪಂಗಡ ಹಾಗೂ ಇತರೆ ಮೀಸಲಾತಿ ಪ್ರವರ್ಗದಡಿ ಬರುವವರು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು.
ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ಪರೀಕ್ಷೆ ತೆಗೆದುಕೊಳ್ಳಲಿರುವ ವಿದ್ಯಾರ್ಥಿಗಳು ಕೆ–ಸೆಟ್ ಪರೀಕ್ಷೆ ತೆಗೆದುಕೊಳ್ಳಬಹುದು. ಆದರೆ, ಇದು ತಾತ್ಕಾಲಿಕ ಪ್ರವೇಶವಾಗಿದೆ. ಸ್ನಾತಕೋತ್ತರ ಪದವಿಯಲ್ಲಿ ನಿಗದಿತ ಅಂಕಗಳನ್ನು ಪಡೆದು, ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಉಪನ್ಯಾಸಕ ಅರ್ಹತಾ ಪತ್ರ ನೀಡಲಾಗುತ್ತದೆ. ಅಂತಹ ಅಭ್ಯರ್ಥಿಗಳು ಕೆ–ಸೆಟ್ ಪರೀಕ್ಷೆ ನಡೆದ ಎರಡು ವರ್ಷದ ಒಳಗಾಗಿ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹವರನ್ನು ಅನರ್ಹರು ಎಂದು ಪರಿಗಣಿಸಲಾಗುತ್ತದೆ.
ಸಾಮಾನ್ಯ ವರ್ಗಕ್ಕೆ ಸೇರದ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿಯಲ್ಲಿ ತಮ್ಮ ಜಾತಿಯನ್ನು ನಮೂದಿಸಬೇಕು. ಮುದ್ರಿತ ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರದ ಪ್ರತಿ, ಎಸ್ಸೆಸ್ಸೆಲ್ಸಿ, ಸ್ನಾತಕೋತ್ತರ ಪದವಿಯ ಅಂಕಪಟ್ಟಿ ಸಲ್ಲಿಸಬೇಕು. ಜಾತಿ ಪ್ರಮಾಣ ಪತ್ರವನ್ನು 2013ರ ಸೆಪ್ಟೆಂಬರ್ 1ರಿಂದ 2014ರ ಸೆಪ್ಟೆಂಬರ್ 1ರ ಒಳಗೆ ಪಡೆದಿರಬೇಕು. ಮೀಸಲಾತಿ ಕೋರುವ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಿ, ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ ₨1000, ಪ್ರವರ್ಗ -2ಎ, 2ಬಿ, 3ಎ, 3ಬಿಗೆ ಸೇರಿದವರಿಗೆ ₨800, ಪ್ರವರ್ಗ -1, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಂಗವಿಕಲರಿಗೆ ₨ 500. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಬ್ಯಾಂಕ್ ಚಲನ್ ಮುದ್ರಿಸಿ ಎಸ್‌ಬಿಎಂ ಶಾಖೆಯಲ್ಲಿ ಶುಲ್ಕ ಪಾವತಿಸಬೇಕು.
ಪರೀಕ್ಷಾ ವಿಧಾನ: ಕೆ–ಸೆಟ್ ಪರೀಕ್ಷೆಯು ಬಹುಆಯ್ಕೆ ಮಾದರಿಯ ಮೂರು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ನವೆಂಬರ್ 30ರಂದು ಒಂದೇ ದಿನ ಪರೀಕ್ಷೆ ನಡೆಯಲಿದೆ. ಮೊದಲ ಅವಧಿಯ ಪತ್ರಿಕೆ-1 ಮತ್ತು 2 ತಲಾ 100 ಅಂಕಗಳನ್ನು ಒಳಗೊಂಡಿರುತ್ತದೆ. ಮೊದಲ ಪತ್ರಿಕೆಯಲ್ಲಿ 60 ಪ್ರಶ್ನೆಗಳ ಪೈಕಿ 50ಕ್ಕೆ ಉತ್ತರಿಸಬೇಕು. ಎರಡನೇ ಪತ್ರಿಕೆಯಲ್ಲಿ 50 ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯ. 150 ಅಂಕಗಳ ಮೂರನೇ ಪ್ರಶ್ನೆಪತ್ರಿಕೆಯಲ್ಲಿ 75 ಪ್ರಶ್ನೆಗಳು ಕಡ್ಡಾಯವಾಗಿರುತ್ತವೆ.
ಪ್ರಶ್ನೆಪತ್ರಿಕೆ -1 ಸಾಮಾನ್ಯ ಜ್ಞಾನ, ಬೋಧನೆ/ಸಂಶೋಧನೆ, ಅಭಿರುಚಿಗೆ ಸಂಬಂಧಿಸಿದ್ದಾಗಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಯನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುವಂತಹದ್ದಾಗಿರುತ್ತದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿ ಮಾಡಲಾಗಿದೆ.
ಪ್ರಶ್ನೆಪತ್ರಿಕೆ -2 ಮತ್ತು 3 ಅಭ್ಯರ್ಥಿಯು ಆಯ್ಕೆ ಮಾಡಿಕೊಂಡ ವಿಷಯದ್ದಾಗಿರುತ್ತದೆ. 2ನೇ ಪತ್ರಿಕೆಯಲ್ಲಿ 50 ಹಾಗೂ 3ನೇ ಪತ್ರಿಕೆಯಲ್ಲಿ 75 ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕು. ಇಲ್ಲೂ ಪ್ರತಿಪ್ರಶ್ನೆಗೆ ತಲಾ 2 ಅಂಕಗಳನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾಹಿತಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ –ಜುಲೈ 31
₨100 ದಂಡದೊಂದಿಗೆ ಅರ್ಜಿ ಸಲ್ಲಿಸಲು ಕೊನೆ ದಿನ –ಆ.14
ಭರ್ತಿ ಮಾಡಿ ಮುದ್ರಿಸಿದ ಅರ್ಜಿಯೊಂದಿಗೆ ಬ್ಯಾಂಕ್ ಚಲನ್, ಜಾತಿ ಪ್ರಮಾಣ ಪತ್ರವನ್ನು ನೋಡಲ್ ಕೇಂದ್ರಕ್ಕೆ ಸಲ್ಲಿಸಲು ಕೊನೆ ದಿನ –ಸೆಪ್ಟೆಂಬರ್ 1
ಪರೀಕ್ಷೆ ದಿನಾಂಕ – ನವೆಂಬರ್ 30
ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಾಪುರ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು. ಒಮ್ಮೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.
ಫಲಿತಾಂಶ ಹೇಗೆ?
ಮೊದಲ ಹಂತದಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ 1 ಮತ್ತು 2ರಲ್ಲಿ ಶೇ 40ರಷ್ಟು ಹಾಗೂ ಪ್ರಶ್ನೆಪತ್ರಿಕೆ 3ರಲ್ಲಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು. ಇತರರು ಕ್ರಮವಾಗಿ ಶೇ 35 ಹಾಗೂ ಶೇ 40ರಷ್ಟು ಅಂಕಗಳನ್ನು ಪಡೆದಿರಬೇಕು. ಎರಡನೇ ಹಂತದಲ್ಲಿ ಅಭ್ಯರ್ಥಿಯು ಮೂರೂ ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿಯನ್ನು ವಿಷಯವಾರು ಹಾಗೂ ಪ್ರವರ್ಗವಾರು ತಯಾರಿಸಲಾಗುತ್ತದೆ. ಮೂರನೇ ಹಂತದಲ್ಲಿ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಆಧರಿಸಿ, ಮೊದಲ ಶೇ 15ರಷ್ಟು (ಪ್ರತಿ ವಿಷಯವಾರು ಹಾಗೂ ಪ್ರವರ್ಗವಾರು) ಅಭ್ಯರ್ಥಿಗಳನ್ನು ಕೆ–ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ.

ನಿವೂ ಹೆಲಿಕಾಪ್ಟರ್ ತಯಾರಿಸಿ

ಬೇಕಾಗುವ ಸಲಕರಣೆಗಳು: A4 ಅಳತೆಯ ಕಾಗದ, ಪೆನ್ಸಿಲ್, ಕತ್ತರಿ, ಕ್ಲಿಪ್.
ವಿಧಾನ: ಎರಡು ಸೆಂಟಿಮೀಟರ್ ಅಗಲ ಹಾಗೂ 10 ಸೆಂಟಿಮೀಟರ್ ಉದ್ದನೆಯ ಒಂದು ಕಾಗದದ ತುಂಡನ್ನು ಕತ್ತರಿಸಿಕೊಳ್ಳಿರಿ. ಚಿತ್ರ ‘ಅ’ ದಲ್ಲಿ ತೋರಿಸಿದಂತೆ ಪೆನ್ಸಿಲ್‌ನಿಂದ ಗುರುತು ಹಾಕಿಕೊಳ್ಳಿ.
ಉದ್ದಕ್ಕೆ ಲಂಬವಾಗಿ ಎರಡು ಬದಿಗೆ ಅರ್ಧ ಸೆಂಟಿಮೀಟರ್‌ನಷ್ಟು ಕತ್ತರಿಸಿ ಮತ್ತು ಕಪ್ಪು ಭಾಗಗಳನ್ನು ಮಡಿಚಿ, ಕೆಳಭಾಗದಲ್ಲಿ ಕ್ಲಿಪ್ ಹಾಕಿರಿ  ಮತ್ತು  ನಡುವಿನ ರೇಖೆಯಗುಂಟ ಕತ್ತರಿಸಿ, ಚಿತ್ರದಲ್ಲಿ ತೋರಿಸಿದಂತೆ ಮಡಚಿರಿ. ಚಿತ್ರ ‘ಬ’ ದಲ್ಲಿ ತೋರಿಸಿದಂತೆ ಹಿಡಿದುಕೊಂಡು ಎತ್ತರದಿಂದ ಬಿಡಿರಿ.
ಪ್ರಶ್ನೆ: ನಿಮ್ಮ ಮಾದರಿ ಹೆಲಿಕಾಪ್ಟರ್ ಕೆಳಗೆ ಬರುವಾಗ ಹೇಗೆ ಬರುತ್ತದೆ? ಯಾಕೆ?

ಉತ್ತರ: ನೇರವಾಗಿ ಅಥವಾ ಗ್ಲೈಡರಿನಂತೆ ಕೆಳಗೆ ಬರದೆ ಅದು ತನ್ನ ಅಕ್ಷದ ಸುತ್ತ ಸತ್ತುತ್ತ ನಿಧಾನವಾಗಿ ಕೆಳಗೆ ಬರುತ್ತದೆ. ವಾಯುರೋಧ ಆವರ್ತಿಸುವ ರೇಖೆಗಳ ಚಲನಾ ಜಡತ್ವದಿಂದ ರೆಕ್ಕೆಗಳು ತೆರೆದುಕೊಳ್ಳುವವು. ಕೆಳಗೆ ಬರು
ತ್ತಿರುವ ಮಾದರಿ ಹೆಲಿಕಾಪ್ಟರ್‌ಗೆ ಆವರ್ತನೆಯಿಂದ ಸ್ಥಿರತೆ ದೊರೆಯುತ್ತದೆ. ಕೆಲವು ಸಸ್ಯಗಳ ಫಲ-ಬೀಜಗಳು ಇದೇ ರೀತಿ ಕಳಚಿ ಪ್ರಸಾರಗೊಳ್ಳುತ್ತವೆ.

ನೀವೂ ತುಂತುರಕ ತಯಾರಿಸಿರಿ

ಬೇಕಾಗುವ ಸಲಕರಣೆಗಳು: ಪೇಯ ಕುಡಿಯುವ ಊದುಕೊಳವೆ, ಬ್ಲೇಡ್, ಬೀಕರ್, ನೀರು.
ವಿಧಾನ: ಪೇಯ ಕುಡಿಯುವ ಒಂದು ಊದುಗೊಳವೆಯನ್ನು (ಸ್ಟ್ರಾ) ತೆಗೆದುಕೊಳ್ಳಿರಿ. ಎರಡು ತುದಿಗೆ ಅ ಮತ್ತು ಬ ಎಂದು ಹೆಸರಿಸಿರಿ.  ಒಂದು ಹೀರುಗೊಳವೆಯ (ಸ್ಟ್ರಾ) ಮಧ್ಯದಲ್ಲಿ ಅರ್ಧದಷ್ಟು ಭಾಗವನ್ನು ಕತ್ತರಿಸಿರಿ. ಚಿತ್ರದಲ್ಲಿ ತೋರಿಸಿದಂತೆ ಬ ತುದಿಯನ್ನು ನೀರಿರುವ ಬೀಕರ್‌ನಲ್ಲಿಟ್ಟು ಅ ತುದಿಯಿಂದ ಊದಿರಿ.
ಪ್ರಶ್ನೆ: ಹೀರುಗೊಳವೆಯ (ಸ್ಟ್ರಾ) ಅ ಬದಿಯಿಂದ ಊದಿದಾಗ ಏನಾಗುತ್ತದೆ, ಯಾಕೆ?
ಉತ್ತರ: ಹೀರುಗೊಳವೆ (ಸ್ಟ್ರಾ)ಯ  ಅ ತುದಿಯಿಂದ ಊದಿದಾಗ ಗಾಳಿ ಕ ದಿಂದ ಹೊರಹೋಗುತ್ತದೆ. ಈ ಚಲಿಸುವ ಗಾಳಿಯ ಒತ್ತಡ ಕಡಿಮೆ ಇರುತ್ತದೆ. ಇದು ಬರ್ನಾಲಿ ತತ್ವ. ಆದರೆ ಬೀಕರಿನಲ್ಲಿರುವ ನೀರಿನ ಮೇಲೆ ಬೀಳುವ ಒತ್ತಡ ಹೆಚ್ಚು. ಇದರಿಂದ ಒತ್ತಡದಲ್ಲಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಬಕ ದಲ್ಲಿ ನೀರು ಮೇಲೆ ಏರಿ ತುಂತುರಿಸುತ್ತದೆ. ಔಷಧಿ ತುಂತುರಕಗಳು, ಹೀಗೆಯೇ ಕೆಲಸ ಮಾಡುತ್ತವೆ.

ಚೆಂಡಿನ ಚಲನೆ ಹೇಗೆ?

ಬೇಕಾಗುವ ಸಾಮಗ್ರಿ: 2 ಊದುಕೊಳವೆ, ಒಂದು ಕ್ಲಿಪ್, ಪೆನ್ಸಿಲ್‌, ಟೇಬಲ್ ಟೆನಿಸ್, ರಬ್ಬರ್‌ ಬ್ಯಾಂಡ್‌
ವಿಧಾನ:  ಚಿತ್ರದಲ್ಲಿ ತೋರಿಸಿದಂತೆ 2 ಪೇಯ ಕುಡಿಯುವ ಊದುಕೊಳವೆಗಳನ್ನು (ಸ್ಟ್ರಾ) ತೆಗೆದುಕೊಳ್ಳಿರಿ. ಪೇಯದೊಳಗೆ ಇಳಿಬಿಡುವ ತುದಿಯನ್ನು ಕೂಡಿಸಿ ಒಂದು ಕ್ಲಿಪ್ ಹಾಕಿರಿ.
ಇನ್ನೊಂದು ಬದಿಯ ಕಡೆ, ಊದುಕೊಳವೆಯ (ಸ್ಟ್ರಾದ) ಕೆಳಗಡೆ ಒಂದು ಪೆನ್ಸಿಲ್ ಇಡಿ. ಪೆನ್ಸಿಲ್ ಕಡೆಯ ಊದು ಕೊಳವೆಯ (ಸ್ಟ್ರಾದ) ಮೇಲೆ ಮತ್ತೊಂದು ಪೆನ್ಸಿಲ್‌ನ್ನು ಇಡಿರಿ.  ಕ್ಲಿಪ್ ಕಡೆಯ ಊದುಕೊಳವೆಯ (ಸ್ಟ್ರಾದ) ಮೇಲೆ ಒಂದು ಟೇಬಲ್ ಟೆನಿಸ್ ಚಂಡನ್ನು ಇಡಿ.
ಪ್ರಶ್ನೆ: ಪೆನ್ಸಿಲ್ ಮತ್ತು ಚಂಡು ಹೇಗೆ ಚಲಿಸುತ್ತವೆ. ಯಾಕೆ ?
ಉತ್ತರ:
 ಪೆನ್ಸಿಲ್ ಎತ್ತರದ ಕಡೆಯಿಂದ ಕಡಿಮೆ ಎತ್ತರವಿರುವ ಕಡೆ ಅಂದರೆ ಗುರುತ್ವಾಕರ್ಷಣೆಯ ಕೇಂದ್ರ ಬಿಂದುವಿನ ಕಡೆಗೆ ಚಲಿಸುತ್ತದೆ. ಚೆಂಡು ಕೆಳಗಿನಿಂದ ಮೇಲೆ ಹೋಗುತ್ತದೆ. ಚೆಂಡು ಕೆಳಗಿನಿಂದ ಮೇಲೆ ಹೋದರೂ ಕೂಡ ಅದು ಗುರುತ್ವಾಕರ್ಷಣೆಯ ಬಿಂದುವಿನ ಕಡೆಗೇ ಹೋಗುತ್ತದೆ.

ಇಂಗ್ಲಿಷ್‌ ಕಲಿಯುವ ಬಗೆ

ಹತ್ತನೇ ತರಗತಿಯ ದ್ವಿತೀಯ ಭಾಷೆ (ಇಂಗ್ಲಿಷ್) ಪಠ್ಯಪುಸ್ತಕದಲ್ಲಿ ಒಟ್ಟು 8 ಘಟಕಗಳಿವೆ. ಇದರೊಂದಿಗೆ 4 ಪೂರಕ ಅಧ್ಯಯನಗಳನ್ನು ಸೂಚಿಸಲಾಗಿದೆ.  ಕೊನೆಯಲ್ಲಿ ಪೂರಕ ಮಾಹಿತಿ ನೀಡಲಾಗಿದೆ.   ಈ 8 ಘಟಕಗಳಲ್ಲಿಯೂ ಭಾಷಾ ಕೇಂದ್ರಿತ ಹಾಗೂ ವಿಷಯವಸ್ತು ಕೇಂದ್ರಿತ ಉದ್ದೇಶಗಳನ್ನು ಕಾಪಾಡಿಕೊಂಡು ಬರಲಾಗಿದೆ. ಈ ಹೊಸ ಪಠ್ಯಪುಸ್ತಕದಲ್ಲಿ ನಿಗದಿಪಡಿಸಿರುವ ಎಲ್ಲಾ ಗದ್ಯ ಮತ್ತು ಪದ್ಯ ಪಾಠಗಳನ್ನು ಮೂಲ ಲೇಖಕರು ಬರೆದಿರುವ ಯಥಾಪ್ರತಿಯನ್ನು ಹಾಗೆಯೇ ತೆಗೆದುಕೊಂಡು ಅವುಗಳಿಗೆ ಅಭ್ಯಾಸ ಪ್ರಶ್ನೆಗಳನ್ನು ಮತ್ತು ಚಟುವಟಿಕೆಗಳನ್ನು ರಚಿಸಲಾಗಿದೆ. ಇದರಿಂದ ಓದುಗರು ಪ್ರಥಮ  ಮಾಹಿತಿಯನ್ನು ಓದಿ, ಅರ್ಥೈಸಿಕೊಂಡು ಉತ್ತರಿಸಲು ಸಹಕಾರಿಯಾಗಿದೆ.
  ಮೊದಲ ಘಟಕವು ಹಾಸ್ಯಕ್ಕಾಗಿ ಮೀಸಲಾಗಿರಿಸಿದೆ. ಎರಡನೆಯ ಘಟಕವು ಕರುಣಾರಸವನ್ನು ಸೂಚಿಸುವಂಥದ್ದಾಗಿದೆ.
ಮೂರನೆಯ ಘಟಕದಲ್ಲಿ ನೆಟಿವಿಟಿ ಥೀಮ್ ಆಧರಿಸಿದೆ. ನಾಲ್ಕನೆಯ ಘಟಕದಲ್ಲಿ ಸಂತೋಷವನ್ನು ಬಿಂಬಿಸಲಾಗಿದೆ.  ಐದನೆಯದರಲ್ಲಿ ಸಂಗೀತವನ್ನು ಆರನೆಯ ಘಟಕದಲ್ಲಿ ಸಾಹಸವನ್ನು ಏಳನೆಯ ಘಟಕದಲ್ಲಿ ಇಚ್ಛಾಶಕ್ತಿಯನ್ನು ಹೆಚ್ಚಿಸುವಂತೆ ವಿಕಲ ಚೇತನರ ಬಗೆಗಿನ ಲೇಖನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಂಟನೆಯ ಘಟಕವು ವೈಜ್ಞಾನಿಕ ಬರಹವನ್ನು ಒಳಗೊಂಡಿದೆ.
ಭಾಷಾ ಪಠ್ಯಪುಸ್ತಕದಲ್ಲಿ ಬರಹಕ್ಕೆ ಬೇಕಿರುವ ಎಲ್ಲ ರಸಗಳನ್ನು ಅಡಕಗೊಳಿಸುವ ಪ್ರಯತ್ನ ಇದಾಗಿದೆ. ಅಭಿವ್ಯಕ್ತಿಯ ವಿವಿಧ ಪ್ರಕಾರಗಳನ್ನುಒಂದೆಡೆ ಸಮಗ್ರವಾಗಿ ನೀಡುವಂತೆ ರೂಪಿಸಲಾಗಿದೆ.
ಕೇವಲ ಓದಿಗಾಗಿ ಈ ಅಧ್ಯಯನಗಳನ್ನು ರೂಪಿಸಿಲ್ಲ. ಪ್ರತಿ ಘಟಕದ ನಂತರವೂ ಭಾಷಾ ಕೌಶಲಗಳನ್ನು ಹೆಚ್ಚಿಸುವಂಥ ಚಟುವಟಿಕೆಗಳನ್ನು ನೀಡಲಾಗಿದೆ.  ಕೇಳುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಪ್ರಚೋದಿಸುವಂತೆ ಮಾಡಲಾಗಿದೆ. ಜೊತೆಗೆ ಶಬ್ದ ಸಂಪತ್ತು ಹೆಚ್ಚುವಂತೆ, ಮಾಡುವುದು, ಬರವಣಿಗೆ ಮತ್ತು ಭಾಷಾ ಬಳಕೆಯಲ್ಲಿ ವ್ಯಾಕರಣ ಬದ್ಧವಾಗಿರುವುದು, ಇವೆಲ್ಲವನ್ನೂ ಆನ್ವಯಿಕ ಗೊಳಿಸಲು ಪ್ರಾಜೆಕ್ಟ್‌ ವರ್ಕ್‌ಗಳನ್ನೂ ನೀಡಲಾಗಿದೆ. 
ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಓದಿನ ರುಚಿ ಹತ್ತಿಸಲು ಪೂರಕ ಓದನ್ನೂ ಪರಿಚಯಿಸಲಾಗಿದೆ.
ಪ್ರತಿಯೊಂದು ಘಟಕಗಳ ಅಧ್ಯಯನಕ್ಕೂ ಮೊದಲು ಹಲವಾರು ಚಟುವಟಿಕೆಗಳನ್ನು ಪರಿಚಯಿಸಲಾಗಿದೆ. ಈ ಚಟುವಟಿಕೆಗಳು ಆಯಾ ಘಟಕದ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ. ಸಾಹಸ, ಆನಂದ, ಹಾಸ್ಯ ಮುಂತಾದವುಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಸ್ವಯಂಪ್ರೇರಿತರಾಗಿ ಹಲ ವಾರು ಚಟುವಟಿಕೆಗಳನ್ನು ರೂಪಿಸಬಹುದಾಗಿದೆ. 
ಗದ್ಯಭಾಗದಲ್ಲಿ ಪ್ರತಿಯೊಂದು ಪುಟದಲ್ಲಿಯೂ ಪಾಠವನ್ನು ಮನನ ಮಾಡಲು ಹಲವಾರು ಉಪಾಯಗಳನ್ನು ಅಳವಡಿಸಲಾಗಿದೆ. ನಿಮಗೇನು ತಿಳಿಯಿತು, ನಿಮ್ಮ ಪ್ರತಿಕ್ರಿಯೆ ಏನು? ಎಂಬಂಥ ಪ್ರಶ್ನೆಗಳನ್ನು ಮೂರು ನಾಲ್ಕು ಪ್ಯಾರಾಗ್ರಾಫ್‌ಗಳ ನಂತರ ನೀಡಲಾಗಿದೆ. ಪುಟದಲ್ಲಿ ಬರುವ ಕಠಿಣ ಶಬ್ದಗಳಿಗೆ ಅರ್ಥಗಳನ್ನೂ ಅದೇ ಪುಟದ ಅಡಿಬರಹದಲ್ಲಿ ವಿವರಿಸಲಾಗಿದೆ. ಸರಳವಾಗಿ ಇಡೀ ಪಾಠವನ್ನು ಮನನ ಮಾಡಿಕೊಳ್ಳಲು ಈ ಎಲ್ಲ ಚಟುವಟಿಕೆಗಳೂ ಸಹಾಯ ಮಾಡಲಿವೆ.  ಮಕ್ಕಳ ಗಮನ ಸೆಳೆಯಲು, ಮನವರಿಕೆ ಮಾಡಿಕೊಡಲು ಪೂರಕ ಚಿತ್ರಗಳನ್ನೂ ಬಳಸಿಕೊಳ್ಳಲಾಗಿದೆ.
ಅಭಿವ್ಯಕ್ತಿಗೆ ಹೆಚ್ಚು ಅವಕಾಶ ಕೊಡುವಂಥ ಪ್ರಶ್ನೆಗಳನ್ನು ರೂಪಿಸಲಾಗಿದ್ದು, ಪಠ್ಯದ ಬಗ್ಗೆ ಯೋಚಿಸಿ ಎಂಬಂಥ ಚಟುವಟಿಕೆಯನ್ನು ನೀಡಲಾಗಿದೆ. ಸಿದ್ಧ ಉತ್ತರಗಳನ್ನು ಪಠ್ಯದಲ್ಲಿ ಹುಡುಕುವುದು ಅಸಾಧ್ಯ. ಅವರ ಅರಿವಿಗೆ ಬಂದಿದ್ದನ್ನು ಬರಹಕ್ಕೆ ಇಳಿಸಬೇಕಿರುವುದು ಈ ಪ್ರಶ್ನೋತ್ತರಗಳ ವಿಶೇಷವಾಗಿದೆ.
ವಿದ್ಯಾರ್ಥಿಗಳ ಶಬ್ದ ಸಂಪತ್ತನ್ನು ಹೆಚ್ಚಿಸಲು ಪ್ರತಿಯೊಂದು ಘಟಕದಲ್ಲಿಯೂ ಆ ಥೀಮ್‌ಗೆ ಅನುಗುಣವಾದ ಒಂದಷ್ಟು ಶಬ್ದಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆ ಶಬ್ದಗಳ ಅರ್ಥ, ಬಳಕೆಯನ್ನು ವಿವರಿಸಲಾಗಿದೆ.
ಭಾಷೆಯೊಂದನ್ನು ಕೇಳದೇ ಮಾತಿಗೆ ತರಲಾರರು. ಉತ್ತಮ ಕೇಳುಗ ಮಾತ್ರ, ಉತ್ತಮ ವಾಕ್ಪಟು ಆಗಬಹುದು. ಹಾಗಾಗಿ ಪುಸ್ತಕದಲ್ಲಿ ಸಂಭಾಷಣೆಯ ರೂಪದ ಚಟುವಟಿಕೆಗಳನ್ನೂ ನೀಡಲಾಗಿದೆ. ಶಬ್ದ ಸಂಪತ್ತಿನೊಂದಿಗೆ, ಬಳಕೆ, ಆಂಗಿಕ ಚಲನವಲನ ಮುಂತಾದವುಗಳಿಂದ ಭಾಷೆಯನ್ನು  ಸಂವಹನಕ್ಕೆ ಒಗ್ಗುವಂತೆ ಮಾಡಲು ಈ ಚಟುವಟಿಕೆಗಳನ್ನು ನೀಡಲಾಗಿದೆ.
ಓದಿಗೆ ಸಂಬಂಧಿಸಿದಂತೆಯೂ ಹಲವಾರು ಹೊಸತನದಿಂದ ಕೂಡಿದ ಪ್ರಯೋಗಗಳನ್ನು ನೀಡಲಾಗಿದೆ. ಸಂಕೇತಗಳನ್ನು ಅರ್ಥೈಸಿಕೊಳ್ಳುವುದು, ಚಿತ್ರಗಳನ್ನು ಓದುವುದು, ನಕ್ಷೆಯನ್ನು ಅರ್ಥೈಸಿಕೊಳ್ಳುವುದು, ಮುಂತಾದ ಪ್ರಯೋಗಗಳನ್ನು ನೀಡಲಾಗಿದೆ.  
ದಿನನಿತ್ಯದ ಬಳಕೆಗೆ ನೀಡಿರುವಷ್ಟೇ ಮಹತ್ವವನ್ನು ಬರವಣಿಗೆಗೂ ನೀಡಲಾಗಿದೆ.
ಇಂಗ್ಲಿಷ್‌ ಬರವಣಿಗೆಯ ಮೂಲ ಕೌಶಲಗಳಾದ, ಶಬ್ದ ಸಂಪತ್ತು, ಸ್ಪೆಲ್ಲಿಂಗ್‌, ಉಚ್ಚಾರಣೆ, ಕೈ ಬರಹ, ಮಾಹಿತಿ ಸಂಗ್ರಹ, ಕ್ರಮಬದ್ಧ ರೂಪದಲ್ಲಿ ಜೋಡಣೆ, ಕರಡುಪ್ರತಿ ತಯಾರಿಕೆ ಮುಂತಾದವುಗಳನ್ನೂ ನೀಡಲಾಗಿದೆ.
ಸಂವಹನದ ಮೂಲಕ ವ್ಯಾಕರಣ ಕಲಿಯಿರಿ ಎಂಬ ಚಟುವಟಿಕೆಯನ್ನು ನೀಡಿದ್ದು, ವ್ಯಾಕರಣ ಸೂತ್ರಗಳಿಗಿಂತ ಆನ್ವಯಿಕ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. 
ಮಾಹಿತಿ ಸಂಗ್ರಹಣೆಗಾಗಿ ಉಲ್ಲೇಖಗಳನ್ನು ಹುಡುಕುವಂತೆ, ಅವನ್ನು ಪ್ರಸ್ತುತ ಪಡಿಸುವಂತಹ ಪ್ರಾಜೆಕ್ಟ್‌ಗಳನ್ನೂ ನೀಡಲಾಗಿದೆ.
ಸಮಗ್ರವಾಗಿ ಈ ಪಠ್ಯಪುಸ್ತಕವನ್ನು ದಿನನಿತ್ಯದ ಬಳಕೆಯಲ್ಲಿ, ಬರಹದಲ್ಲಿ ಇಂಗ್ಲಿಷ್‌ ಅನ್ನು ಸರಳವಾಗಿ ಆಚರಣೆಗೆ ತರುವ ರೀತಿಯಲ್ಲಿ ವಿನ್ಯಾಸಗೊಳಿಸ ಲಾಗಿದೆ. ವಿದ್ಯಾರ್ಥಿಗಳೂ ಶಿಕ್ಷಕರೂ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಅಷ್ಟೆ
ಯಾವ ಪದ್ಯಗಳನ್ನೂ ಕಂಠಪಾಠಕ್ಕೆ ನೀಡಿಲ್ಲ. ಓದನ್ನು ಆಸ್ವಾದಿಸಲಿ ಎಂದೇ ಪದ್ಯದಲ್ಲಿನ ಕಾಲ್ಪನಿಕ ಅಂಶಗಳನ್ನೂ, ಉಪಮೇಯಗಳನ್ನು, ಆಲಂಕಾರಿಕ ಭಾವಗಳನ್ನೂ ಚರ್ಚಿಸುವಂಥ ಪ್ರಶ್ನೋತ್ತರಗಳನ್ನು ರೂಪಿಸಲಾಗಿದೆ. 
ಒಟ್ಟಾರೆಯಾಗಿ ಈ ಪುಸ್ತಕವು ವಿದ್ಯಾರ್ಥಿಗಳು ಜ್ಞಾನವನ್ನು ಕಟ್ಟಿಕೊಳ್ಳುವುದಕ್ಕೆ ಪ್ರೇರಣೆ ನೀಡುವಂತಿದ್ದು, ರಚನಾವಾದದ(ಕಂನ್ಟ್ರ್‌ಕ್ಟೀವಿಸ್ಟ್ ಅಪ್ರೋಚ್) ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.  ಭಾಷೆಯನ್ನು ಪ್ರತ್ಯೇಕವಾಗಿ ಕಲಿಯಲು ಸಾಧ್ಯವಿಲ್ಲ. ಬೇರೆ, ಬೇರೆ ವಿಷಯಗಳನ್ನು ಇಂಟಿಗ್ರೇಟ್ ಮಾಡಿದಾಗ ಮಾತ್ರ ಎಲ್ಲಾ ರೀತಿಯ ಪದಗಳ ಪರಿಚಯವಾಗಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಮತ್ತು ಬರೆಯಲು ಬಳಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮಿಳಿತವಾದದ (ಇಂಟಿಗ್ರೇಟೆಡ್ ಅಪ್ರೋಚ್) ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.  ವಿಷಯದ ಪುನರ್‌ಮನನಕ್ಕೆ ಪೂರಕವಾಗಿ ಸರಪಳಿವಾದದ (ಸ್ಪೈರಲ್ ಅಪ್ರೋಚ್‌)ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.    
ವಿದ್ಯಾರ್ಥಿಯ ಸ್ವ-ಕಲಿಕೆಗೆ ಮತ್ತು ಸ್ವ-ಮೌಲ್ಯಮಾಪನಕ್ಕೆ ಅನುಗುಣವಾಗುವಂತೆ ಪುಸ್ತಕದಲ್ಲಿ ಚಟುವಟಿಕೆಗಳನ್ನು ರೂಪಿಸಲಾಗಿದೆ. ಈ ವಿಧಾನದಲ್ಲಿ ಬೋಧನೆ ಮತ್ತು ಪರೀಕ್ಷೆಗಿಂತ ಕಲಿಕೆ ಮತ್ತು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಹೆಚ್ಚು ಆದ್ಯತೆ ಇದ್ದು, ವಿದ್ಯಾರ್ಥಿಯ ಕಲಿಕೆಯನ್ನು ಮೌಲ್ಯಮಾಪನ ಮಾಡಿ, ಹಿಮ್ಮಾಹಿತಿಯನ್ನು ನೀಡುತ್ತಾ ಸಾಗಬೇಕಿದೆ.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಕಂಠಪಾಠ ವ್ಯವಸ್ಥೆಯಿಂದ ಮಗುವನ್ನು ಹೊರತಂದು ತಾರ್ಕಿಕವಾಗಿ ಚಿಂತಿಸುವಂತೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಎನ್‌ಸಿಎಫ್-2005ರ ಆಶಯದಂತೆ ಯಾವುದೇ ಪದ್ಯವನ್ನು ಕಂಠಪಾಠಕ್ಕೆ ನಿಗದಿಪಡಿಸಿಲ್ಲ. ಮಗು ತನಗೆ ಇಷ್ಟವಾದ ಪದ್ಯವನ್ನು ಹಾಡಬೇಕು.  ಇಲ್ಲಿ ಶಿಕ್ಷಕರು ಮಗುವಿನ ಕಲಿಕಾನುಭವವನ್ನು ಚಕ್‌ಲಿಸ್ಟ್ ಆಧಾರದ ಮೇಲೆ ಅಳೆಯಬೇಕು. 

ಧ್ವನ್ಯಂಗಕ್ಕೂ ವ್ಯಾಯಾಮ

ವೃತ್ತಿಪರವಾಗಿ ಧ್ವನಿಯನ್ನು ಬಳಸುವವರು ಮಾಡಬಹುದಾದ ‘ವಾರ್ಮ್ ಅಪ್’ ಪೂರ್ವಾಭ್ಯಾಸದ ಕುರಿತು ಗಮನಿಸುತ್ತಿದ್ದೇವೆ. ಮಾತಿನಲ್ಲಿ ಸ್ಪಷ್ಟತೆಯಿರಬೇಕಾದರೆ ನಮ್ಮ ದವಡೆಗಳ ಚಲನೆ ಬಹಳ ಮುಖ್ಯ. ಮೇಲ್ದವಡೆಗಳು ಚಲಿಸುವುದಿಲ್ಲ. ಕೆಳದವಡೆಗಳು ಮಾತ್ರ ಚಲಿಸುವುದರಿಂದ, ನಮ್ಮ ಬಾಯಿ ತೆರೆಯುವ ಪ್ರಮಾಣ, ಇದರ ಮೇಲೆ ಅವಲಂಬಿತವಾಗಿದೆ.
ಉದಾಹರಣೆಗೆ ಶ್ರೀರಾಮನ ವರ್ಣನೆಯ ‘ರಘುವೀರ ಗದ್ಯ’ದ ಈ ಒಂದು ಸಾಲನ್ನು ಗಮನಿಸಿ:
ಜಡಕಿರಣಶಕಲಧರ-ಜಟಿಲ-ನಟಪತಿ-ಮುಕುಟತಟ-ನಟನಪಟು-
ವಿಬುಧಸರಿದತಿಬಹುಲ-ಮಧುಗಲನ-ಲಲಿತಪದನಲಿನರಜ-ಉಪಮೃದಿತ-ನಿಜವೃಜಿನ-ಜಹದುಪಲತನು-ರುಚಿರಪರಮಮುನಿವರಯುವತಿನುತ
ಹಾಗೆಯೇ ಮತ್ತೊಂದು ಸಾಲು: 
ಅಭಿಗತ-ಶತಮಖ-ಹುತವಹ-ಪಿತೃಪತಿ-ನಿರೃತಿ-ವರುಣ-ಪವನ-ಧನದ-ಗಿರಿಶಪ್ರಮುಖ-ಸುರಪತಿನುತಿಮುದಿತ,
ಅಮಿತಮತಿ-ವಿಧಿವಿದಿತ-ಕಥಿತನಿಜ- ವಿಭವಜಲಧಿ-ಪೃಷತಲವ-ವಿಗತಭಯ-ವಿಬುಧ-ವಿಬೋಧಿತ-ವೀರಶಯನ-ಶಾಯಿತ-ವಾನರಪೃತನೌಘ,
ಸ್ವಸಮಯ-ವಿಘಟಿತ-ಸುಘಟಿತ-ಸಹೃದಯ-ಸಹಧರ್ಮಚಾರಿಣೀಕ,  ವಿಭೀಷಣವಶಂವದೀಕೃತ-ಲಂಕೈಶ್ವರ್ಯ
ಇಂತಹ ಸಾಲುಗಳನ್ನು, ಲಯಬದ್ಧವಾಗಿ ಧಾರಾಕಾರವಾಗಿ ಹೇಳಲಿಕ್ಕೆ ನಿರಂತರ ಅಭ್ಯಾಸ ಮತ್ತು ಏಕಾಗ್ರತೆಯಿಂದ ಮಾತ್ರ ಸಾಧ್ಯ

ದೇಹದಾರ್ಢ್ಯ ಗಳಿಸಬೇಕಾದರೆ ವ್ಯಾಯಾಮ ಮಾಡಲೇಬೇಕು. ಅದರಲ್ಲೂ ನಿಶ್ಚಿತವಾದ ವ್ಯಾಯಾಮಗಳನ್ನೇ ಮಾಡಬೇಕು ಎನ್ನುವುದು ನಿಯಮ. ನಮ್ಮ ದೇಹದಲ್ಲಿನ ಸ್ನಾಯುಗಳನ್ನು ನಮ್ಮ ಇಚ್ಛೆಗೆ ತಕ್ಕಂತೆ, ನಾವು ಇಚ್ಛಿಸುವ ಸಮಯದಲ್ಲಿ, ನಮ್ಮ  ಅಗತ್ಯಗಳಿಗೆ ಅನುಗುಣವಾಗಿಯೇ ಬಳಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯಲಿಕ್ಕೆ ನಿಯಮಿತವಾದ ವ್ಯಾಯಾಮ ಅಗತ್ಯ. ಇದೇ ತತ್ವವನ್ನು ಮನುಷ್ಯನ ಕಂಠಸ್ವರಕ್ಕೂ ಅನ್ವಯಿಸಬೇಕು.
ಸಂಗೀತದ ಕಲಿಕೆಯಲ್ಲಿ  ಸ್ವರಸಾಧನೆಗಾಗಿ, ಬಾಲಪಾಠಗಳಿಂದ ಹಿಡಿದು ಮಧ್ಯಂತರ ಹಂತದ ಪಾಠಕ್ರಮದವರೆಗೆ ಸ್ವರೋಚ್ಚಾರಣೆಯ, ಉಸಿರಾಟದ ಕ್ರಮ ಮತ್ತು ಸ್ವರದ ಸ್ಥಾನಶುದ್ಧಿಯನ್ನು ಸಾಧಿಸುವ ಬಗೆಗೆ ಹಲವಾರು ನಿಯಮಿತ ಅಭ್ಯಾಸಗಳಿವೆ. ಇದು ಅನಿವಾರ್ಯ, ಇದು ಪಾಠಕ್ರಮ. ಆಡುಮಾತಿನಲ್ಲಿ ನಾವು ಕಂಠಧ್ವನಿಯನ್ನೇ ಬಳಸಿಕೊಳ್ಳುತ್ತೇವಾದರೂ, ಅದನ್ನೇ ಹಾಡುಗಾರಿಕೆಗೆ ಬಳಸುವಾಗ ಅದರ ವ್ಯಾಪ್ತಿಯನ್ನು (ರೇಂಜ್) ಸಮರ್ಪಕವಾಗಿ ಉಪಯೋಗಿಸಲು ಮಂದ್ರ, ಮಧ್ಯ ಮತ್ತು ತಾರಸ್ಥಾಯಿಗಳಲ್ಲಿ ಸಾಧನೆ ಮಾಡಲೇಬೇಕು.
ಸಂಗೀತದಲ್ಲಿ ನಾವು ಕಂಠಸ್ವರವನ್ನು ಬಳಸುವ ರೀತಿಗೂ ಆಡುಮಾತಿನಲ್ಲಿ ಬಳಸುವ ರೀತಿಗೂ ಸ್ವಲ್ಪ ವ್ಯತ್ಯಾಸಗಳಿವೆ. ಸಂಗೀತದಲ್ಲಿ ಹನ್ನೆರಡು ಸ್ವರಗಳ ಸ್ಥಾನವನ್ನು ಒಂದು ಸಪ್ತಕದಲ್ಲಿ ನಿಶ್ಚಿತ ಅನುಪಾತದಲ್ಲಿ ವಿಭಾಗಿಸಲಾಗಿರುವುದರಿಂದ ಆಯಾ ನಿರ್ದಿಷ್ಟ ಸ್ಥಾನಗಳನ್ನು ಕಂಠಸ್ವರ ತಲುಪಿದಾಗಲಷ್ಟೇ ಸುಸ್ವರ ಸಾಧಿತವಾಯಿತು ಎಂದು ಗುರುತಿಸಲಾಗುತ್ತದೆ.
ಎಲ್ಲರೂ ಮಾತನಾಡುವಾಗ ಸಂಗೀತದಲ್ಲಿ ಹೇಳಲಾಗಿರುವ ಸ್ವರಗಳನ್ನೇ ಬಳಸುತ್ತೇವೆ ಆದರೆ ಆಯಾ ಪೂರ್ವನಿಶ್ಚಿತ ಸ್ವರಸ್ಥಾನಗಳನ್ನಲ್ಲ. ಜೊತೆಗೆ ಸಂಗೀತದಲ್ಲಿರುವಂತೆ ಒಂದು ನಿಖರವಾದ ಆಧಾರ ಶ್ರುತಿ (ತಂಬೂರಿಯ ಸಹಾಯದಿಂದ ದೊರೆಯುವಂತೆ) ಕೇವಲ ಮಾತನಾಡುವಾಗ ಇರುವುದಿಲ್ಲ. ಹೀಗಾಗಿ ನಾವಾಡುವ ಮಾತಿನಲ್ಲಿ ಎಲ್ಲ ಸ್ವರಗಳೂ ಒಂದು ಆಧಾರ ಶ್ರುತಿಗೆ ಹೊಂದಿಕೊಂಡು ಇರುವಂತೆ ಭಾಸವಾಗುವುದಿಲ್ಲ.
ಆದ್ದರಿಂದಲೇ ಆಡುಮಾತಿನಲ್ಲಿ ಹಾಡೊಂದರಲ್ಲಿ ಶಾಸ್ತ್ರೀಯವಾಗಿ ಗ್ರಹಿಸಬಲ್ಲ ’ರಾಗ’ವನ್ನು ಗುರುತಿಸಲಾಗುವುದಿಲ್ಲ. ಆದರೆ, ಆಡುಮಾತಿನಲ್ಲಿಯೂ ವಿವಿಧ ಸ್ವರಗಳ (ಅನಿರ್ದಿಷ್ಟ ಸ್ಥಾನಗಳಲ್ಲಿಯಾದರೂ) ಬಳಸುವಿಕೆಯಿಂದ ಏರಿಳಿತಗಳು ಭಾಸವಾಗುತ್ತವೆ. ಇವುಗಳೇ ಮಾತಿಗೆ ಬಣ್ಣವನ್ನೂ ತಂದುಕೊಡುತ್ತವೆ. ಮಾತಿನಲ್ಲಿನ ಏರಿಳಿತಗಳ ಪ್ರಾಮುಖ್ಯತೆಯನ್ನು ತಿಳಿಯುವದಕ್ಕಿಂತಲೂ ಮೊದಲಿಗೆ ಸ್ಪಷ್ಟ ಉಚ್ಚಾರಣೆಗಾಗಿ ಒದಗುವಂಥ ಕೆಲವು ಸರಳ ವ್ಯಾಯಾಮಗಳನ್ನು ಗಮನಿಸಬಹುದು.
ಇಂಗ್ಲಿಷ್ ಭಾಷೆಗೆ ಸಿದ್ಧಪಡಿಸಿಕೊಟ್ಟಂತೆ ಕನ್ನಡ ಭಾಷೆಗೆ ಉಚ್ಚಾರಣಾ ಶುದ್ಧಿಯ ಸರಳ ವ್ಯಾಯಾಮಗಳನ್ನು ಯಾರೂ ಸಿದ್ಧಪಡಿದಂತೆ ಕಂಡುಬಂದಿಲ್ಲ. ಪ್ರಸಾರ ಮಾಧ್ಯಮಗಳ ಅಗತ್ಯಗಳ ಹಿನ್ನೆಲೆಯಲ್ಲಿ ಈ ಕುರಿತ ಒಂದು ನಮ್ರ (ಬಹುಶಃ ಪ್ರಥಮ) ಪ್ರಯತ್ನ ಹೀಗಿದೆ;
I. ಅ - ಹ ಗಳ ಪಲ್ಲಟಿಸುವಿಕೆಯ ಸಮಸ್ಯೆ: ಇದು ಅತ್ಯಂತ ಹೇರಳವಾಗಿ ಕಂಡುಬರುವ ಉಚ್ಚಾರಣೆಯ ಸಮಸ್ಯೆ. ಬರಹದಲ್ಲಿ ಅಕಾರವನ್ನು ನೋಡಿಯೂ ಹಕಾರವನ್ನು ಉಚ್ಚರಿಸುವುದು, ಹಕಾರವನ್ನು ಗಮನಿಸಿಯೂ ಅಕಾರವನ್ನು ಉಚ್ಚರಿಸುವುದು ಬಹಳ ಮಂದಿಗೆ ರೂಢಿಯಾಗಿಬಿಟ್ಟಿದೆ. ’ಹಾಸನ’ವನ್ನು ’ಆಸನ’ ಎಂತಲೂ ಅರಸಿಕೆರೆಯನ್ನು ’ಹರಸಿಕೆರೆ’ ಎಂತಲೂ ಸ್ವರ-ವ್ಯಂಜನಗಳನ್ನು ಪಲ್ಲಟಿಸಿ ಉಚ್ಚರಿಸುವುದರ ಕುರಿತು ಹಾಸ್ಯಚಟಾಕಿಗಳು ಪ್ರಚಲಿತವಾಗಿವೆ.
ಮುಖ್ಯವಾಗಿ ಈ ಸಮಸ್ಯೆಯ ನಿವಾರಣೆಗೆ ಆಯಾ ವರ್ಣಗಳ ಲಿಪಿಗೂ ಮತ್ತು ಉಚ್ಚಾರಣೆಗೂ ಸಮನ್ವಯವನ್ನು ಸಾಧಿಸಿಕೊಳ್ಳಬೇಕು. ಚಿಕ್ಕವಯಸ್ಸಿನಲ್ಲಿ ಇದು ಸಾಧ್ಯವಾಗದಿದ್ದವರು ಪ್ರೌಢರಾದಾಗಲಾದರೂ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸಬೇಕು. ಸರಳವಾಗಿ ಈ ಕೆಳಗಿನಂತೆ ಉಚ್ಚಾರಣೆಯ ಅಭ್ಯಾಸವನ್ನು ಪ್ರಾರಂಭಿಸಬಹುದು:
1) ಅ-ಹ ಅ-ಹ ಅ-ಹ ಅ-ಹ (೧೫ ಬಾರಿ ನಿರಂತರವಾಗಿ) - ಅಕಾರ ಮತ್ತು ಹಕಾರಗಳ ವ್ಯತ್ಯಾಸವನ್ನು ಮನಸ್ಸಿಗೆ ತಂದುಕೊಂಡು ಪ್ರಜ್ಞಾಪೂರ್ವಕವಾಗಿ ಮಾತನಾಡುವ ಸಹಜ ವೇಗದಲ್ಲಿಯೇ ಉಚ್ಚರಿಸಿ. ನಂತರ ಇದನ್ನೇ ಈಗ ಕ್ರಮಪಲ್ಲಟಿಸಿ:
2) ಹ-ಅ ಹ-ಅ ಹ-ಅ ಹ-ಅ ಎಂದು ಉಚ್ಚರಿಸಿ. ಸಾಮಾನ್ಯ ಮಾತನಾಡುವ ವೇಗದಲ್ಲಿಯೇ ಇದರ ಅಭ್ಯಾಸವನ್ನು ಪ್ರಯತ್ನಿಸಿ. ಈ ಬಾರಿ ನಿಮಗೆ ಮೊದಲು ಹೇಳಿದ ಕ್ರಮದಲ್ಲಿ ಹೇಳಿದಷ್ಟು ಸುಲಭವಾಗಿ ಹೇಳಲಾಗುವುದಿಲ್ಲ. ಗಮನವಿಟ್ಟು ಹೇಳಬೇಕಾದ ಅಗತ್ಯ ನಿಮ್ಮ ಅನುಭವಕ್ಕೆ ಬರುತ್ತದೆ. ಈ ಉಚ್ಚಾರಣೆ ಹಿಡೀತಕ್ಕೆ ಬರುವವರೆಗೂ ಅಭ್ಯಾಸ ಮುಂದುವರೆಸಿ. ನಂತರ (15 ಬಾರಿ ನಿರಂತರವಾಗಿ) ಈ ಕೆಳಗಿನವುಗಳನ್ನು ಲಯಬದ್ಧವಾಗಿ, ನೀವು ಮಾತನಾಡುವ ಸಹಜ ವೇಗದಲ್ಲಿಯೇ ಉಚ್ಚರಿಸಿ.
3) ಅಹಹ ಅಹಹ ಅಹಹ ಅಹಹ
4) ಅಹಹಹ ಅಹಹಹ ಅಹಹಹ ಅಹಹಹ
5)ಅರ ಹರ ಅರ ಹರ ಅರ ಹರ ಅರ ಹರ
6) ಹಳದಿ ಹಸಿರು ಹೂವಿನ ಹಾರ ಅರಸಿ ಅರಸಿ ಅಲೆದೆ.
7) ಹಾಲಸಮುದ್ರದ ಆಳದಲಿತ್ತು ಹಾಲಾಹಲ ಹರಿವು
8) ಹರಿದಿದೆ ಅರಿವೆ; ಅರಳಿದೆ ಅರಳು; ಹೊಳೆಯುತ್ತಿದೆ ಹರಳು
9) ಅನ್ನವಿಟ್ಟವರ ಹಂಗಿರಲಿ ಹಸಿವು ಹಿಂಗಿದ ಮೇಲೆ.
10) ಆಕಳು ಹಾಕಿದೆ ಹೆಣ್ಣುಗರು. ಇನ್ನೀಗ ಹೊಟ್ಟೆ ಹಗುರು.
11) ಅರಳು ಎಂದರೆ ಹರಳಲ್ಲ; ಹರಳು ಎಂದರೆ ಅರಳಲ್ಲ
12) ಆಲೂರಿನಲ್ಲಿ ಹಾಲು ಅತಿ ಅಗ್ಗವಂತೆ. ಹಾಲಾಳದಲ್ಲಿ ಆಲೂಗಡ್ಡೆ ಹಾಳಾಯಿತಂತೆ.
13) ಹಾಕಿದ ಅಕ್ಕಿಯ ತಿನ್ನುವ ಹಕ್ಕಿಯು ಹಿಕ್ಕೆಯ ಹಾಕುವುದು.
14) ಅಗ್ಗವಾಗಿಹ ಹಗ್ಗ ಹಿಡಿದು ಹಿಗ್ಗಲಿ ಬೇಡ ಹರಡಿರುವ ಹೆಜ್ಜೇನ ಗೂಡ ನೋಡು
15) ಅರಿಯೆ ಹರಿ; ಹರಿಯೆ ಅರಿ; ಹರಿಯ ಅರಿ; ಅರಿಯ ಹರಿ
II) ಪಲ್ಲಟ: ಅ-ಹ ಗಳು ಪಲ್ಲಟವಾಗುವಂತೆಯೇ ಇ-ಹಿ, ಉ-ಹು ಮತ್ತು ಎ-ಹೆ ಗಳು ಪರಸ್ಪರ ಪಲ್ಲಟವಾಗುವುದನ್ನು ನಾವು ಕಾಣುತ್ತೇವೆ. ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲೂ ಮೇಲಿನಂತೆಯೇ ಅಭ್ಯಾಸದ ಮಾದರಿಗಳನ್ನು ರೂಪಿಸಿಕೊಳ್ಳಿ:
1) ಇ-ಹಿ ಇ-ಹಿ ಇ-ಹಿ ಉ-ಹು ಉ-ಹು ಉ-ಹು
2) ಹಿ-ಇ ಹಿ-ಇ ಹಿ-ಇ ಹು-ಉ ಹು-ಉ ಹು-ಉ
3) ಇಹಿಹಿ ಇಹಿಹಿ ಇಹಿಹಿ ಉಹುಹು ಉಹುಹು ಉಹುಹು
4) ಹುಡುಗಿ ಹಿಟ್ಟಿಗೆ ಎಸರಿಟ್ಟಳು. ಹೇರಳವಾಗಿದೆ ಉಪ್ಪಿಟ್ಟು.; ಹೊತ್ತಾಗಿದೆ ಹಾಲು ಹೆಪ್ಪಿಟ್ಟು
5) ಉಳ್ಳಾಲದ ಹುಲ್ಲಿನ ಬಣವೆ ಹಸುಗಳ ಹಲ್ಲಿಗೆ ಸಾಲದು
6) ಉತ್ತರಿಸಿದ ಧ್ವನಿ ಹುತ್ತದೊಳಗಿದ್ದ ಉತ್ತಮನದ್ದು
7) ಉರುಳುತ್ತಿದೆ ಆ ಹುರುಳಿಯ ಮೂಟೆ ಹೊಸ್ತಿಲಿರುವ ಕಡೆಗೆ.
8) ಅಯ್ಯಯ್ಯೋ ಹೈಹಯರಾಯ ಬೈಯ್ತಾನೆ; ಎದುರಿಗೆ ಬಂದು ಹೆದರಿಸ್ತಾನೆ; ಎದುರು ಬಿದ್ರೆ ಹೆದರ್ತಾನೆ.
9) ಅಂಕಾಳಮ್ಮಂಗ್ ಹಂಕಾರಾಂದ್ರೆ ಹೂಂಕಾರ ಹಾಕೋದಾ?
10) ಹಂಪನಕಟ್ಟೆ ಅಂಬಾಬಾಯಿಗೆ ಹಿಗ್ಗೋ ಹಿಗ್ಗು. ಅಂದ್ಕೊಂಡ್ ಕೆಲ್ಸ ಆದ್ಮೇಲೆ ಹನುಮಂತನಿಗೆ ಹಿಪ್ಪೇತುಪ್ಪದ ದೀಪ ಹಚ್ತೀನಿ ಅಂತ ಹರಕೆ ಹೊತ್ಕೊಂಡಿದ್ಲಂತೇ? ಹೀ ಅಂತ ಹಲ್ಬಿಟ್ಕೊಂಡೇ ಹಚ್ಬೇಕೇ ಹಣತೇನ?
11) ಹೋಗ್ಲಿ ಬಾರೋ ಓಬಳಪ್ಪ. ಹೋತ ಹೊಳೇ ಕಡೆಗೆ ಓಡಿಹೋಗಿದೆ. ಹಾಗೂ ಹೀಗೂ ಮಾಡಿ ಹಿಡ್ಕೊಂಡ್ ಬರ್ತೀಯಾ ? ಹತ್ರೂಪಾಯಿ ಕೊಡ್ತೀನಿ.
III) ಉಚ್ಚಾರಣೆ ತೊಡಕು ನಿವಾರಣೆ: ಲಕಾರ ಮತ್ತು ರಕಾರಗಳು ಪುನರಾವರ್ತಿತ  ಆದಾಗ ಉಚ್ಚಾರಣೆ ತೊಡಕಾಗುತ್ತದೆ. ಆದನ್ನು ನಿವಾರಿಸಲು ಸ್ವಲ್ಪ ಹೆಚ್ಚಿನ ಪ್ರಯತ್ನವೇ ಬೇಕು. ಈ ಕೆಳಗಿನಂತೆ ಪ್ರಯತ್ನಿಸಬಹುದು.
1) ಅರೆ ಅರೆರೆ ಅರೆರೆರೆ ಅರೆರೆರೆರೆ
2) ಅಲೆ ಅಲೆಲೆ ಅಲೆಲೆಲೆ ಅಲೆಲೆಲೆಲೆ
3) ಕರಕರಕರಕರ, ಕರಖರಕರಖರ,  ಕರಖರಖರಕರ, ಖರಕರಕರಕರ, ಖರಕರಕರಖರ
4) ನಳಹಲಮಳೆಛಲ, ಬಳೆತಲೆಖಳಬಲಿ, ಅಳಿಬಲತಳಿಕುಲು, ಬೆಳೆಸೆಲೆಕುಳುಜಲ
(ಈ ರೀತಿಯ ವಿಭಿನ್ನಾಕ್ಷರಗಳನ್ನು ಸಂಯೋಜಿತವಾಗಿ ಉಚ್ಚರಿಸುವಾಗ, ನಾಲಿಗೆಯು ವೇಗವಾಗಿ ಮತ್ತು ಸರಾಗವಾಗಿ ಚಲಿಸಬೆಕಾಗುತ್ತದೆ. ನಾಲಿಗೆಯು ಸ್ಥಾನವನ್ನು ಬದಲಾಯಿಸಿಕೊಂಡು ಅಕ್ಷರ ಉಚ್ಚರಿಸಬೇಕಾದರೆ ನಿರಂತರವಾದ ಅಭ್ಯಾಸದ ಅವಶ್ಯಕತೆ ಇರುತ್ತದೆ. 
ನಾವು ಮಾನಸಿಕವಾಗಿ ಅದಕ್ಕೆ ಸಿದ್ಧರಾಗಿಲ್ಲದಿರುವುದು. ಭಾಷೆಯ ಉಚ್ಚಾರಣೆಯಲ್ಲಿ ತೊಂದರೆಯಾಗಲು ಮುಖ್ಯ ಕಾರಣವಾಗಿರುತ್ತದೆ. ನಿರಂತರವಾದ ಅಭ್ಯಾಸ ಈ ಅಗತ್ಯ ಮಾನಸಿಕ ಸಿದ್ಧತೆಯನ್ನು ನಮಗೆ ದೊರಕಿಸಿಕೊಡುತ್ತದೆ.)
ವರ್ಣಗಳ ವಿಭಿನ್ನ ಸಂಯೋಜನೆಗಳನ್ನು ತಡವರಿಸದೆ ಹೇಳುವಲ್ಲಿ ಮನಸ್ಸಿನದ್ದು ಮುಖ್ಯ ಪಾತ್ರ. ಲಿಪಿ ಮತ್ತು ಸ್ವನಗಳ ಸಂಬಂಧವನ್ನು ಕಣ್ಣೋಟ ಗ್ರಹಿಸಿದರೂ ಧ್ವನ್ಯಂಗಗಳು ಸಮರ್ಥವಾಗಿ ತಯಾರಾಗಿರದಿದ್ದರೆ ಉಚ್ಚಾರಣೆಗೆ ತೊಡಕಾಗುವುದು ಸಹಜವೇ. ನೋಟ, ಗ್ರಹಿಕೆ, ಉಚ್ಚಾರಣೆ, ಧ್ವನ್ಯಂಗಗಳ ಚಲನೆ -
ಈ ಎಲ್ಲವೂ ಸಂಯೋಜಿತವಾಗಿ ಆಗಬೇಕಾದ್ದರಿಂದ ಓದಬೇಕಾಗಿರುವ ಭಾಷೆಯ ಸಮರ್ಪಕ ಜ್ಞಾನ, ಅದರ ಸ್ವನಗಳ ಉಚ್ಚಾರಣೆಯ ಸೂಕ್ಷ್ಮಗಳು, ಓದುತ್ತಿರುವ ವಾಕ್ಯದ ಅರ್ಥ ಮತ್ತು ಸಂದರ್ಭಗಳ ಸ್ಪಷ್ಟ ಜ್ಞಾನ ಓದುವವನಿಗೆ ಇದ್ದಾಗಲಷ್ಟೇ ಉಚ್ಚಾರಣೆ ಸಹಜವಾಗಿರುತ್ತದೆ ಮತ್ತು ಇತರರೂ ಸವಿಯುವಂತಿರುತ್ತದೆ.
–ಮಾಹಿತಿಗೆ: 9986001369
(ಮುಂದಿನವಾರ: ಇನ್ನಷ್ಟು ಅಭ್ಯಾಸದ ಮಾದರಿಗಳು)

ಕೆಲಸಕ್ಕಿದೆ ನೂರು ದಾರಿ

ಯಾವುದೋ ಕಾರಣಕ್ಕೆ ಓದು ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಅಥವಾ ಓದಲು ಆಸಕ್ತಿಯೂ ಇಲ್ಲ ಎಂದಿಟ್ಟುಕೊಳ್ಳಿ. ಅದಕ್ಕೆಂದು ಕೈ ಕಟ್ಟಿ ಕೂರಬೇಕಿಲ್ಲ. ಜೀವನೋಪಾಯಕ್ಕೆ ಅಗತ್ಯವಾದ ಉದ್ಯೋಗ ಪಡೆಯಲು ನೂರಾರು ಅವಕಾಶವಿದೆ.
ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಮುಗಿಸಿದ ನಂತರ ಮುಂದೆ ಓದಲು ಸಾಧ್ಯವಾಗದಿದ್ದವರಿಗೆಂದೇ ಹುಟ್ಟಿಕೊಂಡ ವೃತ್ತಿಪರ ಕೋರ್ಸ್‌ಗಳಿಗೇನೂ ಕಡಿಮೆಯಿಲ್ಲ. ಆದರೆ ಹಣದ ಕೊರತೆಯಿಂದ ವೃತ್ತಿಪರ ಕೋರ್ಸ್‌ಗಳತ್ತ ಮುಖ ಮಾಡಿದವರಿಗೆ ಶುಲ್ಕ ದುಬಾರಿ ಎನಿಸಬಹುದು.
ಅದಕ್ಕೆಂದೇ ಬಡ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಜನಾಂಗ, ಗ್ರಾಮಾಂತರ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಡಿಮೆ ಶುಲ್ಕದಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿದೆ ಬೆಂಗಳೂರಿನ ಸೆಂಟ್ ಜೋಸೆಫ್ ಕಮ್ಯುನಿಟಿ ಕಾಲೇಜು. ಇದುವರೆಗೂ ಮ್ಯಾನೇಜ್ಮೆಂಟ್ ಕೋರ್ಸ್‌ಗಳಲ್ಲಿ ಮಾತ್ರ ಅವಕಾಶಗಳಿದ್ದ ಇಲ್ಲಿ ಈ ಬಾರಿ ಯುಜಿಸಿ (ವಿಶ್ವವಿದ್ಯಾಲಯ ಅನುದಾನಿತ ಆಯೋಗ) ಅಡಿಯಲ್ಲಿ ಹಲವು ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ.
ವಿವಿಧ ಕೋರ್ಸುಗಳು
ಡಿಪ್ಲೊಮಾ ಕೋರ್ಸುಗಳು ಹತ್ತು ತಿಂಗಳ ಅವಧಿಯದ್ದಾಗಿದ್ದು, ಮಾಹಿತಿ ತಂತ್ರಜ್ಞಾನ ಪೂರಿತ ಸೇವೆಯ ಡಿಪ್ಲೊಮಾದಲ್ಲಿ ಕಚೇರಿ ನಿರ್ವಹಣೆ, ಅಡ್ವಾನ್ಸ್‌ ಕಂಪ್ಯೂಟರ್ ಅಪ್ಲಿಕೇಶನ್, ಹಣಕಾಸಿನ ಲೆಕ್ಕಾಚಾರ, ಮಾನವ ಸಂಪನ್ಮೂಲ ನಿರ್ವಹಣೆ ವಿಷಯಗಳನ್ನು ಒಳಗೊಂಡಿರುತ್ತದೆ. ರಿಟೇಲ್ ಮ್ಯಾನೇಜ್ಮೆಂಟ್‌ ಡಿಪ್ಲೊಮಾದಲ್ಲಿ ರಿಟೇಲ್ ವ್ಯವಹಾರ, ರಿಟೇಲ್ ಮರ್ಚಂಡೈಸಿಂಗ್, ಮಾರ್ಕೆಟಿಂಗ್, ಮ್ಯಾನೇಜ್ಮೆಂಟ್ ವಿಷಯಗಳನ್ನು ಬೋಧಿಸಲಾಗುತ್ತದೆ.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಡಿಪ್ಲೊಮಾದಲ್ಲಿ ಬೇಸಿಕ್ ಎಲೆಕ್ಟ್ರಾನಿಕ್ಸ್‌್ ಇಂಡಸ್ಟ್ರಿಯಲ್ ಪವರ್ ಅಪ್ಲಿಕೇಶನ್, ಮೊಬೈಲ್ ಸರ್ವಿಸ್ ವಿಷಯಗಳನ್ನು ಒಳಗೊಂಡಿರುತ್ತದೆ. ಡಿಪ್ಲೊಮಾ ಇನ್ ಬ್ಯೂಟಿ ಕಲ್ಚರ್‌ನಲ್ಲಿ ಹೇರ್ ಡ್ರೆಸಿಂಗ್, ಮಸಾಜ್, ಫೇಶಿಯಲ್, ಬ್ಯೂಟಿ ಥೆರಪಿಸ್ಟ್‌ಗಳನ್ನು ಹೇರ್ ಕಲರಿಸ್ಟ್‌, ಮೇಕಪ್ ಆರ್ಟಿಸ್ಟ್‌ ಹೀಗೆ ಹಲವು ವಿಷಯಗಳು ಇರುತ್ತವೆ.
ಹೋಟೆಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾದಲ್ಲಿ ಆಹಾರ ಉತ್ಪಾದನೆ, ಬೇಕರಿ ಉತ್ಪಾದನೆ, ಮನೆ ನಿರ್ವಹಣೆ ಮತ್ತು ಅತಿಥಿ ಸತ್ಕಾರ, ಕಚೇರಿ ನಿರ್ವಹಣೆ ಹಾಗೂ ಹಣಕಾಸಿನ ನಿರ್ವಹಣೆಯ ಹಲವು ತಂತ್ರಗಳನ್ನು ಹೇಳಿಕೊಡಲಾಗುತ್ತದೆ. ಎಂಟನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ಮುಗಿಸಿದವರು ಈ ಡಿಪ್ಲೊಮಾ ತರಗತಿಗಳಿಗೆ ಅರ್ಹರು. ನೇರವಾಗಿ ಹತ್ತನೇ ಹಾಗೂ ಪಿಯುಸಿ ಪರೀಕ್ಷೆಯನ್ನು ಬರೆಯುವವರಿಗೆ ಪ್ರತಿದಿನ 1-2 ಗಂಟೆ ಪಾಠ ನಡೆಯುತ್ತವೆ.
  ಪಿಯುಸಿ ಮುಗಿದಿರುವ ವಿದ್ಯಾರ್ಥಿಗಳಿಗೆಂದೇ ‘ಡಿಪ್ಲೊಮಾ ಇನ್ ಇನ್‌ಫರ್ಮೇಶನ್ ಟೆಕ್ನಾಲಜಿ ಎನೆಬಲ್ಡ್‌ ಸರ್ವೀಸ್‌’ನಲ್ಲಿ ಎರಡು ಸೆಮಿಸ್ಟರ್‌ಗಳಲ್ಲಿ ಪಠ್ಯವಿರುತ್ತದೆ. ಉತ್ತಮ ಉದ್ಯೋಗಕ್ಕೆ ಅವಶ್ಯಕವಾಗಿರುವ ಸಂವಹನ ಭಾಷೆ ಇಂಗ್ಲಿಷ್,  ಮಾನವ ಸಂಪನ್ಮೂಲ ವಿಭಾಗದ ಪರಿಚಯ, ಬ್ಯಾಂಕಿಂಗ್, ಹಣಕಾಸು ನಿರ್ವಹಣೆ, ಕಂಪ್ಯೂಟರ್ ಅಪ್ಲಿಕೇಶನ್ಸ್‌, ಮೈಕ್ರೋ ಎಕನಾಮಿಕ್ಸ್‌, ಟ್ಯಾಲಿ, ಬಿಸಿನೆಸ್ ಆರ್ಗನೈಸೇಷನ್ ಅಂಡ್ ಮ್ಯಾನೇಜ್ಮೆಂಟ್ ಹೀಗೆ ಹಲವು ವಿಷಯಗಳನ್ನು ಒಳಗೊಂಡಿರುತ್ತವೆ. ಇದೇ ರೀತಿ, ಡಿಪ್ಲೊಮಾ ಇನ್ ರೀಟೇಲ್ ಮ್ಯಾನೇಜ್ಮೆಂಟ್‌ ಕೂಡ ಕೆಲಸಕ್ಕೆ ಅರ್ಹವಾದ ಮೂಲ ತಿಳಿವಳಿಕೆಯನ್ನು ಒದಗಿಸಿಕೊಡುತ್ತದೆ.
ಸರ್ಟಿಫಿಕೇಟ್ ಕೋರ್ಸ್‌ಗಳು
ಕೇವಲ 40 ದಿನಗಳ ಕೋರ್ಸ್‌ಗಳನ್ನೂ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇಂದಿನ ಮೂಲ ಔದ್ಯೋಗಿಕ ಅವಶ್ಯಕತೆಯಾದ ಬಿಸಿನೆಸ್ ಪ್ರಾಸೆಸ್ ಔಟ್‌ ಸೋರ್ಸಿಂಗ್‌ ಹಾಗೂ ರೀಟೀಲ್ ಸರ್ವೀಸ್‌ ವಿಷಯಗಳಲ್ಲಿ ಈ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಇವಕ್ಕೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ.
‘2005ರಿಂದಲೇ ಈ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಲಾಗಿತ್ತು. ಈ ಬಾರಿ ಯುಜಿಸಿ ಅಡಿಯಲ್ಲಿ ಹಲವು ಅವಕಾಶಗಳನ್ನು ಬಡ ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪರಿಚಯಿಸಲಾಗಿದೆ. ವರ್ಷಕ್ಕೆ 150 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಯುಜಿಸಿ ಕೋರ್ಸುಗಳ ತರಗತಿಗಳು ಇದೇ ಜೂನ್ 21 ರಿಂದ ಹಾಗೂ ಡಿಪ್ಲೊಮಾ  ತರಗತಿಗಳು ಜುಲೈನಲ್ಲಿ ಆರಂಭಗೊಳ್ಳಲಿವೆ. ಕ್ಯಾಂಪಸ್ ಆಯ್ಕೆಯ ಅವಕಾಶವಿರುವುದು ಎಷ್ಟೋ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ’ ಎನ್ನುತ್ತಾರೆ ಸೆಂಟ್ ಜೋಸೆಫ್ ಕಮ್ಯುನಿಟಿ ಕಾಲೇಜಿನ ನಿರ್ದೇಶಕ ಮೆಲ್ವಿನ್ ಎ.ಲೋಬೊ ಎಸ್‌.ಜೆ.
(ಮಾಹಿತಿಗೆ: 080-42110279)

ದಾರ ಕಟ್ಟದೇ ಮಂಜು ಮೇಲೆತ್ತು

ವಿಧಾನ:
1. ಮಂಜುಗಡ್ಡೆಯ ದೊಡ್ಡ ತುಂಡೊಂದನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿಡಿ.
2. ಚಿತ್ರದಲ್ಲಿ ತೋರಿಸಿದಂತೆ ಮಂಜುಗಡ್ಡೆಯ ಮಧ್ಯದಲ್ಲಿ ದಾರವನ್ನಿಡಿ.
3. ಮಂಜುಗಡ್ಡೆಯ ಮೇಲಿರುವ ದಾರದ ಮೇಲೆ ಸ್ವಲ್ಪ ಉಪ್ಪು ಹಾಕಿ.
4. ಸ್ವಲ್ಪ ಸಮಯದ ನಂತರ ಸಾವಕಾಶವಾಗಿ ಒಂದು ದಾರದ ತುದಿಯನ್ನು ಹಿಡಿದು ಮೇಲೆತ್ತಿ.
ಪ್ರಶ್ನೆ:
1. ಉಪ್ಪು ಹಾಕದೆ, ಕೇವಲ ದಾರವನ್ನು ಮಂಜು ಗಡ್ಡೆಯ ಮೇಲಿಟ್ಟು ದಾರವನ್ನು ಮೇಲೆತ್ತಿದಾಗ ಏನಾಗು
ತ್ತದೆ?
2. ದಾರದ ಗುಂಟ ಉಪ್ಪನ್ನು ಹಾಕಿ, ಅನಂತರ ದಾರವನ್ನೆತ್ತಿದಾಗ ಏನಾಗುತ್ತದೆ, ಏಕೆ?
3. ಯಾವ ತಾಪಮಾನದಲ್ಲಿ ಮಂಜುಗಡ್ಡೆ ಕರಗುತ್ತದೆ ?

ಉತ್ತರ:
1. ಮಂಜುಗಡ್ಡೆ ದಾರಕ್ಕೆ ಅಂಟಿಕೊಳ್ಳುವುದಿಲ್ಲ.
2. ಉಪ್ಪು ನೀರಿನ ದ್ರವದ ಬಿಂದು (Melting Point) ಹಾಗೂ ಘನೀಕರಣ ಬಿಂದು (Freezing Point) ಶುದ್ಧ ನೀರಿಗಿಂತ ಕಡಿಮೆ.  ಆದ್ದರಿಂದ ದಾರದ ಮೇಲೆ ಉಪ್ಪನ್ನು ಹಾಕಿದಾಗ ಅದರ ಪಕ್ಕದಲ್ಲಿಯ ಮಂಜುಗಡ್ಡೆ ಕರಗಿ ನೀರಾಗುತ್ತದೆ ಹಾಗೂ ದಾರ ನೀರಿನಲ್ಲಿ ಮುಳುಗುತ್ತದೆ. ಸ್ವಲ್ಪ ಸಮಯದಲ್ಲಿಯೇ ಕರಗಿದ ಮಂಜುಗಡ್ಡೆ       ಗಟ್ಟಿಯಾಗುತ್ತದೆ. ದಾರ ಮಂಜುಗಡ್ಡೆಗೆ ಗಟ್ಟಿಯಾಗಿ ಅಂಟಿಕೊಳ್ಳೊತ್ತದೆ. ದಾರದ ಒಂದು ತುದಿಯನ್ನು ಹಿಡಿದು ಮೇಲೆತ್ತಿದಾಗ ಮಂಜುಗಡ್ಡೆಯೂ ಮೇಲೇಳುತ್ತದೆ.
3.  ೦ (ಸೊನ್ನೆ ) ಡಿಗ್ರಿ ಸೆಲ್ಸಿಯಸ್‌ನಲ್ಲಿ  ಮಂಜುಗಡ್ಡೆ ಕರಗುತ್ತದೆ.
ತಂಪು ದೇಶಗಳಲ್ಲಿ ಛಳಿಗಾಲದಲ್ಲಿ ರಸ್ತೆಗಳು ಮಂಜುಗಡ್ಡೆಯಿಂದ ಆವೃತವಾಗಿದ್ದರೆ, ವಾಹನ ನಡೆಸುವುದು ಕಠಿಣ. ಮಂಜುಗಡ್ಡೆಯ ಮೇಲೆ ವಾಹನದ ಭಾರ ಬೀಳುವುದರಿಂದ ನೀರಿನ ಘನೀಕರಣ ಬಿಂದು ತಗ್ಗಿ  ಟೈರ್‌ಗಳ ಕೆಳಗಿನ ಮಂಜುಗಡ್ಡೆ ಕರಗಿ ನೀರಾಗುತ್ತದೆ. ಆಗ ವಾಹನಗಳು ಜಾರಿ ಬೀಳುತ್ತವೆ. ಮಂಜುಗಡ್ಡೆಯ ಮೇಲೆ ಉಪ್ಪು ಸುರುವುದರಿಂದ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗುತ್ತದೆ.  ಆಗ ವಾಹನಗಳು ಮಂಜುಗಡ್ಡೆಯ ಮೇಲೆ ಚಲಿಸಿದರೂ ಕೂಡ ಮಂಜುಗಡ್ಡೆ ಮತ್ತೆ ಕರಗುವುದಿಲ್ಲ. ಹೀಗಾಗಿ ವಾಹಗಳು ಸರಳವಾಗಿ ಚಲಿಸುತ್ತವೆ.

ಚೆರಿ ಗುಂಡು ಜಾರಿದ್ದೇಕೆ?

ಬೇಕಾಗುವ ಸಾಮಗ್ರಿಗಳು: ಒಂದೇ ಅಳತೆಯ ಸ್ಟೀಲ್, ಅಲ್ಯೂಮಿ­ನಿಯಂ ಹಾಗೂ ಪ್ಲಾಸ್ಟಿಕ್ ಚಮಚಗಳು, ಬೀಕರ್, ಬಿಸಿ ನೀರು, ಮೋಂಬತ್ತಿ, 3 ಚಿಕ್ಕ ಚೆರಿ ಗುಂಡುಗಳು.
ವಿಧಾನ: ಒಂದೇ ಅಳತೆಯ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಚಮಚಗಳನ್ನು ತೆಗೆದುಕೊಳ್ಳಿ. ಚಿತ್ರದಲ್ಲಿ ತೋರಿಸಿದಂತೆ ಮೂರೂ ಚಮಚಗಳ ಹಿಡಿಕೆಗಳ ತುದಿಯ ಕಡೆಗೆ ಮೇಣವನ್ನು ಉಪಯೋಗಿಸಿ, ಚಿಕ್ಕ ಚೆರಿ ಗುಂಡುಗಳನ್ನು ಅಂಟಿಸಿ. ಚಿತ್ರದಲ್ಲಿ ತೋರಿಸಿದಂತೆ ಮೂರೂ ಚಮಚಗಳನ್ನು ಏಕ ಕಾಲಕ್ಕೆ ಬಿಸಿ ನೀರಿರುವ ಗ್ಲಾಸಿನಲ್ಲಿಡಿ.
ಪ್ರಶ್ನೆ: ಚೆರಿ ಗುಂಡುಗಳಿಗೆ ಏನಾಗುತ್ತದೆ? ಯಾಕೆ?
ಉತ್ತರ: ಎಲ್ಲ ಲೋಹಗಳು ಒಳ್ಳೆಯ ಉಷ್ಣ ವಾಹಕಗಳು. ಅಲ್ಯೂಮಿನಿಯಂ ಉತ್ತಮ ಉಷ್ಣವಾಹಕ. ಇದರ ಮುಖಾಂತರ ಉಷ್ಣವು ತೀವ್ರ ಗತಿಯಲ್ಲಿ ವಹನವಾಗಿ ಮೋಂಬತ್ತಿಯ ಮೇಣವನ್ನು ಕರಗಿಸುತ್ತದೆ. ಹೀಗಾಗಿ ಇದಕ್ಕೆ ಅಂಟಿಸಿದ ಲೋಹದ ಗುಂಡು ಮೊದಲು ಕೆಳಗೆ ಬೀಳುತ್ತದೆ. ಸ್ಟೀಲ್ ಸಂಯುಕ್ತ ಲೋಹ. ಇಲ್ಲಿ ಉಷ್ಣವು ಸ್ವಲ್ಪ ಸಾವಕಾಶವಾಗಿ ವಹನವಾಗುತ್ತದೆ. ಆದ್ದರಿಂದ ಲೋಹದ ಗುಂಡು ಸ್ವಲ್ಪ ತಡವಾಗಿ ಕಳಚಿ ಬೀಳುತ್ತದೆ. ಪ್ಲಾಸ್ಟಿಕ್ ಉಷ್ಣದ ಅವಾಹಕ/ಮಂದವಾಹಕ. ಇದಕ್ಕೆ ಅಂಟಿಸಿದ ಲೋಹದ ಗುಂಡು ಕಳಚುವುದಿಲ್ಲ. ಆದ್ದರಿಂದ ಪ್ರೆಶರ್ ಕುಕ್ಕರ್‌ಗಳಿಗೆ ಪ್ಲಾಸ್ಟಿಕ್ ಹಿಡಿಕೆಯನ್ನು ಜೋಡಿಸಿರುತ್ತಾರೆ. ಪಾತ್ರೆಗಳಲ್ಲಿಯ ಬಿಸಿ ಪದಾರ್ಥವನ್ನು ಕಲಕಿಸುವಾಗ ಮರದ ಸೌಟುಗಳನ್ನು ಬಳಸುವುದೂ ಉಂಟು. ಯಾಕೆಂದರೆ ಮರವೂ ಕೂಡ ಉಷ್ಣದ ಮಂದವಾಹಕ.

ಬದುಕು ಕಟ್ಟಿಕೊಡುವ ಕೆಲವು ಕೋರ್ಸುಗಳು

ಹಲವಾರು ಕಾರಣಗಳಿಂದ ಅನೇಕ ವಿದ್ಯಾರ್ಥಿಗಳು ಪಿಯು ಅಥವಾ ಡಿಪ್ಲೊಮಾ ಶಿಕ್ಷಣವನ್ನು ಪೂರ್ತಿಗೊಳಿಸದೆ ಮಧ್ಯದ್ಲಲಿಯೇ ಮೊಟಕುಗೊಳಿಸಿ ನಂತರ ಪರಿತಪಿಸುತ್ತಿರುತ್ತಾರೆ.
ಇಂತಹ ವಿದ್ಯಾರ್ಥಿಗಳು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ್ಲಲಿ ಲಭ್ಯವಿರುವ ವೃತ್ತಿಪರ ಕೋರ್ಸ್‌ಗಳ್ಲಲಿ ತಮ್ಮ ಹವ್ಯಾಸ ಮತ್ತು ಆಸಕ್ತಿಗೆ ಅನುಗುಣವಾದ ಔದ್ಯೋಗಿಕ ಕೋರ್ಸ್‌ಗಳ ಅಧ್ಯಯನ ಮಾಡುವ ಮೂಲಕ ಬದುಕು ರೂಪಿಸಿಕೊಳ್ಳಬಹುದು.
ಇನ್ನು ಬಹುತೇಕ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ / ಪಿಯುನಲ್ಲಿ ಫೇಲಾಗುವುದು ಮತ್ತು ಕಡಿಮೆ ಅಂಕ ಪಡೆಯುವುದು ಕೂಡ ಭವಿಷ್ಯ ಕೊನೆಗೊಡಂತೆ ಎಂದು ಭಾವಿಸುತ್ತಾರೆ. ಕೀಳಿರಿಮೆಯಿಂದ ಬಳಲುವ ಇಂತಹ ವಿದ್ಯಾರ್ಥಿಗಳ ಬಾಳಿಗೆ ಭರವಸೆ ತುಂಬುವಂತಹ ಹತ್ತು ಹಲವು ಉತ್ತಮ ಕೋರ್ಸ್‌ಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿರುವ ಕೋರ್ಸ್‌ಗಳು ಇಂತಿವೆ...
ಅಪ್ಯಾರಲ್ ಟ್ರೈನಿಂಗ್ ಆಂಡ್ ಡಿಸೈನ್ ಕೋರ್ಸ್‌ಗಳು:
1. ಅಪ್ಯಾರಲ್ ಪ್ಯಾಟರ್ನ್ ಮೇಕಿಂಗ್ (ಎಪಿಎಂ) ಕೋರ್ಸ್: 6 ತಿಂಗಳ ಅವಧಿ
2. ಇಂಡಸ್ಟ್ರಿಯಲ್ ಸೋಯಿಂಗ್ ಮಷಿನ್ ಟೇಕ್ನಿಷಿಯನ್ (ಐಎಸ್‌ಎಂಟಿ) ಕೋರ್ಸ್: 4 ತಿಂಗಳ ಅವಧಿ
3. ಗಾರ್ಮೆಂಟ್ ಕನ್‌ಸ್ಟ್ರಕ್ಷನ್ ಟೆಕ್ನಿಕ್ಸ್ (ಜಿಸಿಟಿ): 4 ತಿಂಗಳು
4. ಇಂಡಸ್ಟ್ರಿಯಲ್ ಸೋಯಿಂಗ್ ಮಷಿನ್ ಆಪರೇಷನ್ (ಐಎಸ್‌ಎಂಓ): 3 ತಿಂಗಳ ಅವಧಿ
ಭಾರತ ಸರ್ಕಾರದ ಜವಳಿ ಸಚಿವಾಲಯದ ಉಡುಪು ರಫ್ತು ಉತ್ತೇಜನ ಪರಿಷತ್‌ನಿಂದ (ಅಪೆಕ್) ಪ್ರಾಯೋಜಿತ ಈ ಕೋರ್ಸ್‌ಗಳು ‘ಅಪ್ಯಾರಲ್ ಟ್ರೈನಿಂಗ್ ಆಂಡ್ ಡಿಸೈನ್ ಸೆಂಟರ್’ನಲ್ಲಿ (ಎಟಿಡಿಸಿ) ಲಭ್ಯವಿದೆ. ಮಾಹಿತಿಗೆ: 080–235 72181, 2337 3221. ಬೆಂಗಳೂರು ಸೇರಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಮದ್ದೂರು ಮತ್ತು ಗದಗಿನಲ್ಲಿ ಎಟಿಡಿಸಿ ಕೇಂದ್ರಗಳಿವೆ.
ಬಹುವಿಧ ತರಬೇತಿ ಕೋರ್ಸ್‌ಗಳು:
1. ಖಾದಿ ಟೆಕ್ನಾಲಜಿ ಕೋರ್ಸ್: 9 ತಿಂಗಳ ಅವಧಿ
2. ಫುಟ್‌ವೇರ್ ಆಂಡ್ ಲೆದರ್ ಗೂಡ್ಸ್ ಕೋರ್ಸ್: 6 ತಿಂಗಳು
3. ಮಾರ್ಕೆಟಿಂಗ್ ಅಸಿಸ್ಟನ್ಸ್ ಕೋರ್ಸ್: 3 ತಿಂಗಳ ಅವಧಿ
4. ಫ್ರೂಟ್ ಆಂಡ್ ವೆಜಿಟೆಬಲ್ ಪ್ರೋಸೆಸಿಂಗ್ ಕೋರ್ಸ್: 2 ತಿಂಗಳ ಅವಧಿ
5. ಪೇಪರ್ ಕನ್ವರ್ಷನ್ ಕೋರ್ಸ್: 2 ತಿಂಗಳ ಅವಧಿ
6. ಮಾಸ್ಟರ್ ಪಾಟರ್ ಕೋರ್ಸ್: 5 ತಿಂಗಳ ಅವಧಿ
7. ಬೇಕರಿ ಕೋರ್ಸ್: 2 ತಿಂಗಳ ಅವಧಿ
ಸ್ವಉದ್ಯೋಗ ತರಬೇತಿ ನೀಡುವ ಈ ಕೋರ್ಸ್‌ಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ತರಬೇತಿ ವೇಳೆ ಪ್ರತಿ ತಿಂಗಳಿಗೆ ಸ್ಥಳೀಯರಿಗೆ ರೂ 800 ಮತ್ತು ಹೊರಗಿನ ಅಭ್ಯರ್ಥಿಗಳಿಗೆ ರೂ 500 ಭತ್ಯೆ ನೀಡಲಾಗುತ್ತದೆ.
ಮಾಹಿತಿಗೆ: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ಬಹು ವಿಧ ತರಬೇತಿ ಕೇಂದ್ರ, ದೂರವಾಣಿ ನಗರ ಬೆಂಗಳೂರು. 080–25650285
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ  ಕೋರ್ಸ್‌ಗಳು:
1. ಆರ್ಕಿಟೆಕ್ಚರಲ್ ಡ್ರಾಫ್ಟ್‌ಮನ್‌ಶಿಫ್ ಕೋರ್ಸ್: 2 ವರ್ಷ
2. ಡ್ರೆಸ್ ಮೇಕಿಂಗ್ ಕೋರ್ಸ್: 1 ವರ್ಷ
3. ಎಲೆಕ್ಟ್ರಾನಿಕ್ ಮೆಕ್ಯಾನಿಕ್: 2 ವರ್ಷ ಅವಧಿ
4. ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್: 2 ವರ್ಷ ಅವಧಿ
ಈ ಮೇಲ್ಕಂಡ ಎಲ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್ ತಿಂಗಳ್ಲಲಿ ಅರ್ಜಿ ಆಹ್ವಾನಿಸಲಾಗುತ್ತದೆ. ವಿವಿಧ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ.
ಮಾಹಿತಿಗೆ: ಮಹಿಳಾ ಪ್ರಾದೇಶಿಕ ಔದ್ಯೋಗಿಕ ಶಿಕ್ಷಣ ತರಬೇತಿ ಸಂಸ್ಥೆ. ಹೊಸೂರು ರಸ್ತೆ, ಬೆಂಗಳೂರು. 080–26561955/26566348
ಉದ್ಯೋಗಾವಕಾಶಗಳು
ಡಿಪ್ಲೊಮಾ ಉತ್ತಮ ರೀತಿಯಲ್ಲಿ ಪೂರೈಸುವ ವಿದ್ಯಾರ್ಥಿಗಳಿಗಂತೂ ಇಂದು ಉಡುಪು ತಯಾರಿಕೆ ಉದ್ಯಮ, ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಸುವ ಕೈಗಾರಿಕೆಗಳಲ್ಲಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೇರಳವಾದ ಉದ್ಯೋಗಾವಕಾಶಗಳಿವೆ.
ಇನ್ನು, ಡಿಪ್ಲೊಮಾ ಇನ್ ಆರ್ಕಿಟೆಕ್ಚರಲ್ ಡ್ರಾಫ್ಟ್‌ಮನ್‌ಶೀಫ್‌ನಂತಹ ಕೋರ್ಸ್‌ಗಳನ್ನು ಪೂರೈಸಿದವರಿಗೆ ಒಳಾಂಗಣ ವಿನ್ಯಾಸ ಕಂಪೆನಿ ಅಥವಾ ವಿನ್ಯಾಸಕಾರರ ಬಳಿ ಸಹಾಯಕ ಕೆಲಸಗಳು ದೊರೆಯುತ್ತವೆ. ಮುಂದೆ ಅವರು ತಮ್ಮದೇ ಸ್ವಂತ ಉದ್ಯಮ ಕೂಡ ಸ್ಥಾಪಿಸಬಹುದು.
ರಿಫ್ರೆಷರ್ ಮತ್ತು ಸರ್ಟಿಫಿಕೆಟ್ ಕೋರ್ಸ್‌ಗಳು:
1. ಬೇಕರಿ ಆಂಡ್ ಕನ್‌ಫೆಕ್ಷನರಿ ಕೋರ್ಸ್: 2 ತಿಂಗಳ ಅವಧಿ
2. ಫ್ರಂಟ್ ಆಫಿಸ್ ಮ್ಯಾನೇಜ್‌ಮೆಂಟ್ ಕೋರ್ಸ್:  6 ತಿಂಗಳು
3. ಹೌಸ್ ಕೀಪಿಂಗ್ ಕೋರ್ಸ್: ಒಂದು ವರ್ಷ ಕೋರ್ಸ್
4. ಕುಕರಿ ಕೋರ್ಸ್. 5. ಬೇಕರಿ ಕೋರ್ಸ್. 6. ರೆಸ್ಟೋರೆಂಟ್ ಸರ್ವಿಸ್ ಕೋರ್ಸ್. ಹೆಚ್ಚಿನ ಮಾಹಿತಿಗೆ: ಫುಡ್ ಕ್ರಾಫ್ಟ್ ಇನ್‌ಸ್ಟಿಟ್ಯೂಟ್ (ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ -ಐಎಚ್‌ಎಂ) ಎಸ್‌ಜೆಪಿ ಪಾಲಿಟೆಕ್ನಿಕ್ ಕ್ಯಾಂಪಸ್ ಶೇಷಾದ್ರಿ ರಸ್ತೆ, ಬೆಂಗಳೂರು. 080–22262960, 22386763
ಮತ್ಸ್ಯೋದ್ಯಮಕ್ಕೆ ಸಂಬಂಧಿತ ಕೋರ್ಸ್‌ಗಳು:
1. ರೆಫ್ರಿಜರೇಷನ್ ಟೆಕ್ನಿಷಿಯನ್ ಟ್ರೈನಿಂಗ್ ಕೋರ್ಸ್: 10 ತಿಂಗಳ ಅವಧಿ
2. ಟ್ರೈನಿಂಗ್ ಇನ್ ವೆಸಲ್ ನ್ಯಾವಿಗೇಟರ್ ಆಂಡ್ ಮರಿನ್ ಫಿಟರ್ ಟ್ರೆಡ್ ಕೋರ್ಸ್: 2 ವರ್ಷ ಅವಧಿ
ಈ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೂನ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಜುಲೈನಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.
ಮಾಹಿತಿಗೆ: ಇಂಟಿಗ್ರೆಟೆಡ್ ಫಿಷರಿಸ್ ಪ್ರೊಜೆಕ್ಟ್ಸ್ ಆಂಡ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಷರಿಸ್ ನಾಟಿಕಲ್ ಆಂಡ್ ಎಂಜನಿಯರಿಂಗ್ ಟ್ರೈನಿಂಗ್. ಫೈನ್ ಆರ್ಟ್ಸ್ ಅವೆನ್ಯೂ, ಕೊಚಿನ್ -682016 (www.cifnet.gov.in)
ಸೌಂದರ್ಯ ವರ್ಧಕ ಉದ್ಯಮಕ್ಕೆ ಸಂಬಂಧಿತ ಕೋರ್ಸ್‌ಗಳು:
1. ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಕಾಸ್ಮೆಟಾಲಜಿ ಕೋರ್ಸ್: 8 ತಿಂಗಳ ಅವಧಿ
2. ಡಿಪ್ಲೊಮಾ ಇನ್ ಹೆರ್ ಡಿಸೈನಿಂಗ್ ಕೋರ್ಸ್: 4 ತಿಂಗಳ ಅವಧಿ
3. ಸರ್ಟಿಫಿಕೆಟ್ ಆಂಡ್ ಡಿಪ್ಲೊಮಾ ಇನ್ ಬ್ಯೂಟಿ ಕಲ್ಚರ್ ಕೋರ್ಸ್: 2/4 ತಿಂಗಳ ಅವಧಿ
4. ಸರ್ಟಿಫಿಕೆಟ್ ಕೋರ್ಸ್ ಇನ್ ಪೆಡಿಕ್ಯೂರ್ ಆಂಡ್ ಮ್ಯಾನಿಕ್ಯೂರ್ ಕೋರ್ಸ್: ಒಂದು ತಿಂಗಳ ಅವಧಿ
5. ಸರ್ಟಿಫಿಕೆಟ್ ಕೋರ್ಸ್ ಇನ್ ಬಾಡಿ ಮಸಾಜ್ / ತೆರಪಿಸ್ ಕೋರ್ಸ್ : ಒಂದು ತಿಂಗಳ ಅವಧಿ
ಈ  ಕೋರ್ಸ್‌ಗಳನ್ನು ಪೂರೈಸಿದವರಿಗೆ ಇಂದು ಬ್ಯೂಟಿ ಪಾರ್ಲರ್‌ಗಳು, ಹೋಟೆಲ್‌ಗಳು, ಕಾಸ್ಮೆಟಿಕ್ ಉದ್ಯಮಗಳು, ಫ್ಯಾಶನ್ ಮತ್ತು ಸಿನಿಮಾ ಕ್ಷೇತ್ರಗಳ್ಲಲಿ ವಿಫುಲ ಉದ್ಯೋಗಾವಕಾಶಗಳಿವೆ. ಇಷ್ಟೇ ಅಲದೇ, ಸ್ವಂತದಾದ ಬ್ಯೂಟಿ ಸಲೂನ್ ಕೂಡ ತೆರೆಯಬಹುದು.
ಮಾಹಿತಿಗೆ: ವಿಎಲ್‌ಸಿಸಿ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಆಂಡ್ ಫಿಟ್‌ನೆಸ್ ಮ್ಯಾನೇಜ್‌ಮೆಂಟ್, ಬೆಂಗಳೂರು (www.vlccinstitute.com)
ಅಗ್ನಿ ಸುರಕ್ಷತಾ ವೃತ್ತಿಗೆ ಸಂಬಂಧಿತ ಕೋರ್ಸ್‌ಗಳು:
1. ಡಿಪ್ಲೊಮಾ ಇನ್ ಲಿಫ್ಟ್ ಟೆಕ್ನಾಲಜಿ ಕೋರ್ಸ್: 1 ವರ್ಷ
2. ಸರ್ಟಿಫಿಕೆಟ್ ಆಂಡ್ ಡಿಪ್ಲೊಮಾ ಕೋರ್ಸ್ ಇನ್ ಫೈರ್ ಆಂಡ್ ಸೆಫ್ಟಿ ಎಂಜಿನಿಯರಿಂಗ್ ಕೋರ್ಸ್: 6–12 ತಿಂಗಳು
3. ಸರ್ಟಿಫಿಕೆಟ್ ಕೋರ್ಸ್ ಇನ್ ಫೈಬರ್ ಆಫ್ಟಿಕ್ ಟೆಕ್ನಾಲಜಿ ಕೋರ್ಸ್
ಈ ಕೋರ್ಸ್‌ಗಳನ್ನು ಪೂರೈಸಿದವರಿಗೆ ಅನೇಕ ಕೈಗಾರಿಕೆಗಳು, ಕಾರ್ಪೋರೆಟ್ ಕಂಪೆನಿಗಳು ಸೇರಿದಂತೆ ವಿದೇಶಗಳ್ಲಲಿ ವಿಫುಲ ಉದ್ಯೋಗಾವಕಾಶಗಳಿವೆ.
ಮಾಹಿತಿಗೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೈರ್ ಎಂಜಿನಿಯರಿಂಗ್ (ಎನ್‌ಐಎಫ್‌ಇ) ಬೆಂಗಳೂರು (ದೇಶದಾದ್ಯಂತ ಇದರ ಶಾಖೆಗಳಿವೆ) -www.nifeindia.com
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲದ ಕೋರ್ಸ್‌ಗಳು:
1. ಡಿಪ್ಲೊಮಾ ಇನ್ ಡೈರಿ ಟೆಕ್ನಾಲಜಿ: ಒಂದು ವರ್ಷ ಅವಧಿ
2. ಡಿಪ್ಲೊಮಾ ಇನ್ ಮಿಟ್ ಟೆಕ್ನಾಲಜಿ: ಒಂದು ವರ್ಷ ಅವಧಿ
3. ಡಿಪ್ಲೊಮಾ ಇನ್ ವ್ಯಾಲ್ಯೂ ಅಡೆಡ್ ಪ್ರೋಡಕ್ಟ್ಸ್ ಫ್ರಮ್ ಫ್ರೂಟ್ಸ್ ಆಂಡ್ ವೆಜಿಟೆಬಲ್ಸ್: ಒಂದು ವರ್ಷ ಅವಧಿ
ಈ ಕೋರ್ಸ್‌ಗಳನ್ನು ಸೇರಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ಯಾಚುಲರ್ಸ್ ಪ್ರಿಪ್ರೆಟರಿ ಪ್ರೊಗಾಂ (ಬಿಪಿಪಿ) ಆಫ್ ಇಗ್ನೊಗೆ ಹಾಜರಾಗಬೇಕು.
ಮಾಹಿತಿಗೆ: ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿರ್ವಸಿಟಿ, ನವದೆಹಲಿ -www.ignou.ac.in
ವಿಮಾನಯಾನಕ್ಕೆ ಸಂಬಂಧಿತ ಕೋರ್ಸ್‌ಗಳು:
1. ಡಿಪ್ಲೊಮಾ ಇನ್ ಟ್ರಾವೆಲ್ ಆಂಡ್ ಟೂರಿಸಂ ಫೌಂಡೆಷನ್ ಕೋರ್ಸ್: 21 ತಿಂಗಳ ಅವಧಿ.
ಈ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಮತ್ತು ವಿಮಾನಯಾನ, ಟ್ರಾವೆಲ್ ಏಜೆನ್ಸಿ, ಏರಲೈನ್ಸ್‌ಗಳು ಮತ್ತು ಕಾರ್ಪೋರೆಟ್ ಕಂಪೆನಿಗಲ್ಲಿ ಸೇವಾ ಕ್ಷೇತ್ರಗಳಲ್ಲಿ ಅವಕಾಶಗಳಿವೆ.
ವಿಶ್ವದಾದ್ಯಂತ ಇರುವ ವಿಮಾನ ನಿಲ್ದಾಣಗಳ್ಲಲಿ ಟಿಕೆಟ್ ವಿತರಕರಾಗಿ, ಪ್ರಯಾಣಿಕರ ತಪಾಸಕರಾಗಿ, ಕಾರ್ಗೊ ನಿರ್ವಾಹಕರಾಗಿ... ಹೀಗೆ ಹತ್ತು ಹಲವು  ರೀತಿಯಲ್ಲಿ ನಿರ್ವಹಿಸಬಹುದಾದ ಉದ್ಯೋಗ ಅವಕಾಶಗಳಿವೆ. ಒಂದಕ್ಕಿಂತ ಹೆಚ್ಚು ಕೋರ್ಸ್‌ಗಳನ್ನು ಪೂರೈಸಿರುವ ಅಭ್ಯರ್ಥಿಗಳಿಗೆ ಇಲ್ಲಿ ಉತ್ತಮ ಭವಿಷ್ಯವಿದೆ.
ಮಾಹಿತಿಗೆ: ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಷಿಯೇಷನ್ (ಐಎಟಿಎ) (ಅಧಿಕೃತ ತರಬೇತಿ ಕೇಂದ್ರಗಳು ದೇಶದಾದ್ಯಂತ ಇವೆ) -www.iata.org
ಟೊಯೊಟಾ ತಾಂತ್ರಿಕ ಶಿಕ್ಷಣ ಸಂಸ್ಥೆ ಕೋರ್ಸ್‌ಗಳು:
1. ಆಟೋಮೊಬೈಲ್ ಅಸೆಂಬ್ಲಿ
2. ಆಟೋಮೊಬೈಲ್ ಪೆಂಟ್
3. ಆಟೋಮೊಬೈಲ್ ವೆಲ್ಡ್
4. ಮೆಕ್ಯಾಟ್ರಾನಿಕ್ಸ್
ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕಾದರೆ ವಿದ್ಯಾರ್ಥಿಯು ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ 50 ಮತ್ತು ಒಟ್ಟಾರೆ ಶೇ 50ರಷ್ಟು ಅಂಕ ಗಳಿಸಿರಬೇಕು. ವಯಸ್ಸು 15-18 ವರ್ಷಗಳ ಒಳಗಿರಬೇಕು. ಗ್ರಾಮೀಣ ಶಾಲೆಯಲ್ಲಿ ಓದಿರಬೇಕು. ಪ್ರವೇಶಕ್ಕಾಗಿ ಸಂಸ್ಥೆಯು ನಡೆಸುವ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ತರಬೇತಿ ಶಿಕ್ಷಣ ನೀಡಲಾಗುತ್ತದೆ. ಈ ವೇಳೆ ಭತ್ಯೆ ಕೂಡ ನೀಡಲಾಗುತ್ತದೆ.
ಮಾಹಿತಿಗೆ: ಸಂಪರ್ಕಿಸಿ- ಟೊಯೊಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್,  ಬಿಡದಿ ಕೈಗಾರಿಕಾ ಪ್ರದೇಶ, ರಾಮನಗರ ಜಿಲ್ಲೆ - 080–66292532/36.
ಯುವತಿಯರಿಗೆ ಸ್ಕಾಲರ್‌ಶಿಪ್‌
ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಂದ ಲೋರಿಯಾಲ್‌ ಇಂಡಿಯಾ ಸಂಸ್ಥೆಯು ವಿಶೇಷ ಸ್ಕಾಲರ್‌ಶಿಪ್ಗೆ ಅರ್ಜಿ ಆಹ್ವಾನಿಸಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ದೆಹಲಿ ಮತ್ತು ಎನ್‌ಸಿಆರ್ ನಿಂದ 12ನೇ ವರ್ಗದ ವಿಜ್ಞಾನ ವಿಭಾಗದ ಅಭ್ಯರ್ಥಿಗಳು ‘ವಿಜ್ಞಾನದಲ್ಲಿರುವ ಮಹಿಳೆಯರಿಗಾಗಿ’ ಸ್ಕಾಲರ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.
50 ಯುವತಿಯರಿಗೆ ನಾಲ್ಕು ವರ್ಷಗಳ ಅವಧಿಗೆ ತಲಾ ರೂ. 2.5 ಲಕ್ಷಗಳ ಸ್ಕಾಲರ್‌ಶಿಪ್ ನೀಡಲಾಗುವುದು. ಮಾನ್ಯತೆ ಪಡೆದ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಪಡೆಯಲು ಈ ಸ್ಕಾಲರ್‌ಶಿಪ್ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ಶೈಕ್ಷಣಿಕ ವರ್ಷದಲ್ಲಿ (ಮಾರ್ಚ್ 2014ಕ್ಕೆ ಮುಕ್ತಾಯವಾಗಿರುವುದು), 12ನೇ ವರ್ಗದ ಪರೀಕ್ಷೆಗಳಲ್ಲಿ ಪಿಸಿಎಂ/ಪಿಸಿಬಿಯಲ್ಲಿ ಕನಿಷ್ಠ 85% ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಯುವತಿಯರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬೇಕು. 31.05.2014ರಂದು 19 ವರ್ಷ ದಾಟಿರಬಾರದು.
www.foryoungwomeninscience.com ವೆಬ್‌ ತಾಣಕ್ಕೆ ಭೇಟಿ ಮಾಡಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡಿ, ಅರ್ಜಿ ಫಾರ್ಮುಗಳನ್ನು ಲೋರಿಯಾಲ್‌ ಇಂಡಿಯಾ, ಎ-ವಿಂಗ್, 8ನೇ ಮಹಡಿ, ಮ್ಯಾರಥಾನ್ ಫ್ಯೂಚರೆಕ್ಸ್, ಎನ್.ಎಂ.ಜೋಶಿ ಮಾರ್ಗ್, ಲೋವರ್ ಪರೇಲ್, ಮುಂಬೈ 400013ಕ್ಕೆ ಕಳುಹಿಸಬೇಕು. ಕೊನೆಯ ದಿನಾಂಕ ಜೂನ್ 30, 2014.
ಹೆಚ್ಚಿನ ಮಾಹಿತಿಗೆ 022–67003000 fywis@in.loreal.com ಈ ಸ್ಕಾಲರ್‌ಶಿಪ್ ವಿಜ್ಞಾನದ ಯಾವುದೇ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಲಭ್ಯವಿರುತ್ತದೆ: ವೈದ್ಯಕೀಯ, ಎಂಜಿನಿಯರಿಂಗ್, ಮಾಹಿತಿತಂತ್ರಜ್ಞಾನ, ಫಾರ್ಮಸಿ, ಬಯೋಟೆಕ್ನಾಲೊಜಿ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಇತರ ಪದವಿ ಕೋರ್ಸ್‌ಗಳು (ಬಿ.ಎಸ್‌ಸಿ.).
(ಮಾಹಿತಿಗೆ: ಅಮೀನ್ ಇ ಮುದಸ್ಸರ್ 080 41554225/9241778866 ಅಥವಾ www.after10thwhat.com/www.after12thwhat.com

ಆಗಸಕ್ಕೆ ಏಣಿ ಎಂಟಿಎಎಂ

ಮೈಸೂರಿನ ಮಹಾಜನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯು (ಎಂಟಿಡಿಐ) ಪ್ರಸಕ್ತ ವರ್ಷದಿಂದ ಪ್ರವಾಸೋದ್ಯಮ ಮತ್ತು ವಿಮಾನಯಾನ ನಿರ್ವಹಣೆ (ಮಾಸ್ಟರ್ ಆಫ್ ಟೂರಿಸಂ & ಏವಿಯೇಷನ್ ಮ್ಯಾನೇಜ್‌ಮೆಂಟ್–ಎಂಟಿಎಎಮ್) ವಿಷಯದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಕೋರ್ಸ್ ಆರಂಭಿಸುತ್ತಿದೆ. ಮೈಸೂರು ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ವಿಮಾನಯಾನ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಮಾನ್ಯತೆ ನೀಡಿದೆ. ಯಾವುದೆ ವಿಷಯದಲ್ಲಿ ಪದವಿ ಪಡೆದವರೂ ಈ ಸ್ನಾತಕೋತ್ತರ ಪದವಿಗೆ ಸೇರಲು ಅವಕಾಶ ಇದೆ.
(ವಿವರಗಳಿಗೆ: 0821–2582073, 2581013. ವೆಬ್‌ಸೈಟ್: mahajanatourism.com, tdi.mysore@gmail.com)

ಬೆಂಕಿ ಕಡ್ಡಿಯ ಜ್ವಾಲೆ

ಬೇಕಾಗುವ ಸಾಮಗ್ರಿಗಳು: ಮೂರು ಪ್ರನಾಳಗಳು, ಸತುವಿನ ತುಂಡು(Zn),  ಅಮೃತಶಿಲೆಯ  ಚೂರುಗಳು(CaCO3), ಹೈಡ್ರೊ ಕ್ಲೊರಿಕ್ ಆಮ್ಲ (HCl), ಪೊಟ್ಯಾಸಿಯಂ ಕ್ಲೊರೇಟ್(KClO3),  ಬೂದಿ, ಬೆಂಕಿ ಪೆಟ್ಟಿಗೆ,
ವಿಧಾನ: ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ. ಮೊದಲ  ಪ್ರನಾಳದಲ್ಲಿ ಸತುವಿನ ತುಂಡುಗಳನ್ನು ಹಾಗೂ ಎರಡನೆಯದರಲ್ಲಿ  ಅಮೃತಶಿಲೆಯ ಚೂರುಗಳನ್ನು ಹಾಕಿ ಅವಕ್ಕೆ ೫ ಸಿಸಿ ದುರ್ಬಲ ಹೈಡ್ರೊಕ್ಲೊರಿಕ್ ಆಮ್ಲವನ್ನು ಹಾಕಿ. 3ನೇ ಪ್ರನಾಳದಲ್ಲಿ ಸ್ವಲ್ಪ ಪೊಟ್ಯಾಸಿಯಂ ಕ್ಲೊರೇಟನ್ನು ಬೂದಿಯೊಂದಿಗೆ ಬೆರಸಿ ಹಾಕಿ.
ಪ್ರಶ್ನೆ:
1. ಮೊದಲ ಪ್ರನಾಳದ ಬಾಯಿಯನ್ನು ಹೆಬ್ಬೆರಳಿನಿಂದ ಮುಚ್ಚಿ ಜೋರಾಗಿ ಅಲುಗಾಡಿಸಿ. ತಕ್ಷಣ ಅದರ ಬಾಯಿ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿಬಿಟ್ಟು ನೋಡಿ. ಏನಾಯಿತು?
2. ಎರಡನೆಯ ಪ್ರನಾಳದ ಬಾಯಿಯ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿ ಬಿಡಿ. ಏನಾಯಿತು?
3. ಮೂರನೆಯ ಪ್ರನಾಳವನ್ನು ಕಾಯಿಸಿ, ಅನಂತರ ಅದರಲ್ಲಿ ಜ್ವಾಲೆ ರಹಿತ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಬಿಡಿ. ಏನಾಯಿತು? ಯಾಕೆ?
ಉತ್ತರ: 1. ಮೊದಲ ಪ್ರನಾಳದಲ್ಲಿ ಹೈಡ್ರೊಜನ್ ಅನಿಲವು ಬಿಡುಗಡೆ ಯಾಗುತ್ತದೆ. Zn+2 HCl → ZnCl2 + H2 ಹೈಡ್ರೊಜನ್ ದಹನಕಾರಿ ಅನಿಲವಾದ್ದರಿಂದ ಪ್ರನಾಳದ ಬಾಯಿಯ ಹತ್ತಿರ ಉರಿಯುವ ಬೆಂಕಿ ಕಡ್ಡಿ ಹಿಡಿದಾಗ ಸ್ಫೋಟದ ಶಬ್ದ ಬರುತ್ತದೆ.
2. ಎರಡನೆಯ ಪ್ರನಾಳದಲ್ಲಿ ಕಾರ್ಬನ್‌ಡೈಆಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ. CaCO3 + 2 HCl → CaCl2+CO2+H2O.
ಇದು ಬೆಂಕಿಯನ್ನು ಆರಿಸುತ್ತದೆ.
3. ಮೂರನೆಯ ಪ್ರನಾಳದಲ್ಲಿ ಆಕ್ಸಿಜನ್ ಅನಿಲ ಬಿಡುಗಡೆಯಾಗುತ್ತದೆ. ಇದು ದಹನ ಕ್ರಿಯೆಗೆ ಸಹಕಾರಿ. ಆದ್ದರಿಂದ ಬೆಂಕಿ ಕಡ್ಡಿ ಜ್ವಾಲೆಯಾಗಿ ಉರಿಯುತ್ತದೆ.

Anandraj n shivrajkumar